ಟೆಕ್ಕಿಗಳಿಗೆ 14 ತಾಸು ಕೆಲಸ? ಕಾನೂನು ತರುವ ಸರ್ಕಾರದ ಪ್ರಸ್ತಾವನೆಗೆ ಐಟಿ ವಲಯ ವಿರೋಧ

ವಿಜಯವಾಣಿ (4)
Published on

ಬೆಂಗಳೂರು: ಖಾಸಗಿ ಉದ್ಯಮದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲು ಮಸೂದೆ ಪ್ರಸ್ತಾಪ ಹಾಗೂ ಗಿಗ್ ವರ್ಕರ್ ರಕ್ಷಣೆಗಾಗಿ ರೂಪಿಸಿದ ವಿಧೇಯಕ ವಿವಾದಾತ್ಮಕವಾದ ಬೆನ್ನಲ್ಲೇ ಈಗ ಐಟಿ ಉದ್ಯೋಗಿಗಳಿಂದ ಪ್ರತಿ ದಿನ 14 ತಾಸು (ವಾರದ 5 ದಿನ)ಕೆಲಸ ಮಾಡಿಸಿ ಕೊಳ್ಳಲು ಅವಕಾಶ ಮಾಡಿಕೊಡುವ ಕಾನೂನು ತರಲು ಹೊರಟ ಸರ್ಕಾರದ ಪ್ರಯತ್ನದ ಬಗ್ಗೆ ಅಪಸ್ವರ ಕೇಳಿಬಂದಿದೆ.

ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ 14 ಗಂಟೆಗಳ ಕೆಲಸದ ದಿನಕ್ಕೆ ಅನುಕೂಲವಾಗುವಂತೆ ಮಾಡುವ ಪ್ರಸ್ತಾವನೆ ಸಿದ್ಧವಾಗಿತ್ತು. ಸಂಪುಟ ಸಭೆಯ ಮುಂದೆಯೂ ಚರ್ಚೆಯಾಗಿ ತಡೆ ಹಿಡಿಯಲಾಗಿತ್ತು. ಆದರೆ ಪುನಃ ಆ ವಿಚಾರ ಮುನ್ನೆಲೆಗೆ ಬಂದಿದ್ದು, ದುಡಿಯುವ ವರ್ಗದ ಮೇಲೆ ದೊಡ್ಡ ದಾಳಿ ಎಂದು ರಾಜ್ಯ ಐಟಿ ಹಾಗೂ ಐಟಿ ಸಂಬಂಧಿತ ಸೇವೆ ನೀಡುವ ನೌಕರರ ಒಕ್ಕೂಟ (ಕೆಐಟಿಯು) ತನ್ನ ಅಸಮಾಧಾನವನ್ನು ಸರ್ಕಾರದ ಬಳಿ ದಾಖಲಿಸಿದೆ. ಇನ್ನೊಂದೆಡೆ ಸರ್ಕಾರದಲ್ಲಿ ಈ ಕಾಯ್ದೆ ಆಗಬೇಕೆಂದು ಬಯಸುವ ಸಚಿವರು ಕೆಲವರಿದ್ದರೆ, ಆಗ ಕೂಡದೆಂದು ಬಲವಾಗಿ ಪ್ರತಿಪಾದಿಸುವವರೂ ಇದ್ದಾರೆ. ಹೀಗಾಗಿ ಸರ್ಕಾರದ ಮಟ್ಟದಲ್ಲಿ ಸಂಕಟ ಶುರುವಾಗಿದೆ.

ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲು ಕಲ್ಪಿಸಲು ಮಸೂದೆ ಸಂಪುಟದಲ್ಲಿ ತಂದ ಸಂದರ್ಭದಲ್ಲಿಯೂ ಸಂಪುಟ ಸದಸ್ಯರ ನಡುವೆ ವೈರುಧ್ಯ ಕಾಣಿಸಿತ್ತು. ಅನುಷ್ಠಾನ ಆಗಬೇಕೆನ್ನುವವರು ಒಂದು ಕಡೆಯಾದರೆ, ಈ ವಿಚಾರ ನಮ್ಮ ವ್ಯಾಪ್ತಿಗೂ ಬರುತ್ತದೆ, ನಮ್ಮ ಅಭಿಪ್ರಾಯ ಪಡೆಯದೇ ಮುಂದುವರಿದದ್ದು ಹೇಗೆ ಎಂದು ಸಚಿವರು ಪ್ರಶ್ನೆ ಎತ್ತಿದ ಪ್ರಸಂಗವೂ ನಡೆದಿದೆ.

