ಟ್ವಿಟರ್ ಸಿಇಒ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಜಾಕ್​ ಡಾರ್ಸಿ; ಆ ಸ್ಥಾನಕ್ಕೆ ಪರಾಗ್ ಅಗರ್​ವಾಲ್​!?

Twitter
Published on

ನವದೆಹಲಿ: ಕಳೆದ ಕೆಲವು ತಿಂಗಳ ಹಿಂದೆ ಭಾರತ ಸರ್ಕಾರದ ಜತೆ ಸಂಘರ್ಷದ ಮೂಲಕ ಭಾರಿ ಸುದ್ದಿಯಲ್ಲಿದ್ದ ಟ್ವಿಟರ್ ಈಗ ಮತ್ತೊಮ್ಮೆ ತನ್ನ ಆಡಳಿತಾತ್ಮಕ ವಿಷಯಕ್ಕೆ ಸುದ್ದಿಯಲ್ಲಿದೆ. ಅಷ್ಟಕ್ಕೂ ಟ್ವಿಟರ್​ ಬಗ್ಗೆ ಈಗ ಬಹುತೇಕರು ಮಾತನಾಡುವಂತಾಗಲು ಕಾರಣ ಟ್ವಿಟರ್​ ಸಿಇಒ. ಹೌದು.. ಟ್ವಿಟರ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನಕ್ಕೆ ಜಾಕ್ ಡಾರ್ಸಿ ನೀಡಿದ್ದಾರೆ. 

ಸೋಷಿಯಲ್ ಮೀಡಿಯಾದ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ಟ್ವಿಟರ್​ನ ಸಹ ಸಂಸ್ಥಾಪಕರೂ ಆಗಿರುವ ಜಾಕ್​, 2006ರಲ್ಲಿ ಟ್ವಿಟರ್ ಆರಂಭಿಸುವಲ್ಲಿ ಕೈಜೋಡಿಸಿದ್ದರು. ಆದರೆ 2020ರಲ್ಲಿ ಟ್ವಿಟರ್ ಷೇರ್​ಹೋಲ್ಡರ್ ಪೈಕಿ ಒಂದಾಗಿರುವ ಎಲಿಯಟ್ ಮ್ಯಾನೇಜ್​ಮೆಂಟ್​ ಟ್ವಿಟರ್ ಸಿಇಒ ಸ್ಥಾನದಿಂದ ಜಾಕ್​ ಅವರನ್ನು ತೆರವುಗೊಳಿಸಲು ಯತ್ನಿಸಿತ್ತು.

ಜಾಕ್​ ತಾವೇ ರೂಪಿಸಿರುವ ಹಣಕಾಸು ಪಾವತಿ ಕಂಪನಿ ಸ್ಕ್ವೇರ್​ನ ಮುಖ್ಯಸ್ಥರಲ್ಲೂ ಒಬ್ಬರಾಗಿದ್ದು, ಅದರ ಜತೆಗೆ ಟ್ವಿಟರ್​ ಕೂಡ ನಿಭಾಯಿಸಲು ಸಮರ್ಥರೇ ಎಂದು ಒಂದಷ್ಟು ಹೂಡಿಕೆದಾರರು ಬಹಿರಂಗವಾಗಿಯೇ ಪ್ರಶ್ನಿಸಿದ್ದರು. ಅದಾಗ್ಯೂ ಒಂದುಮಟ್ಟಿಗೆ ಸಮರ್ಥವಾಗಿಯೇ ನಿಭಾಯಿಸಿದ ಜಾಕ್ ಇತ್ತೀಚೆಗೆ ಕ್ರಿಪ್ಟೋಕರೆನ್ಸಿ ಕುರಿತು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಇವೆಲ್ಲದರ ನಡುವೆ ಜಾಕ್​ ರಾಜೀನಾಮೆಗೆ ಮುಂದಾಗಿರುವುದು ಯಾಕೆ ಎಂಬುದರ ಕುರಿತು ಖಚಿತ ಮಾಹಿತಿ ಹೊರಬಿದ್ದಿಲ್ಲ. ಆದರೆ ಹೊಸ ಸಿಇಒ ಆಗಿ ಪರಾಗ್ ಅಗರ್​ವಾಲ್​ ಜವಾಬ್ದಾರಿ ವಹಿಸಿಕೊಳ್ಳಲಿರುವ ಕುರಿತು ಜಾಕ್​ ತಿಳಿಸಿದ್ದಾರೆ. ಟ್ವಿಟರ್​ನಲ್ಲಿನ ಈ ಬೆಳವಣಿಗೆ ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಕುತೂಹಲ ಕೆರಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net