More

    ಶಕ್ತಿಪೀಠದಲ್ಲಿ ಸಂಪನ್ನಗೊಂಡ ಹಸಿಕರಗ; ವಿಶ್ವವಿಖ್ಯಾತ ಕರಗ ಮಹೋತ್ಸವಕ್ಕೆ ದಿನಗಣನೆ

    ಬೆಂಗಳೂರು : ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಕರಗ ಮಹೋತ್ಸವದ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳು ಸಾಗಿಕೊಂಡು ಬಂದಿವೆ. ಚೈತ್ರ ಪೌರ್ಣಿಮೆಯಂದು (ಏ.23) ಮಧ್ಯರಾತ್ರಿ ನಡೆಯಲಿರುವ ಕರಗ ಮಹೋತ್ಸವದ ಪೂರ್ವಭಾವಿಯಾಗಿ ಭಾನುವಾರ ಬೆಳಗಿನ ಜಾವ 3 ಗಂಟೆಗೆ ಕರಗಕುಂಟೆಯ ಶಕ್ತಿಪೀಠದಲ್ಲಿ ಪರಂಪರೆಯಲ್ಲಿ ಹಸಿಕರಗ ಮಹೋತ್ಸವವನ್ನು ಯಶಸ್ವಿಯಾಗಿ ಸಂಪನ್ನಗೊಂಡಿತು.

    ಆದಿಶಕ್ತಿ ದ್ರೌಪದಿದೇವಿಯಿಂದ ಶಕ್ತಿಯ ಆವಾಹನೆ ಮಾಡಿಕೊಳ್ಳುವ ವಿಧಿಯೊಂದಿಗೆ ‘ಹಸಿಕರಗ’ ಆರಂಭವಾಗಿದ್ದು, ಸಂಪಂಗಿ ಕೆರೆಯ ಕರಗದ ಕುಂಟೆಯ ಶಕ್ತಿ ಪೀಠದಲ್ಲಿ ಖಡ್ಗ, ತ್ರಿಶೂಲಗಳನ್ನಿಟ್ಟು , ಕೆಂಪು ಬಟ್ಟೆಯಿಂದ ಅಲಂಕಾರಗೊಂಡ ‘ಹಸೀಕರಗ’ಕ್ಕೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಭಕ್ತರು ರಾಶಿ ರಾಶಿ ಕರ್ಪೂರ ಹಚ್ಚಿ ಭಕ್ತಿ ಸಮರ್ಪಿಸಿದರು.

    ಹಸಿಕರಗದ ವೇಳೆ ಪೂಜಾರಿಗಳು ವೀರಕುಮಾರರಿಗೆ ಕಂಕಣಕಟ್ಟಿಕೊಂಡು ನೆತ್ತಿಗೆ ಗಂಧವನ್ನು ಬಳಿಯುತ್ತಾರೆ. ವೀರಕುಮಾರರು ಗೋವಿಂದ ನಾಮಸ್ಮರಣೆಯೊಂದಿಗೆ ಖಡ್ಗದಿಂದ ಎದೆಗೆ ಹೊಡೆದುಕೊಳ್ಳುತ್ತ ವೀರಾವೇಶದಿಂದ ಅಲಗಿನ ಸೇವೆ ಮಾಡಿದರು. ಆ ನಂತರ ಪೂಜಾರಿಯು ಹಸೀಕರಗವನ್ನು ಹೊತ್ತು ದಾರಿಯುದ್ದಕ್ಕೂ ದರ್ಶನ ನೀಡುತ್ತ ಕಾರ್ಪೊರೇಷನ್ ಬಳಿಯ ದೇವಾಲಯದ ಸಮೀಪ ಇರುವ 7 ಸುತ್ತಿನ ಕೋಟೆ ಬಳಿಗೆ ಬಂದು ಪೂಜೆ ಸ್ವೀಕರಿಸಿ ಅಲ್ಲಿಂದ ಬೆಳಗಿನ ಜಾವದ ಹೊತ್ತಿಗೆ ಧರ್ಮರಾಯಸ್ವಾಮಿ ದೇವಾಲಯವನ್ನು ತಲುಪಿತು.

