ಹೊಸ ವರ್ಷದಲ್ಲೇ ಹೊಡೆಯಿತು ಜಾಕ್​ಪಾಟ್​ ಲಾಟರಿ; ಭಾರತೀಯ ಡ್ರೈವರ್​ಗೆ ದೊರೆತಿದ್ದು ಎಷ್ಟು ಕೋಟಿ ಗೊತ್ತೆ?

lottery
Published on

ನವದೆಹಲಿ: ಅರಬ್​ ಸಂಯುಕ್ತ ಸಂಸ್ಥಾನ (ಯುಎಇ)ದ ಅಲ್ ಐನ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತದ ಖಾಸಗಿ ಚಾಲಕರೊಬ್ಬರು ಡಿಸೆಂಬರ್ 31 ರಂದು ನಡೆದ ಬಿಗ್ ಟಿಕೆಟ್ ಲೈವ್ ಡ್ರಾದಲ್ಲಿ 2 ಕೋಟಿ ಯುಎಇ ದಿರ್ಹಾಮ್‌ಗಳ (ಅಂದಾಜು 44 ಕೋಟಿ ರೂಪಾಯಿ) ಜಾಕ್‌ಪಾಟ್ ಬಹುಮಾನವನ್ನು ಗೆದ್ದು, ಹೊಸ ವರ್ಷಕ್ಕೆ ಕುಬೇರರಾಗಿ ಕಾಲಿಟ್ಟಿದ್ದಾರೆ.

ಬಿಗ್​ ಟಿಕೆಟ್​ ಲೈವ್ ಡ್ರಾದಲ್ಲಿ ಮುನಾವರ್ ಫೈರೂಸ್ ಅದೃಷ್ಟಶಾಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಕಳೆದ ಐದು ವರ್ಷಗಳಿಂದ ಪ್ರತಿ ತಿಂಗಳು ಟಿಕೆಟ್‌ಗಳನ್ನು ಖರೀದಿಸುತ್ತಿರುವ ಫೈರೂಸ್ ಅವರು, ತಮ್ಮ ಟಿಕೆಟ್ ಖರೀದಿಗೆ ಹಣ ನೀಡಿದ 30 ವ್ಯಕ್ತಿಗಳ ಜತೆಗೆ ಬಹುಮಾನದ ಹಣವನ್ನು ಹಂಚಿಕೊಳ್ಳುತ್ತಾರೆ ಎಂದು ತಿಳಿದುಬಂದಿದೆ.

ಫೈರೂಸ್ ಅವರ ಹೊರತಾಗಿ, ಭಾರತೀಯ, ಪ್ಯಾಲೆಸ್ತೀನಿಯ, ಲೆಬನೀಸ್ ಮತ್ತು ಸೌದಿ ಅರೇಬಿಯಾದ ನಾಗರಿಕರಾಗಿರುವ ಇತರ 10 ಜನರು 1 ಲಕ್ಷ ಯುಎಇ ದಿರ್ಹಾಮ್‌ಗಳ ಮೌಲ್ಯದ ನಗದು ಬಹುಮಾನಗಳನ್ನು ಪಡೆದಿದ್ದಾರೆ.

ಇದೇ ದಿನ, ಮತ್ತೊಬ್ಬ ಭಾರತೀಯ, ಸುತೇಶ್ ಕುಮಾರ್ ಕುಮಾರೇಶನ್ ಅವರನ್ನು ಡಿಸೆಂಬರ್‌ನಲ್ಲಿ ನಾಲ್ಕನೇ ಸಾಪ್ತಾಹಿಕ ಇ-ಡ್ರಾ ವಿಜೇತರೆಂದು ಘೋಷಿಸಲಾಗಿದ್ದು, ಇವರಿಗೆ 10 ಲಕ್ಷ ಯುಎಇ ದಿರ್ಹಾಮ್‌ ನಗದು ಬಹುಮಾನ ಲಭಿಸಿದೆ. ಇದು ಸರಿಸುಮಾರು 2 ಕೋಟಿ 26 ಲಕ್ಷ ರೂ. ಆಗುತ್ತದೆ. ಕುಮಾರೇಶನ್ ಅವರು ಎತಿಹಾದ್ ಏರ್‌ವೇಸ್‌ನಲ್ಲಿ ಇಂಜಿನಿಯರ್ ಆಗಿದ್ದು, ಅಬುಧಾಬಿಯಲ್ಲಿ ನೆಲೆಸಿದ್ದಾರೆ.

''ನನ್ನ ಏಳು ವರ್ಷದ ಮಗಳು ಗೆಲ್ಲುವ ಟಿಕೆಟ್ ಸಂಖ್ಯೆಗಳನ್ನು ಆಯ್ಕೆ ಮಾಡಿದ್ದಳು. ಈ ಗೆಲುವಿನಿಂದ ನನ್ನ ಕುಟುಂಬ ಉತ್ಸುಕವಾಗಿದೆ. ನಾವು ಭಾರತದಲ್ಲಿ ಮನೆ ಖರೀದಿಸಿದ್ದೇವೆ. ಬಡ್ಡಿ ಪಾವತಿಸಲು ಹಣ ಬಳಸಲು ಯೋಜಿಸಿದ್ದೇವೆ,” ಎಂದು ಅವರು ಬಿಗ್ ಟಿಕೆಟ್‌ನ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಕಳೆದ ವರ್ಷ, ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್‌ನ ಡ್ರಾ ಸರಣಿ ಸಂಖ್ಯೆ 250ರ ಸಂದರ್ಭದಲ್ಲಿ ಬೆಂಗಳೂರಿನ ನಿವಾಸಿ ಅರುಣ್ ಕುಮಾರ್ ವಟಕ್ಕೆ ಕೊರೋತ್ ಅವರು ಜಾಕ್‌ಪಾಟ್ ಹೊಡೆದಿದ್ದರು. ಕೊರೊತ್ ಅವರು ಮಾರ್ಚ್ 2023 ರಲ್ಲಿ ಖರೀದಿಸಿದ ತಮ್ಮ ಟಿಕೆಟ್ ಸಂಖ್ಯೆ 261031ಕ್ಕೆ 2 ಕೋಟಿ ದಿರ್ಹಾಮ್​ (Rs 44 ಕೋಟಿ 75 ಲಕ್ಷ ರೂ.) ಬಹುಮಾನ ಗೆದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net