ಡಿಕೆ ಸಹೋದರರ ಆಪ್ತನಿಗೆ ಐಟಿ ಶಾಕ್

IT Raid
Published on

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿ ಡಿ.ಕೆ. ಸುರೇಶ್ ಆಪ್ತ ಮತ್ತು ಕಾಂಗ್ರೆಸ್ ಮುಖಂಡ ಎನ್ನಲಾದ ಕೆಂಪರಾಜ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭಾನುವಾರ ದಿಢೀರ್ ದಾಳಿ ನಡೆಸಿದ್ದಾರೆ.

ಕನಕಪುರ ರಸ್ತೆ ತಲಘಟ್ಟಪುರ ಸಮೀಪದ ವಾಜರಹಳ್ಳಿಯ ಕೆಂಪರಾಜ್ ಮನೆ ಮೇಲೆ ಮಧ್ಯಾಹ್ನ 3.30ರಲ್ಲಿ ಎರಡು ಇನೋವಾ ಕಾರಿನಲ್ಲಿ ಬಂದ ಐಟಿ ಅಧಿಕಾರಿಗಳು ದಾಳಿ ನಡೆಸಿ ತಡರಾತ್ರಿ ವರೆಗೂ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ. ಕೆಲ ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದು, ಆದಾಯದ ಮೂಲಗಳನ್ನು ಕೆದಕುತ್ತಿದ್ದಾರೆ.

ಕೆಂಪರಾಜು, ಕನಕಪುರದ ಬಸವೇಶ್ವರನಗರ ನಿವಾಸಿ. ಪ್ರಸ್ತುತ ವಾಜರಹಳ್ಳಿಯಲ್ಲಿ ನೆಲೆಸಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಗ್ರಾನೈಟ್, ಕ್ರಷರ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕೆಂಪರಾಜು ತೊಡಗಿಸಿಕೊಂಡಿದ್ದಾರೆ.

ಹೈವೋಲ್ಟೇಜ್ ಕ್ಷೇತ್ರವಾದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತ ಸೆಳೆಯಲು ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಇದರ ನಡುವೆ ಐಟಿ ಅಧಿಕಾರಿಗಳು ಡಿಕೆ ಸಹೋದರರ ಆಪ್ತ ಕೆಂಪರಾಜು ಮನೆ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಚುನಾವಣೆ ೋಷಣೆಯಾದ ಮೇಲೆ ಯಾವ ಯಾವ ಮೂಲದಿಂದ ಹಣದ ವ್ಯವಹಾರ ನಡೆಸಿದ್ದಾರೆ. ಕೆಂಪರಾಜು ಆದಾಯ ಎಷ್ಟು ಎಂಬುದನ್ನು ಇಂಚಿಂಚು ಪರಿಶೀಲನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಅಕ್ರಮ ವಹಿವಾಟು ನಡೆದಿರುವುದು ಕಂಡು ಬಂದರೇ ಡಿಕೆ ಸಹೋದರರ ಕೊರಳಿಗೂ ಮತ್ತೆ ಐಟಿ ತನಿಖೆ ಸುತ್ತಿಕೊಳ್ಳುವ ಸಾಧ್ಯತೆಗಳು ಇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net