ಇಂದಿನಿಂದ ಮಹಿಳಾ ಟಿ20 ವಿಶ್ವಕಪ್: ಭಾನುವಾರ ಭಾರತ-ಪಾಕ್​ ಪಂದ್ಯ

Women Cricket
Published on

ಕೇಪ್​ಟೌನ್: ಮಹಿಳೆಯರ 8ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿ ಶುಕ್ರವಾರದಿಂದ ಹರಿಣಗಳ ನಾಡಿನಲ್ಲಿ ನಡೆಯಲಿದೆ. ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. 6ನೇ ಬಾರಿ ಪ್ರಶಸ್ತಿ ಜಯಿಸುವ ಉತ್ಸಾಹದಲ್ಲಿರುವ ಆಸ್ಟ್ರೇಲಿಯಾ ತಂಡ ಟೂರ್ನಿಯ ಹಾಟ್ ಫೇವರಿಟ್ ಎನಿಸಿದ್ದರೆ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ತಂಡಗಳು ಪ್ರಬಲ ಪೈಪೋಟಿ ಒಡ್ಡಲು ಸಜ್ಜಾಗಿವೆ.

ಆಸ್ಟ್ರೇಲಿಯಾ ತಂಡ ಕಳೆದ 22 ತಿಂಗಳಲ್ಲಿ ಆಡಿದ ಟಿ20 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಸೋತಿದೆ. ಆ ಏಕೈಕ ಸೋಲು ಭಾರತದ ವಿರುದ್ಧ ಸೂಪರ್ ಓವರ್​ನಲ್ಲಿ ಬಂದಿತ್ತು. ನಾಯಕಿ ಮೆಗ್ ಲ್ಯಾನಿಂಗ್, ಅಲಿಸ್ಸಾ ಹೀಲಿ, ಎಲ್ಲಿಸ್ ಪೆರ್ರಿ ಮತ್ತು ತಹ್ಲಿಯಾ ಮೆಕ್​ಗ್ರಾಥ್ ಆಸೀಸ್ ತಂಡದ ಪ್ರಮುಖ ಬಲವಾಗಿದ್ದಾರೆ. ಎಲ್ಲ ಪ್ರಮುಖ ಆಟಗಾರ್ತಿಯರು ಈ ಟೂರ್ನಿ ಮುಗಿದ ಐದೇ ದಿನಗಳಲ್ಲಿ ಭಾರತದಲ್ಲಿ ನಡೆಯಲಿರುವ ‘ಮಹಿಳಾ ಐಪಿಎಲ್’ ಖ್ಯಾತಿಯ ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಕಣಕ್ಕಿಳಿಯಲಿದ್ದಾರೆ.

ಗುಂಪುಗಳು

ಎ: ಆಸ್ಟ್ರೇಲಿಯಾ, ಬಾಂಗ್ಲಾದೇಶ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ.

ಬಿ: ಭಾರತ, ಇಂಗ್ಲೆಂಡ್, ಐರ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್.

ಭಾರತದ ಪಂದ್ಯಗಳು ದಿನಾಂಕ : ಎದುರಾಳಿ

  • ಫೆ. 12 : ಪಾಕಿಸ್ತಾನ
  • ಫೆ. 15 : ವೆಸ್ಟ್ ಇಂಡೀಸ್ಫೆ
  • . 18 : ಇಂಗ್ಲೆಂಡ್ಫೆ
  • . 20 : ಐರ್ಲೆಂಡ್

ಆರಂಭ: ಸಂಜೆ 6.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಕಳೆದ 7 ಆವೃತ್ತಿಯ ಮಹಿಳೆಯರ ಟಿ20 ವಿಶ್ವಕಪ್​ಗಳಲ್ಲಿ ಆಸ್ಟ್ರೇಲಿಯಾ ತಂಡ 5 ಬಾರಿ (2010, 2012, 2014, 2018, 2020) ಗೆದ್ದು ಪ್ರಾಬಲ್ಯ ಮೆರೆದಿದೆ. ಇಂಗ್ಲೆಂಡ್ (2009) ಮತ್ತು ವೆಸ್ಟ್ ಇಂಡೀಸ್ (2016) ತಲಾ ಒಮ್ಮೆ ಗೆದ್ದಿವೆ.

ಭಾರತ-ಪಾಕ್ ಭಾನುವಾರ್

ಕಳೆದ ಆವೃತ್ತಿಯಲ್ಲಿ ರನ್ನರ್​ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಭಾರತದ ಮಹಿಳೆಯರು ಈ ಬಾರಿ ಇನ್ನೊಂದು ಹೆಜ್ಜೆ ಮೇಲೇರಿ ಇತಿಹಾಸ ನಿರ್ವಿುಸುವ ತವಕದಲ್ಲಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ 19 ವಯೋಮಿತಿ ಮಹಿಳೆಯರ ಟಿ20 ವಿಶ್ವಕಪ್​ನಲ್ಲಿ ಭಾರತದ ಕಿರಿಯರು ಪ್ರಶಸ್ತಿ ಗೆದ್ದ ಸಾಧನೆ ಹರ್ವನ್​ಪ್ರೀತ್ ಕೌರ್ ಪಡೆಗೆ ಸ್ಪೂರ್ತಿ ತುಂಬಿದೆ. ಕಿರಿಯರ ತಂಡದ ನಾಯಕಿ ಶೆಫಾಲಿ ವರ್ಮ ಮತ್ತು ರಿಚಾ ಘೋಷ್ ಈಗ ಹಿರಿಯರ ತಂಡವನ್ನು ಕೂಡಿಕೊಂಡಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ಭಾರತ ತಂಡ ಭಾನುವಾರ ಅಭಿಯಾನ ಆರಂಭಿಸಲಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ಆಡಿದ ಟಿ20 ತ್ರಿಕೋನ ಸರಣಿಯ ಫೈನಲ್​ನಲ್ಲಿ ಎಡವಿದ್ದ ಭಾರತ, ಅಭ್ಯಾಸ ಪಂದ್ಯದಲ್ಲಿ ಆಸೀಸ್ ವಿರುದ್ಧವೂ ಸೋತಿತ್ತು. ಈ ಹಿನ್ನಡೆಗಳಿಂದ ಭಾರತದ ಮಹಿಳೆಯರು ಮೇಲೆದ್ದು ಬರಬೇಕಿದೆ.

ಟೂರ್ನಿ ಸ್ವರೂಪ

ಟೂರ್ನಿಯಲ್ಲಿ ಆಡುವ 10 ತಂಡಗಳನ್ನು ತಲಾ 5ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ರೌಂಡ್ ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್​ಗೇರಲಿವೆ. ಫೆ. 26ರಂದು ಕೇಪ್​ಟೌನ್​ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

16 ಕೋಟಿ ರೂ. ಬಹುಮಾನ

ಟೂರ್ನಿಯ ಒಟ್ಟು ಬಹುಮಾನ ಮೊತ್ತ 16.51 ಕೋಟಿ ರೂ. ಆಗಿದೆ. ವಿಜೇತ ತಂಡ 8.25 ಕೋಟಿ ರೂ. ಬಹುಮಾನ ಪಡೆಯಲಿದೆ. ರನ್ನರ್​ಅಪ್ ತಂಡ 4.12 ಕೋಟಿ ರೂ. ಗಳಿಸಲಿದೆ. ಸೆಮಿಫೈನಲ್​ನಲ್ಲಿ ಸೋತ 2 ತಂಡಗಳು ತಲಾ 1.36 ಕೋಟಿ ರೂ. ಪಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net