    ಕಳೆದ ಒಂದು ವಾರದಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳು ಮುಂದುವರೆದಿದ್ದು, ಈ ವರೆಗೆ 13 ಬಾರಿ ಕರಗವನ್ನು ಹೊತ್ತಿರುವ ಪೂಜಾರಿ ಜ್ಞಾನೇಂದ್ರ ಈ ಬಾರಿಯೂ ಕರಗವನ್ನು ಹೊರಲಿದ್ದಾರೆ. ಈಗಾಗಲೇ ಉಪವಾಸ ವ್ರತ ಕೈಗೊಂಡು ಧಾರ್ಮಿಕ ಪೂಜೆಯಲ್ಲಿ ನಿರತರಾಗಿದ್ದಾರೆ. ವಿಶೇಷವಾಗಿ 3 ಸಾವಿರ ವೀರಕುಮಾರರು ಕರಗದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಶಕ್ತಿಪೀಠದಲ್ಲಿ ಸಂಪನ್ನಗೊಂಡ ಹಸಿಕರಗ; ವಿಶ್ವವಿಖ್ಯಾತ ಕರಗ ಮಹೋತ್ಸವಕ್ಕೆ ದಿನಗಣನೆ

    ಕರಗ ಕಣ್ತುಂಬಿಕೊಳ್ಳಲು ಕಾತುರ: ಧಾರ್ಮಿಕ ನಂಬಿಕೆ ಮತ್ತು ಜನಪದೀಯ ಪದ್ಧತಿಗಳಿಗನುಗುಣವಾಗಿ ನಡೆಯುವ ಬೆಂಗಳೂರು ಕರಗ ಮಹೋತ್ಸವಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಇದ್ದು, ಆ ಅಮೃತ ಕ್ಷಣವನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿನ ಜನ ಕಾತುರರಾಗಿದ್ದಾರೆ. ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರ ಅನುಪಸ್ತಿತಿಯಲ್ಲಿ ಕರಗ ವ್ಯವಸ್ಥಾಪನ ಸಮಿತಿ ಮುಂದಾಳತ್ವದಲ್ಲಿ ಕರತ ಮಹೋತ್ಸವ ನಡೆಯಲಿದೆ.

    .23ರ ಚೈತ್ರ ಪೌರ್ಣಿಮೆಯಂದು ಮಧ್ಯರಾತ್ರಿ 12.30ಕ್ಕೆ ಆರಂಭವಾಗುವ ಕರಗ ಉತ್ಸವವು ಸಾಗಿ ಬರುವ ದಾರಿಯುದ್ದಕ್ಕೂ ತಳಿರು ತೋರಣ, ರಂಗೋಲಿ, ವಿದ್ಯುದೀಪಾಲಂಕಾರವನ್ನು ಮಾಡಲಾಗಿದೆ. ಮೊದಲಿಗೆ ಮಸ್ಥಾನ್‌ಸಾಬ್ ದರ್ಗಾಕ್ಕೆ ತೆರಳಿ ಧೂಪವನ್ನು ಸ್ವೀಕರಿಸುವ ಮೂಲಕ ಸೌಹಾರ್ಧತೆಗೆ ಸಾಕ್ಷಿಯಾಗುವ ಕರಗವು ತಿಗಳರಪೇಟೆ, ಬಳೇಪೇಟೆ, ಚಿಕ್ಕಪೇಟೆ, ಅಣ್ಣಮ್ಮ ದೇವಾಲಯಕ್ಕೆ ಸಾಗಲಿದೆ. ಅಂತಿಮವಾಗಿ ಬೆಳಗಿನ ಸೂರ್ಯೋದಯಕ್ಕೆ ಸರಿಯಾಗಿ ಕರಗವು ಧರ್ಮರಾಯಸ್ವಾಮಿ ದೇವಾಲಯವನ್ನು ತಲುಪಲಿದೆ.

    .24ಕ್ಕೆ ಪದ್ಧತಿಯಂತೆ ದೇವಾಲಯದಲ್ಲಿ ಗಾವು ಪೂಜೆ ಹಾಗೂ ಏ.25ರಂದು ಕೊನೆಯ ದಿವಸ ವಸಂತೋತ್ಸವದ ಮೂಲಕ ಕರಗ ಮಹೋತ್ಸವಕ್ಕೆ ತೆರೆಬೀಳಲಿದೆ.

    ನಗರದ ವಿವಿಧೆಡೆ ಭಗವಾನ್ ಮಹಾವೀರ ಜಯಂತಿ ಆಚರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts