ಚೀನಿಯರದ್ದು ಯೋಜಿತ ದಾಳಿ; ಕರ್ನಲ್ ಸಂತೋಷ್​​ ಬಾಬು ಅವರ ಮರಣೋತ್ತರ ಪರೀಕ್ಷೆಯಲ್ಲಿ ದೃಢ

colonel santhosh babu
Published on

ನವದೆಹಲಿ: ಗಾಲ್ವಾನ್​ ಕಣಿವೆಯಲ್ಲಿ ಸೋಮವಾರ ನಡೆದ ಘರ್ಷಣೆ ಚೀನಾ ಯೋಧರ ಯೋಜಿತ ದಾಳಿಯಾಗಿತ್ತು ಎಂಬುದು ಈಗ ಖಚಿತವಾಗಿದೆ. ಈ ಘಟನೆಯಲ್ಲಿ ಹುತಾತ್ಮರಾದ ಕರ್ನಲ್​ ಸಂತೋಷ್​ ಬಾಬು ಅವರ ಮರಣೋತ್ತರ ಪರೀಕ್ಷೆಯಲ್ಲಿ ಇದು ದೃಢಪಟ್ಟಿದ್ದಾಗಿ ಭಾರತೀಯ ಸೇನಾಪಡೆ ಮೂಲಗಳು ಹೇಳಿವೆ.

ಚೀನಿ ಯೋಧರ ಯೋಜಿತ ದಾಳಿ ಇದಾಗಿತ್ತು ಎಂದು ಭಾರತ ಬುಧವಾರ ಬೆಳಗ್ಗೆಯೇ ಹೇಳಿತ್ತು. ಇದೀಗ ಕರ್ನಲ್​ ಸಂತೋಷ್​ ಬಾಬು ಅವರ ಮರಣೋತ್ತರ ಪರೀಕ್ಷೆ ಇದನ್ನು ಖಚಿತಪಡಿಸಿದೆ.

ಗಾಲ್ವಾನ್​ ಕಣಿವೆಯಲ್ಲಿ ಚೀನಾ ಅತಿಕ್ರಮಿಸಿಕೊಂಡಿದ್ದ ಪ್ರದೇಶದಲ್ಲಿ ಪಿಎಲ್​ಎ ಯೋಧರು ಟೆಂಟ್​ ಹಾಕಿಕೊಂಡಿದ್ದರು. ಒಪ್ಪಂದದ ಪ್ರಕಾರ ಆ ಟೆಂಟ್​ ಅನ್ನು ತೆರವುಗೊಳಿಸಿ ಪಿಎಲ್​ಎ ಯೋಧರು ಹಿಂದಕ್ಕೆ ಸರಿಯಬೇಕಿತ್ತು. ಇದನ್ನು ಪರಿಶೀಲಿಸಲು ಕರ್ನಲ್​ ಸಂತೋಷ್​ ಬಾಬು ಮತ್ತು ಯೋಧರು ಹೋದಾಗ ಅವರನ್ನು ಸುತ್ತುವರಿದ ಪಿಎಲ್​ಎ ಯೋಧರು ಮುಳ್ಳುತಂತಿ ಸುತ್ತಿದ್ದ ಕಬ್ಬಿಣದ ರಾಡ್​ ಮತ್ತು ಬಡಿಗೆಗಳನ್ನು ಬಳಸಿ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದಕ್ಕೂ ಮುನ್ನ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಅವರ ಟೀಕೆಗೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಸಚಿವ ಎಸ್​. ಜೈಶಂಕರ್​, ಚೀನಿ ಯೋಧರು ಹಲ್ಲೆ ಮಾಡಿದಾಗ ಭಾರತೀಯ ಯೋಧರ ಬಳಿ ಶಸ್ತ್ರಾಸ್ತ್ರಗಳಿದ್ದವು. ಆದರೆ, ಅವನ್ನು ಬಳಸದಂತೆ 1996 ಮತ್ತು 2003ರಲ್ಲಿ ಮಾಡಿಕೊಂಡ ಒಪ್ಪಂದದನ್ವಯ ಅವನ್ನು ಅವರು ಬಳಸಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net