ಅವಧಿ ಹೆಚ್ಚಳಕ್ಕೆ ಕಾರಣ: ಉದ್ಯೋಗಿಗಳ ಕೆಲಸದ ಅವಧಿ ಹೆಚ್ಚಿಸಬೇಕೆಂದು ಕೆಲವು ಬಹುರಾಷ್ಟ್ರೀಯ ಕಂಪನಿಗಳು ಸರ್ಕಾರದ ಮಟ್ಟದಲ್ಲಿ ಒತ್ತಡ ತಂದಿದ್ದವು. ಇತ್ತೀಚೆಗೆ ಹೂಡಿಕೆ ಮಾಡಿರುವವರು ಇಂತಹದ್ದೊಂದು ಕಾನೂನಿನ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದ್ದವು. ಜತೆಗೆ ನೆರೆಯ ರಾಜ್ಯಗಳಲ್ಲಿ ಈಗಾಗಲೆ ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಕೆಲಸದ ಅವಧಿ ವಿಸ್ತರಿಸಿದರೆ ಹೂಡಿಕೆದಾರರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂಬ ಸಲಹೆ ಕೂಡ ವ್ಯಕ್ತವಾಗಿತ್ತು.

ಸರ್ಕಾರಕ್ಕೆ ಒತ್ತಾಯ: ಕರ್ನಾಟಕ ಐಟಿ, ಐಟಿ ಆಧಾರಿತ ಸೇವೆ ನೀಡುವ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರ ಸಂಘಟನೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಈ ಹೊಸ ವಿಧೇಯಕದಿಂದ ಯಾವ ರೀತಿ ಸಂಕಷ್ಟ ಎದುರಾಗಲಿದೆ ಎಂದು ವಿವರಿಸಿದೆ. ಜತೆಗೆ ಇದು ಗುಲಾಮಿತನದ ಸಂಕೇತ ಎಂದು ಪ್ರತಿಪಾದಿಸಿದೆ. ಐಟಿ ವಲಯದ ಶೇ.45 ಉದ್ಯೋಗಿಗಳು ಈಗಲೇ ಒತ್ತಡದ ಜೀವನದಿಂದ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲಸದ ಸಮಯ ಹೆಚ್ಚಿಸಿದರೆ ಆರೋಗ್ಯ ಸಮಸ್ಯೆ ಬಿಗಡಾಯಿಸಲಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಇಂತಹ ಕಾನೂನಿನಿಂದ ಉದ್ಯೋಗಿಯ ಹಕ್ಕಿನ ವಿಚಾರ ಗಂಭೀರವಾಗಿ ಪರಿಗಣಿತವಾಗಿ ಅನ್ಯ ದೇಶಗಳು ಒಡಂಬಡಿಕೆಗಳಿಗೆ ಯೋಚಿಸಬಹುದು ಎಂದು ಎಚ್ಚರಿಸಿದೆ.

ಆಕ್ಷೇಪಕ್ಕೆ ಕಾರಣ: ಪ್ರಸ್ತುತ ಅಸ್ತಿತ್ವದಲ್ಲಿರುವ ಕಾಯಿದೆ ದಿನಕ್ಕೆ ಗರಿಷ್ಠ 10 ಗಂಟೆಗಳ ಕೆಲಸವನ್ನು ಮಾತ್ರ ಅನುಮತಿಸುತ್ತದೆ. ಹೊಸ ಪ್ರಸ್ತಾವನೆಯಲ್ಲಿ ಐಟಿ ಮತ್ತು ಐಟಿ ಸಂಬಂಧಿತ ಸೇವೆಯ ಕಂಪನಿಗಳಿಗೆ ದೈನಂದಿನ ಕೆಲಸದ ಸಮಯವನ್ನು ವಿಸ್ತರಿಸಲು ಅವಕಾಶವಾಗಲಿದೆ. ಒಂದು ದಿನದಲ್ಲಿ 12 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಲು ಅನುಮತಿ ನೀಡಬಹುದು. ಹೊಸ ಪ್ರಸ್ತಾವನೆ ಜಾರಿಗೆ ಬಂದರೆ ಮೂರು ಪಾಳಿಯ ವ್ಯವಸ್ಥೆ ಇರುವ ಕಡೆ ಎರಡು ಪಾಳಿಗೆ ಸೀಮಿತವಾಗಲಿದೆ. ಹೀಗಾಗಿ ಒಂದು ಪಾಳಿಯಲ್ಲಿ ಕೆಲಸ ಮಾಡುವ ನೌಕರರು ಕೆಲಸ ಕಳೆದುಕೊಳ್ಳಬೇಕಾಗಿ ಬರಬಹುದು.

ಇಂತಹ ಕಾನೂನು ತರುವ ಮುನ್ನ ಸರ್ಕಾರ ಮರು ಚಿಂತನೆ ಮಾಡಲಿ. ಐಟಿ, ಐಟಿ ಸಂಬಂಧಿತ ಸೇವೆ ನೀಡುವ ಕ್ಷೇತ್ರದಲ್ಲಿ 20 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿದ್ದು, ನಮ್ಮ ಮೇಲೆ ಗುಲಾಮಗಿರಿಯನ್ನು ಹೇರುವ ಅಮಾನವೀಯ ಪ್ರಯತ್ನ.

| ಸುಹಾಸ್ ಅಡಿಗ, ಪ್ರ.ಕಾರ್ಯದರ್ಶಿ, ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net