ಸಹೋದ್ಯೋಗಿಗಳ ಜತೆ ಪ್ರಚೋದನಾತ್ಮಕ ವರ್ತನೆ; ಪತಿಯಿಂದ ಬೇರೆಯಾದ್ರು ಇಟಲಿ ಪ್ರಧಾನಿ

Giorgia Meloni
Published on

ರೋಮ್​: ಸಹೋದ್ಯೋಗಿಗಳ ಜತೆ ಲೈಂಗಿಕವಾಗಿ ಪ್ರಚೋದನೆ ನೀಡುವಂತಹ ವರ್ತನೆ ತೋರಿದ್ದಕ್ಕೆ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಪತಿಯಿಂದ ಬೇರೆಯಾಗಿದ್ದಾರೆ. ಇತ್ತೀಚೆಗೆ ತನ್ನ ಪತಿ ಕೆಟ್ಟ ರೀತಿಯಲ್ಲಿ ಸುದ್ದಿಯಾದ ಬೆನ್ನಿಗೇ ಈಕೆ ಆ ಕುರಿತ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಈ ಮೂಲಕ ಅವರು ತಮ್ಮ ಹತ್ತು ವರ್ಷಗಳ ದಾಂಪತ್ಯ ಕೊನೆಗೊಂಡಿರುವುದನ್ನು ಬಹಿರಂಗವಾಗಿ ತಿಳಿಸಿ ಖಚಿತ ಪಡಿಸಿದ್ದಾರೆ. ಇವರ ಪತಿ ಆಂಡ್ರಿಯಾ ಗಿಯಾಂಬ್ರುನೊ ಟಿವಿ ಪತ್ರಕರ್ತ ಆಗಿದ್ದು, ಇತ್ತೀಚೆಗೆ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಇವರ ದುರ್ವರ್ತನೆ ಅನಾವರಣಗೊಂಡಿತ್ತು.

ಆಂಡ್ರಿಯಾ ಗಿಯಾಂಬ್ರುನೊ ಅವರೊಂದಿಗಿನ ಸುಮಾರು 10 ವರ್ಷಗಳ ಕಾಲದ ನನ್ನ ಸಂಬಂಧವು ಇಲ್ಲಿಗೆ ಕೊನೆಗೊಳ್ಳುತ್ತದೆ ಎಂದು ಜಾರ್ಜಿಯಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ನಮ್ಮಿಬ್ಬರ ಮಧ್ಯೆ ಕೆಲವು ಕಾಲದ ಹಿಂದೆಯೇ ಭಿನ್ನಾಭಿಪ್ರಾಯ ಉಂಟಾಗಿದ್ದು, ಅದನ್ನು ಒಪ್ಪಿಕೊಳ್ಳುವ ಕಾಲ ಈಗ ಬಂದಿದೆ ಎಂದಿದ್ದಾರೆ.

ಕಳೆದ ವಾರ ಪ್ರಸಾರವಾದ ಒಂದು ಕಾರ್ಯಕ್ರಮದಲ್ಲಿ ಈತ ಮಹಿಳೆಯೊಬ್ಬಳನ್ನು ಉದ್ದೇಶಿಸಿ, "ನಾನು ನಿನ್ನನ್ನು ಮೊದಲು ಏಕೆ ಭೇಟಿಯಾಗಲಿಲ್ಲ?" ಎಂದು ಹೇಳಿದ್ದರು. ನಂತರ ಅದೇ ವಾರದಲ್ಲಿ ಪ್ರಸಾರವಾದ ಇನ್ನೊಂದು ಕಾರ್ಯಕ್ರಮದಲ್ಲಿ ವಿವಾಹೇತರ ಸಂಬಂಧದ ಕುರಿತು ಹೆಮ್ಮೆಪಡುವಂಥ ಅಭಿಪ್ರಾಯ ವ್ಯಕ್ತಪಡಿಸಿದ್ದಲ್ಲದೆ, ಮಹಿಳಾ ಸಹೋದ್ಯೋಗಿಗಳು ಸಮೂಹ ಲೈಂಗಿಕತೆಯಲ್ಲಿ ಭಾಗಿಯಾಗುವಂಥ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಜಾರ್ಜಿಯಾ ಈ ದಾಂಪತ್ಯವನ್ನು ಕಡಿದುಕೊಂಡಿದ್ದು, ವಿಷಯವನ್ನು ಬಹಿರಂಗ ಕೂಡ ಪಡಿಸಿದ್ದಾರೆ. ಈ ದಂಪತಿಗೆ ಒಬ್ಬಳು ಮಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net