

ನವದೆಹಲಿ: ಆಕಾಶದಲ್ಲಿ ಹಾರಾಡುತ್ತಿರುವಾಗ ವಿಮಾನದೊಳಗೂ ಮಳೆ ಬರಲು ಸಾಧ್ಯವೇ? ಸಾಧ್ಯ ಎನ್ನುತ್ತಾರೆ ರಷ್ಯಾದ ಈ ವಿಮಾನದ ಸಿಬ್ಬಂದಿ.
ಬ್ಲ್ಯಾಕ್ಸೀ ನೋಡಲು ತೆರಳುತ್ತಿದ್ದ ಪ್ರವಾಸಿಗರು ಇದ್ದ ರಷ್ಯಾದ ವಿಮಾನದೊಳಗೆ ಹಠಾತ್ತನೆ ಮಳೆ ಸುರಿಯಲು ಆರಂಭಿಸಿತು. ಪುಣ್ಯಕ್ಕೆ ಜನರು ತಮ್ಮ ಕ್ಯಾಬಿನ್ ಲೆಗೇಜ್ನೊಂದಿಗೆ ಛತ್ರಿಗಳನ್ನು ತಂದಿದ್ದರು. ಆ ಛತ್ರಿಗಳನ್ನು ವಿಮಾನದೊಳಗೆ ಬಿಡಿಸಿ, ಮಳೆ ನೀರಿನಿಂದ ರಕ್ಷಣೆ ಪಡೆದರು.
ರೋಷಿಯಾ ಏರ್ಲೈನ್ಸ್ನ ವಿಮಾನದಲ್ಲಿ ನಡೆದ ಈ ಘಟನೆಯ ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಮಾನದೊಳಗಿನ ಮಳೆಯ ಅನುಭವವನ್ನು ಹಂಚಿಕೊಂಡಿದ್ದಾರೆ.
ಖಾಬರೋವ್ಸ್ಕ್ ಮತ್ತು ಸೋಚಿ ನಡುವೆ ಸಂಚರಿಸುವ ರೋಷಿಯಾ ಏರ್ಲೈನ್ಸ್ ವಿಮಾನ ಎಂದಿನಂತೆ ಬ್ಲ್ಯಾಕ್ಸೀಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿತ್ತು. ಅದರ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಏನೋ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಇದರಿಂದಾಗಿ ವಿಮಾನದೊಳಗೆ ಎಸಿಯ ನೀರು ಮಳೆಯಂತೆ ತೊಟ್ಟಿಕ್ಕಲಾರಂಭಿಸಿತ್ತು.
ಸೆಂಟ್ರಲ್ ಎಸಿ ವ್ಯವಸ್ಥೆ ಇರುವಲ್ಲಿ ಎಸಿ ಯಂತ್ರಗಳಿಂದ ಈ ರೀತಿ ನೀರು ತೊಟ್ಟಿಕ್ಕುವುದು ಸಾಮಾನ್ಯ ಎನ್ನಲಾಗಿದೆ. ನೀರು ಘನೀಕೃತಕೊಂಡಿದ್ದು, ಕ್ಯಾಬಿನ್ನಲ್ಲಿನ ಬಿಸಿ ತಾಪಮಾನದ ಸಂಪರ್ಕಕ್ಕೆ ಬಂದಾಗ ಕರಗಿ ನೀರಾಗುತ್ತದೆ. ಹೀಗಾದಾಗ ಹೆಚ್ಚುವರಿ ನೀರು ವಿಮಾನದೊಳಗಿನ ಒಳಾಂಗಣ ಪ್ಯಾನೆಲ್ಗಳ ಮೂಲಕ ತೊಟ್ಟಿಕ್ಕುತ್ತದೆ. ಹಾಗೆಂದು ಇದೇನು ಗಂಭೀರವಾದ ಸಮಸ್ಯೆಯಲ್ಲ ಎಂದು ರೋಷಿಯಾ ಏರ್ಲೈನ್ಸ್ನ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ.