

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸ್ಮಾಲ್ ಸ್ಯಾಟ್ಲೈಟ್ ಲಾಂಚ್ ವೆಹಿಕಲ್-ಡಿ2 (ಎಸ್ಎಸ್ಎಲ್ವಿ) ಹೆಸರಿನ ಹೊಸ ರಾಕೆಟ್ ಶುಕ್ರವಾರ (ಫೆ.10) ಬೆಳಗ್ಗೆ ಯಶಸ್ವಿಯಾಗಿ ಉಡಾವಣೆಗೊಂಡಿತು.
ಆಂಧ್ರ ಪ್ರದೇಶದ ಶ್ರಿಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್ನಿಂದ ಎರಡನೇ ಬಾರಿಗೆ ಸುಮಾರು 120 ಟನ್ ತೂಕದ 34 ಮೀಟರ್ ಎತ್ತರದ ಎಸ್ಎಸ್ಎಲ್ವಿ-ಡಿ2 ರಾಕೆಟ್ ಅನ್ನು ಶುಕ್ರವಾರ ಬೆಳಗ್ಗೆ ಸರಿಯಾಗಿ 9.18ಕ್ಕೆ ಆಗಸಕ್ಕೆ ಚಿಮ್ಮಿತು.
15 ನಿಮಿಷಗಳ ಯಾತ್ರೆಯೊಳಗೆ ರಾಕೆಟ್ ಮೂರು ಉಪಗ್ರಹಗಳನ್ನು ಭೂಮಿಯಿಂದ 450 ಕಿಲೋಮೀಟರ್ ಎತ್ತರದಲ್ಲಿ ವೃತ್ತಾಕಾರದ ಕಕ್ಷೆಗೆ ಸೇರಿಸಲಿದೆ. ಇಸ್ರೋದ ಇಒಎಸ್ -07, ಅಮೆರಿಕದ ಅಂತಾರಿಸ್ ಜಾನುಸ್ -1 ಹಾಗೂ ಚೆನ್ನೈನ ಸ್ಪೇಸ್ ಕಿಡ್ಸ್ ಸಂಸ್ಥೆಯ ಆಜಾದಿ ಸ್ಯಾಟ್-2 ಎಂಬ ಮೂರು ಉಪಗ್ರಹಗಳನ್ನು ರಾಕೆಟ್ ಹೊತ್ತೊಯಿತು.
ಇಸ್ರೋ 156.3 ಕೆ.ಜಿ ತೂಕದ ಇಒಎಸ್-07 ಉಪಗ್ರಹವನ್ನು ನಿರ್ವಿುಸಿದ್ದು, ಇದು ನೂತನ ಪ್ರಯೋಗಗಳಾದ ಎಂಎಂ ವೇವ್ ಹ್ಯುಮಿಡಿಟಿ ಸೌಂಡರ್, ಸ್ಪೆಕ್ಟ್ರಮ್ ಮಾನಿಟರಿಂಗ್ ಪೇಲೋಡ್ಗಳನ್ನು ಒಳಗೊಂಡಿದೆ. ಆಜಾದಿಸ್ಯಾಟ್ -2 ಉಪಗ್ರಹವನ್ನು ಭಾರತದಾದ್ಯಂತ ಇರುವ 750 ವಿದ್ಯಾರ್ಥಿನಿಯರು ಚೆನ್ನೈನ ಸ್ಪೇಸ್ ಕಿಡ್ಸ್ ಸಹಕಾರದೊಂದಿಗೆ ಅಭಿವೃದ್ಧಿಪಡಿಸಿದ್ದಾರೆ.
ಎನ್ಸಿಸಿ ಹಾಡು: ರಾಷ್ಟ್ರೀಯ ಕೆಡೆಟ್ ಕೋರ್ ಸ್ಥಾಪನೆಯ 75ನೇ ವರ್ಷದ ಗೌರವಾರ್ಥವಾಗಿ ಆಜಾದಿಸ್ಯಾಟ್ -2 ಉಪಗ್ರಹವು ಎನ್ಸಿಸಿ ಹಾಡನ್ನು ಪ್ಲೇ ಮಾಡುತ್ತದೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ನಡೆದ ಎಸ್ಎಸ್ಎಲ್ವಿ-ಡಿ1 ರಾಕೆಟ್ ಉಡಾವಣೆ ವೇಳೆ ವೇಗದ ಕೊರತೆಯಿಂದಾಗಿ ಅತ್ಯಂತ ದೀರ್ಘ ಕಕ್ಷೆಯಲ್ಲಿ ಜೋಡಿಸಲ್ಪಟ ಉಪಗ್ರಹಗಳು ಕ್ಷಿಪ್ರವಾಗಿ ಅಸ್ಥಿರಗೊಂಡು ವೈಫಲ್ಯಗೊಂಡಿತ್ತು. ರಾಕೆಟ್ನ ಮೊದಲ ಮೂರು ಹಂತಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ್ದರೂ ಸಮಸ್ಯೆ ಉಂಟಾಗಿತ್ತು. ಇದನ್ನು ಮನಗಂಡಿರುವ ಇಸ್ರೋ ಅಗತ್ಯ ಬದಲಾವಣೆಗಳೊಂದಿಗೆ ಎರಡನೇ ಬಾರಿಗೆ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಪ್ರಯತ್ನ ಮಾಡಿದೆ. (ಏಜೆನ್ಸೀಸ್)