ಓಷಿಯನ್​ಸ್ಯಾಟ್ ಕಕ್ಷೆಗೆ ಸೇರಿಸಿದ ಇಸ್ರೊ ರಾಕೆಟ್; ಶ್ರೀಹರಿಕೋಟಾದಲ್ಲಿ ಪಿಎಸ್​ಎಲ್​ವಿ-ಸಿ54 ಉಡಾವಣೆ

4564
Published on

ಶ್ರೀಹರಿಕೋಟಾ (ಆಂಧ್ರಪ್ರದೇಶ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಪಿಎಸ್​ಎಲ್​ವಿ-ಸಿ54 ರಾಕೆಟ್ ಶನಿವಾರ ‘ಓಷಿಯನ್​ಸ್ಯಾಟ್’ ಮತ್ತು ಇತರ 8 ನ್ಯಾನೊ ಉಪಗ್ರಹವನ್ನು ಸೂರ್ಯಪರಿಭ್ರಮಣೆ ಅನುಗುಣ ಕಕ್ಷೆಗೆ (ಸನ್-ಸಿಂಕ್ರೊನಸ್ ಆರ್ಬಿಟ್) ಯಶಸ್ವಿಯಾಗಿ ಸೇರಿಸಿತು. 44.4 ಮೀಟರ್ ಎತ್ತರದ ರಾಕೆಟ್ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 11.56ಕ್ಕೆ ಉಡಾವಣೆಗೊಂಡಿತು ಎಂದು ಇಸ್ರೊ ತಿಳಿಸಿದೆ.

17 ನಿಮಿಷದಲ್ಲಿ ಪ್ರತ್ಯೇಕ: ಪಿಎಸ್​ಎಲ್​ವಿ-ಸಿ54./ಇಒಎಸ್ 06 ಗಗನಕ್ಕೆ ನೆಗೆದ 17 ನಿಮಿಷದ ನಂತರ 754 ಕಿ.ಮೀ. ದೂರದಲ್ಲಿ ಭೂ ಪರಿವೀಕ್ಷಣಾ ಉಪಗ್ರಹ ‘ಓಷಿಯನ್​ಸ್ಯಾಟ್’ ರಾಕೆಟ್​ನಿಂದ ಯಶಸ್ವಿಯಾಗಿ ಪ್ರತ್ಯೇಕಗೊಂಡು ಕಕ್ಷೆ ಸೇರಿತು. ಓಷಿಯನ್​ಸ್ಯಾಟ್ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ನಂತರ ವಿಜ್ಞಾನಿಗಳು ರಾಕೆಟ್​ಅನ್ನು 528 ಕಿ.ಮೀ. ಕೆಳ ಮಟ್ಟಕ್ಕೆ ತರಿಸಿ ಉಳಿದ ಉಪಗ್ರಹಗಳನ್ನು ವಿವಿಧ ಕಕ್ಷೆಯಲ್ಲಿ ಇರಿಸಿದರು. ಈ ಎಲ್ಲ ಪ್ರಕ್ರಿಯೆಗೆ ಸುಮಾರು ಎರಡು ಗಂಟೆ ತಗಲಿತು. ಪಿಎಸ್​ಎಲ್​ವಿಯ ಈ ಉಡಾವಣೆಯು ಇಸ್ರೊ ನಡೆಸಿದ 56ನೇ ಉಡಾವಣೆ ಆಗಿದೆ ಎಂದು ಈ ಯೋಜನೆಯ ನಿರ್ದೇಶಕ ಎಸ್.ಆರ್.ಬಿಜು ಹೇಳಿದ್ದಾರೆ.

3ನೇ ತಲೆಮಾರು: ಭೂ ಪರಿವೀಕ್ಷಣಾ ಉಪಗ್ರಹ-6, ಓಷಿಯನ್​ಸ್ಯಾಟ್ ಸರಣಿಯ ಮೂರನೇ ತಲೆಮಾರಿನ ಉಪಗ್ರಹವಾಗಿದೆ. ಓಷಿಯನ್​ಸ್ಯಾಟ್-2 ಬಾಹ್ಯಾಕಾಶ ನೌಕೆಗೆ ಸೇವೆಗಳನ್ನು ಮುಂದುವರಿಸಲು ಅಗತ್ಯವಾದ ಬೆಂಬಲವನ್ನು ಅದು ಒದಗಿಸುತ್ತದೆ. ಪ್ಲೇಲೋಡ್​ಗಳ ಹೆಚ್ಚಳಕ್ಕೆ ಹಾಗೂ ಅನ್ವಯ ವಿಚಾರಗಳಲ್ಲೂ ಅದು ನೆರವಾಗಲಿದೆ. ಸಾಗರ ಬಣ್ಣ ಮತ್ತು ವಾಯು ವೆಕ್ಟರ್ ಡೇಟಾವನ್ನು ಇದು ಒದಗಿಸಲಿದೆ.

8 ನ್ಯಾನೊ ಉಪಗ್ರಹ: ಎಂಟು ನ್ಯಾನೊ ಉಪಗ್ರಹಗಳ ಪೈಕಿ ಭೂತಾನ್ (ಐಎನ್​ಎಸ್-2ಬಿ) ‘ನ್ಯಾನೊಎಂಎಕ್ಸ್’, ‘ಎಪಿಆರ್​ಎಸ್-ಡಿಜಿಪೀಟರ್’ಗಳಿವೆ. ನ್ಯಾನೊಎಂಕ್ಸ್ ಬಹುಆಯಾಮದ ಆಪ್ಟಿಕಲ್ ಇಮೇಂಜಿಗ್ ಉಪಗ್ರಹ ವಾಗಿದ್ದು, ಎಪಿಆರ್​ಎಸ್-ಡಿಜಿಪೀಟರ್ ಅನ್ನು ಭೂತಾನ್ ಐಟಿ, ಟೆಲಿಕಾಂ ಇಲಾಖೆಗಳು ಹಾಗೂ ಬೆಂಗಳೂರಿನ ಯು.ಆರ್.ರಾವ್ ಕೇಂದ್ರ ಜಂಟಿಯಾಗಿ ಅಭಿವೃದ್ಧಿ ಪಡಿಸಿವೆ. ಬೆಂಗಳೂರು ಮೂಲದ ಪಿಕ್ಸೆಲ್ ಸ್ಟಾರ್ಟಪ್ ಅಭಿವೃದ್ಧಿ ಪಡಿಸಿರುವ ‘ಆನಂದ್’ ನ್ಯಾನೊ ಸ್ಯಾಟ್, ಧ್ರುವ ಸ್ಪೇಸ್ ಸ್ಟಾರ್ಟಪ್ ಅಭಿವೃದ್ಧಿ ಪಡಿಸಿದ ‘ಥೈಬೋಲ್ಟ್’ ಹೆಸರಿನ ಎರಡು ಉಪಗ್ರಹಗಳು, ಅಮೆರಿಕದ ಆಸ್ಟ್ರೋಕಾಸ್ಟ್ ಸಂಸ್ಥೆಯ ಒಂದು ನ್ಯಾನೊ ಸ್ಯಾಟ್ ನಭಕ್ಕೆ ಸೇರಿದೆ.

ಪಿಎಸ್​ಎಲ್​ವಿ-ಸಿ54 /ಇಒಎಸ್-06 ಯೋಜನೆ ಯಶಸ್ವಿಗೊಳಿಸಿದ ಇಸ್ರೊ ವಿಜ್ಞಾನಿಗಳಿಗೆ ಅಭಿನಂದನೆ. ಓಷಿಯನ್​ಸ್ಯಾಟ್ ಜತೆಗೆ ಮಿತ್ರರಾಷ್ಟ್ರ ಭೂತಾನ್ ಮೊದಲ ಬಾರಿಗೆ ಅಭಿವೃದ್ಧಿ ಪಡಿಸಿದ ನ್ಯಾನೊ ಉಪಗ್ರಹ ಹಾಗೂ ಸ್ಟಾರ್ಟಪ್​ಗಳು ತಯಾರಿಸಿದ ಸ್ಯಾಟಲೈಟ್ ಉಡಾವಣೆಯಿಂದ ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಪ್ರತಿಭೆಯು ಸಾಕಾರವಾಗುತ್ತಿದೆ.
| ನರೇಂದ್ರ ಮೋದಿ ಪ್ರಧಾನಿ

