ಸ್ಮಶಾನದಲ್ಲಿದ್ದ ಪಿಪಿಇ ಕಿಟ್ ಧರಿಸಿ ಊರೆಲ್ಲಾ ಓಡಾಟ-ಬೇಸ್ತು ಬಿದ್ದ ಜನ

PPE kit
Published on

ವಿಜಯಪುರ: ಕರೊನಾ ಸೋಂಕಿತರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಸ್ಮಶಾನದಲ್ಲಿಯೇ ಬಿಟ್ಟುಹೋಗಿದ್ದ ಪಿಪಿಇ ಕಿಟ್‌ ಒಂದನ್ನು ಎತ್ತಿಕೊಂಡು ಅದನ್ನು ಧರಿಸಿಕೊಂಡ ಮಾನಸಿಕ ಅಸ್ವಸ್ಥನೊಬ್ಬ ಇಡೀ ಊರಿನ ಜನರನ್ನು ಭೀತಿಗೆ ಸಿಲುಕಿಸುತ್ತಿರುವ ಘಟನೆ ವಿಜಯಪುರದಲ್ಲಿ ನಡೆಯುತ್ತಿದೆ.

ಪಿಪಿಇ ಕಿಟ್, ಫೇಸ್ ಶೀಲ್ಡ್ ಮತ್ತು ಮಾಸ್ಕನ್ನು ಧರಿಸಿದ ಈ ವ್ಯಕ್ತಿ ವಿಜಯಪುರದ ವಿವಿಧ ಬಡಾವಣೆಗಳಲ್ಲಿ ಓಡಾಟ ನಡೆಸುತ್ತಿದ್ದಾನೆ. ಇದರಿಂದ ಕರೊನಾ ಸೋಂಕು ಹರಡುವ ಭೀತಿಯಿಂದ ಜನರು ನಲುಗಿ ಹೋಗಿದ್ದಾರೆ.

ವಿಜಯಪುರ ನಗರದ ಮನಗೂಳಿ ಅಗಸಿಯಿಂದ ಜಿಲ್ಲಾ ಪಂಚಾಯಿತಿಗೆ ಹೋಗುವ ರಸ್ತೆಯಲ್ಲಿ ಈ ಘಟನೆ ನಡೆಯುತ್ತಿದೆ. ದಿನನಿತ್ಯವೂ ಈತ ಚಿತ್ರ-ವಿಚಿತ್ರ ವೇಷ ಮಾಡಿಕೊಂಡು ಬಡಾವಣೆಗಳಲ್ಲಿ ಸುತ್ತುತ್ತಿರುತ್ತಾನೆ. ಮೈಮೇಲೆ ಹರಿದಿರುವ ಪಿಪಿಇ ಕಿಟ್, ಮುಖಕ್ಕೆ ಫೇಸ್‌ ಶೀಲ್ಡ್ ಮಾಸ್ಕ್ ಮತ್ತು ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾನೆ ಎಂದು ಸ್ಥಳೀಯರು ಅವಲತ್ತುಕೊಳ್ಳುತ್ತಿದ್ದಾರೆ.

ಇಲ್ಲಿಯೇ ಸಮೀಪವಿರುವ ಸ್ಮಶಾನದಲ್ಲಿ ಕರೊನಾ ಸೋಂಕಿತರ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಅಲ್ಲಿ ಅಕಸ್ಮಾತ್ತಾಗಿಯೋ ಅಥವಾ ಉದ್ದೇಶಪೂರ್ವಕವಾಗಿಯೋ ಯಾರೋ ಇವೆಲ್ಲವನ್ನೂ ಎಸೆದು ಹೋಗಿದ್ದು, ಈತ ಅದನ್ನು ಧರಿಸಿರಬಹುದು ಎನ್ನುತ್ತಿದ್ದಾರೆ ಸ್ಥಳೀಯರು. ಮೊದಲಿಗೆ ಈತ ಸ್ಮಶಾನದ ಪಕ್ಕದಲ್ಲಿರುವ ಬೆಂಚ್ ಮೇಲೆ ಕುಳಿತಿರುವ ಕಾರಣ ಅಲ್ಲಿಯೇ ಆತನಿಗೆ ಇದು ಸಿಕ್ಕಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net