

ನವದೆಹಲಿ: ಲಡಾಖ್ನ ಪೂರ್ವಭಾಗದಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ಯೋಧರೊಂದಿಗಿನ ಸೋಮವಾರದ ಘರ್ಷಣೆಯ ಬಳಿಕ ಭಾರತದ ಯಾವೊಬ್ಬ ಯೋಧರೂ ಕಾಣೆಯಾಗಿಲ್ಲ ಎಂದು ಭಾರತೀಯ ಸೇನಾಪಡೆ ಸ್ಪಷ್ಟಪಡಿಸಿದೆ.
ಸೋಮವಾರದ ಘರ್ಷಣೆಯಲ್ಲಿ ಕರ್ನಲ್ ಸೇರಿ 20 ಯೋಧರು ಹುತಾತ್ಮರಾಗಿದ್ದಾರೆ. 76ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. ಆದರೆ, ಯಾರೊಬ್ಬರೂ ಕಾಣೆಯಾಗಿಲ್ಲ. ಚೀನಾದ ಕರ್ನಲ್ ಸೇರಿ 43 ಯೋಧರು ಹತರಾಗಿದ್ದಾರೆ ಎಂದು ಹೇಳಿದೆ.
ಬುಧವಾರದಂದು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ನಲ್ಲಿ ಪ್ರಕಟವಾದ In China-India Clash, Two Nationalist Leaders with Little Room to Give ಎಂಬ ಲೇಖನದ ಹಿನ್ನೆಲೆಯಲ್ಲಿ ಸೇನಾಪಡೆ ಈ ಸ್ಪಷ್ಟನೆ ನೀಡಿದೆ.
ನ್ಯೂಯಾರ್ಕ್ ಟೈಮ್ಸ್ನ ವರದಿಯನ್ನು ಆಧರಿಸಿ ಭಾರತದ ಮಾಧ್ಯಮಗಳಲ್ಲಿ ಹಲವಾರು ಯೋಧರು ಕಾಣೆಯಾಗಿದ್ದಾರೆ, ಇಲ್ಲವೇ ಲೆಕ್ಕಕ್ಕೆ ಸಿಕ್ಕಿಲ್ಲ ಎಂದು ವರದಿ ಮಾಡಿದ್ದವು.
ಭಾರತ ಮತ್ತು ಚೀನಾದ ಮಿಲಿಟರಿಯ ಮೇಜರ್ ಜನರಲ್ ದರ್ಜೆಯ ಅಧಿಕಾರಿಗಳು ಪೂರ್ವ ಲಡಾಖ್ನಲ್ಲಿ ಬಿಕ್ಕಟ್ಟು ಪರಿಹಾರದ 7ನೇ ಸುತ್ತಿನ ಮಾತುಕತೆ ಮುಂದುವರಿಸಿರುವಂತೆ ಈ ಸ್ಪಷ್ಟನೆ ಬಂದಿದೆ.
ಕಾರುನಲ್ಲಿರುವ 3ನೇ ಪದಾತಿ ದಳದ ಕಮಾಂಡರ್ ಮೇಜರ್ ಜನರಲ್ ಅಭಿಜಿತ್ ಬಾಪಟ್ ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಮೇಜರ್ ಜನರಲ್ ದರ್ಜೆಯ ಅಧಿಕಾರಿ ಮಾತುಕತೆ ನಡೆಸಿದರು. ಆದರೆ, ಈ ಮಾತುಕತೆಯ ವಿವರಗಳು ಇನ್ನೂ ಲಭ್ಯವಾಗಿಲ್ಲ.