ಪಿಎಸ್​ಎಲ್​ವಿ-ಸಿ54 ರಾಕೆಟ್ ಉಡಾವಣೆ ಯಶಸ್ವಿಯಾಗುವ ಮೂಲಕ ವಿಶಿಷ್ಟವಾದ ಓಷಿಯನ್​ಸ್ಯಾಟ್ ನಿಗದಿತ ಕಕ್ಷೆಗೆ ಸೇರಿದೆ. ಇದೇ ಮೊದಲ ಬಾರಿಗೆ ಎರಡು ಕಕ್ಷೆಗಳಿಗೆ ಒಂದೇ ರಾಕೆಟ್ ಮೂಲಕ ಉಪಗ್ರಹಗಳನ್ನು ಕಳುಹಿಸುವ ಸವಾಲಿನ ಕೆಲಸವನ್ನು ನಮ್ಮ ವಿಜ್ಞಾನಿಗಳು ಯಶಸ್ವಿಯಾಗಿ ಮಾಡಿದ್ದಾರೆ.
| ಎಸ್.ಸೋಮನಾಥ್ ಇಸ್ರೊ ಅಧ್ಯಕ್ಷ

ಚಂದ್ರನನ್ನು ತಲುಪಿದ ಓರಿಯಾನ್

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕಳೆದ ವಾರ ಉಡಾವಣೆ ಮಾಡಿದ್ದ ಓರಿಯಾನ್ ಕ್ಯಾಪ್ಸೂಲ್ ಚಂದ್ರನ ಹಿಂದಿನ ಭಾಗವನ್ನು ಸುತ್ತುಹೊಡೆಯಿತು. ಚಂದ್ರನ ಕಕ್ಷೆಯ 128 ಕಿ.ಮೀ. ಫಾಸಲೆಯೊಳಗೆ ಹಾದುಹೋಗುವ ಮೂಲಕ ದಾಖಲೆ ಬರೆದಿದೆ. ಅದರ ಚಿತ್ರವನ್ನು ನಾಸಾ ಹಂಚಿಕೊಂಡಿದೆ. ಕ್ರ್ಯೂ ಕ್ಯಾಪ್ಸೂಲ್ ಮತ್ತು ಅದರ ಮೂರು ಟೆಸ್ಟ್ ಡಮ್ಮಿಗಳು ಚಂದ್ರನ ದೂರದ ಬದಿಯಲ್ಲಿದ್ದಾಗ ಕ್ಯಾಪ್ಸೂಲ್ ಅದರ ಸಮೀಪ ಸುಳಿಯಿತು. ಭೂಮಿಯಿಂದ 3,75,000 ಕಿ.ಮೀ.ಗೂ ಹೆಚ್ಚು ದೂರದಲ್ಲಿರುವ ಚಂದ್ರನಲ್ಲಿಗೆ ಸಾಸಾ 50 ವರ್ಷಗಳ ಹಿಂದೆ ಅಪೋಲೊ ಗಗನನೌಕೆಯನ್ನು ಕಳುಹಿಸಿತ್ತು. ನಂತರ ಇದೇ ಮೊದಲ ಬಾರಿಗೆ ಕ್ಯಾಪ್ಸೂಲೊಂದು ಚಂದ್ರಾನ್ವೇಷಣೆಯಲ್ಲಿ ತೊಡಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net