ಅದು ನಾಯಿ ಮಾಂಸವಲ್ಲ ಮೇಕೆ ಮಾಂಸ

punith
Published on


ಬೆಂಗಳೂರು: ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿರುವುದು ನಾಯಿ ಮಾಂಸವಲ್ಲ, ಅದು ಮೇಕೆ ಮಾಂಸ ಎಂಬುದು ಪ್ರಯೋಗಾಲಯದ ವರದಿಯಿಂದ ಬಹಿರಂಗಗೊಂಡಿದೆ.
ಮೇಕೆ ಮಾಂಸ ಅಂತಾ ವರದಿ ಬಂದಿರುವುದರಿಂದ ಸಾರ್ವಜನಿಕರು ನಿಟ್ಟುಸಿರುವ ಬಿಡುವಂತಾಗಿದೆ.
ವಿವಾದವಾಗುತ್ತಿದಂತೆ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೋಟ್ಟು ಮಾಂಸವನ್ನು ವಶಕ್ಕೆ ಪಡೆದು ಅದರ ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಿದ್ದರು. ಅದರ ಪರೀಕ್ಷೆ ನಡೆಸಿದ ಪ್ರಯೋಗಾಲಯದವರು ಅದು ಮೇಕೆ ಮಾಂಸ ಎಂದು ವರದಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಪ್ರತಿಕ್ರಿಯಿಸಿ, ಲ್ಯಾಬ್ ಪರೀಕ್ಷೆಯಲ್ಲಿ ಅದು ಮೇಕೆ ಮಾಂಸ ಎಂದು ವರದಿ ಬಂದಿದೆ. ದುರುದ್ದೇಶದಿಂದ ಈ ಬಗ್ಗೆ ದೂರು ದಾಖಲಾಗಿತ್ತು. ರಾಜಸ್ಥಾನದಿಂದ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ, ವಾರಕ್ಕೊಮ್ಮೆ, ೧೫ ದಿವಸಕ್ಕೊಮ್ಮೆ ಮಾಂಸ ಮಾರಾಟ ಮಾಡುತ್ತಾರೆ. ನಾಯಿ ಮಾಂಸ ಅಲ್ಲ, ಅದು ಮೇಕೆ ಮಾಂಸ ಎನ್ನುವುದು ವರದಿಯಲ್ಲಿ ಧೃಡವಾಗಿದೆ. ಇವತ್ತು ವರದಿ ಬಂದಿದೆ ಎಂದು ತಿಳಿಸಿದ್ದಾರೆ.
ವಾಗ್ವಾದ ನಡೆದಿತ್ತು:
ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದ ಜತೆಗೆ ನಾಯಿ ಮಾಂಸವನ್ನು ತರಲಾಗಿದೆ ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಆರೋಪ ಮಾಡಿದ್ದರು. ಶುಕ್ರವಾರ ರಾಜಸ್ಥಾನದಿಂದ ಬಂದ ಮಟನ್ ಮಾಂಸದ ಬಾಕ್ಸ್‌ಗಳನ್ನು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ತಡೆಹಿಡಿಯಲಾಗಿತ್ತು. ಈ ಮಟನ್ ಬಾಕ್ಸ್‌ಗಳು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್‌ಗೆ ಸೇರಿದವು ಎಂದು ತಿಳಿದು ಬಂದಿತ್ತು.
ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ತಂಡ ಈ ಬಾಕ್ಸ್‌ಗಳನ್ನು ತಡೆದಿದ್ದರು. ಇದರಿಂದ ಸ್ಥಳದಲ್ಲಿ ಅಬ್ದುಲ್ ರಜಾಕ್ ಮತ್ತು ಪುನೀತ್ ಕೆರೆಹಳ್ಳಿ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಬಳಿಕ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದಿದ್ದರು.
ನ್ಯಾಯಾಂಗ ಬಂಧನ:
ನಾಯಿ ಮಾಂಸ ಸಾಗಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಧಿತರಾಗಿರುವ ಪುನೀತ್ ಕೆರೆಹಳ್ಳಿಗೆ ನ್ಯಾಯಾಲಯವು ಶನಿವಾರ ೧೪ ದಿನ ನ್ಯಾಯಾಂಗ ಬಂಧನಕ್ಕೆ ವಹಿಸಿತ್ತು. ಇದರಿಂದ ಪುನೀತ್ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ.
ನಾಯಿ ಮಾಂಸ ಎಂದಿದ್ದ ಪುನೀತ್:
ಬೆಂಗಳೂರಿಗೆ ಕುರಿ ಮಾಂಸದ ನೆಪದಲ್ಲಿ ನಾಯಿ ಮಾಂಸ ಬೇರೆ ರಾಜ್ಯದಿಂದ ತರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿ, ಮೆಜೆಸ್ಟಿಕ್‌ಗೆ ಬರುತ್ತಿದ್ದ ಮಾಂಸದ ವಾಹನಗಳನ್ನು ತಡೆದಿದ್ದರು. ಪೊಲೀಸರು ಮಧ್ಯಪ್ರವೇಶಿಸಿದ್ದು, ಮಾಂಸವನ್ನು ವಶಪಡಿಸಿಕೊಂಡಿದ್ದರು. ಪೊಲೀಸರ ಭದ್ರತೆಯಲ್ಲಿ ಕೋಲ್ಡ್ ಸ್ಟೋರೇಜ್‌ಗೆ ಮಾಂಸ ತುಂಬಿದ ನಾಲ್ಕು ವಾಹನಗಳು ರವಾನೆಯಾಗಿತ್ತು. ರೈಲು ಮೂಲಕ ನಾಯಿ ಮಾಂಸ ತಂದು, ನಗರದ ವಿವಿಧ ಹೋಟೆಲ್‌ಗಳಿಗೆ ಸರಬರಾಜು ಮಾಡಲಾಗುತ್ತಿದೆ. ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಪ್ಲೈ ಆಗುತ್ತಿದ್ದು, ಕುರಿ ಮಾಂಸ ಅಂತ ಹೇಳಿ ನಾಯಿ ಮಾಂಸವನ್ನು ತರಿಸಿ ಇಲ್ಲಿನ ಹೋಟೆಲ್‌ಗಳಿಗೆ ೭೦೦-೮೦೦ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net