

ಮುಂಬೈ: ಇತ್ತೀಚೆಗಷ್ಟೇ ಮದುವೆಯಾದ ಬಾಲಿವುಡ್ ನಟಿ ರಾಖಿ ಸಾವಂತ್ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎಬ್ಬಿದೆ. ಮೈಸೂರು ಮೂಲದ ಪತಿ ಆದಿಲ್ ದುರಾನಿ ವಿರುದ್ಧ ಅಸಹಜ ಲೈಂಗಿಕ ಕ್ರಿಯೆ ಮತ್ತು ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದು, ಆತನನ್ನು ಬಂಧಿಸಿರುವ ಮುಂಬೈ ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಇದೀಗ ಆದಿಲ್ ದುರಾನಿಗೆ ಅಂಧೇರಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ನನ್ನ ಜೊತೆ ಬಲವಂತವಾಗಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಅಲ್ಲದೆ, ವರದಕ್ಷಿಣೆ ವಿಚಾರವಾಗಿ ಹಲ್ಲೆ ಮಾಡಿದ್ದು, ನನಗೆ ತಿಳಿಸದೇ ನನ್ನ ಫ್ಲ್ಯಾಟ್ನಲ್ಲಿದ್ದ ಹಣ ಮತ್ತು ಆಭರಣಗಳನ್ನು ದೋಚಿದ್ದಾನೆ ಎಂದು ರಾಖಿ ಸಾವಂತ್, ಆದಿಲ್ ದುರಾನಿ ವಿರುದ್ಧ ದೂರು ದಾಖಲಿಸಿದ್ದಾಳೆ.
ನನ್ನ ಜೀವನವನ್ನೇ ಹಾಳು ಮಾಡಿದ ಎಂದು ದೂರಿರುವ ರಾಖಿ ಸಾವಂತ್, ನನ್ನೊಂದಿಗೆ ಮದುವೆ ಸಂಬಂಧ ಕಡಿದುಕೊಂಡು ತನ್ನ ಗರ್ಲ್ಫ್ರೆಂಡ್ ತನು ಜೊತೆ ವಾಸಿಸುತ್ತಿದ್ದನು ಎಂದು ರಾಖಿ ಆರೋಪ ಮಾಡಿದ್ದಾರೆ.
ಫೆ. 6ರಂದು ರಾಖಿ ದೂರು ನೀಡಿದ್ದು, ನಿನ್ನೆ ರಾತ್ರಿಯೇ ಆದಿಲ್ ದುರಾನಿಯನ್ನು ಮುಂಬೈ ಪೊಲೀಸರು ಬಂಧಿಸಿದರು. ಇಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ಅಂಧೇರಿ ನ್ಯಾಯಾಲಯ ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಪೊಲೀಸ್ ಮೂಲಗಳ ಪ್ರಕಾರ ರಾಖಿ ಸಾವಂತ್ ಮತ್ತು ಆದಿಲ್ ದುರಾನಿ 2022ರ ಜನವರಿಯಲ್ಲಿ ಭೇಟಿಯಾದರು ಮತ್ತು ಇಬ್ಬರು ಒಟ್ಟಿಗೆ ಜಂಟಿ ಬಿಸಿನೆಸ್ ಖಾತೆಯನ್ನು ತರೆದರು. ರಾಖಿ, ಪ್ರಕಾರ ಕಾರು ಖರೀದಿಗೆಂದು 2022ರ ಜೂನ್ ತಿಂಗಳಲ್ಲಿ ಆದಿಲ್ ಖಾತೆಯಿಂದ 1.5 ಕೋಟಿ ರೂಪಾಯಿ ತೆಗೆದುಕೊಂಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.
ಪ್ರಕರಣದ ಬಗ್ಗೆ ರಾಖಿ ಸಾವಂತ್ ಪರ ವಕೀಲ ಫಲ್ಗುಣಿ ಬ್ರಹ್ಮಭಟ್ ಮಾತನಾಡಿ, ಆದಿಲ್ ದುರಾನಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ನಾವು ಕೇಳಿಕೊಂಡೆವು ಆದರೆ, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು ಎಂದರು.
ಕಳೆದ ಫೆ. 2ರಂದು ಜಿಮ್ಗೆ ತೆರಳುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ರಾಖಿ ಸಾವಂತ್, ಆದಿಲ್ ದುರ್ರಾನಿ ಬಗ್ಗೆ ಮಾತನಾಡುತ್ತಾ ಕಣ್ಣೀರಾಕಿದರು. ಮರಾಠಿಯ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾಗ ಆದಿಲ್ ನನಗೆ ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದ್ದರು. ದುರಾನಿಯ ಯಾವುದೇ ಸಂದರ್ಶನ ಮಾಡದಂತೆ ಮಾಧ್ಯಮದವರ ಬಳಿ ಮನವಿ ಮಾಡಿದರು. ಅವನನ್ನು ದೊಡ್ಡ ಸ್ಟಾರ್ ಮಾಡಲು ಪ್ರಯತ್ನಿಸುವುದು ನನಗೆ ಇಷ್ಟವಿಲ್ಲ. ನನ್ನನ್ನು ಬಳಸಿಕೊಂಡು ಆತ ಬಾಲಿವುಡ್ ಪ್ರವೇಶಿಸಲು ಬಯಸುತ್ತಿದ್ದಾನೆ ಎಂದಿದ್ದರು. (ಏಜೆನ್ಸೀಸ್)