ಅಗ್ನಿಬಾನ್​ ರಾಕೆಟ್​​ ಯಶಸ್ವಿ ಉಡಾವಣೆಗೆ ಇಸ್ರೋ ಶ್ಲಾಘನೆ

Agnikul
Published on

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಗ್ನಿಕುಲ್ ಕಾಸ್ಮೊಸ್ ತನ್ನ ಅಗ್ನಿಬಾನ್ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುತ್ತಿದ್ದಂತೆ, ಭಾರತದಲ್ಲಿ ಖಾಸಗಿ ಬಾಹ್ಯಾಕಾಶ ಸಾಹಸಗಳಿಗೆ ಇದು ಮಹತ್ವದ ಮೈಲಿಗಲ್ಲು ಎಂದು ಹೇಳಿದೆ.

ಖಾಸಗಿ ಲಾಂಚ್ ಪಾಡ್‌ನಿಂದ ಗುರುವಾರ ಬೆಳಗ್ಗೆ 7 ಗಂಟೆಗೆ ಅಗ್ನಿಬಾನ್ ಸೋರ್ಟೆಡ್ 1 ಮಿಷನ್ ಅನ್ನು ಉಡಾವಣೆ ಮಾಡಲಾಯಿತು. ತಿರುಪತಿ ಜಿಲ್ಲೆಯ ಶ್ರೀಹರಿಕೋಟಾದಲ್ಲಿ ಖಾಸಗಿ ಲಾಂಚ್ ಪಾಡ್‌ನಿಂದ ಅಗ್ನಿಬಾನ್ ಖಾಸಗಿ ರಾಕೆಟ್ ಅನ್ನು ಉಡಾವಣೆ ಮಾಡಿರುವುದು ಇದೇ ಮೊದಲು. ಈ ಹಿಂದೆ ಕೊನೆಯ ಕ್ಷಣದಲ್ಲಿ ತಾಂತ್ರಿಕ ಕಾರಣಗಳಿಂದ ಉಡಾವಣೆ ನಾಲ್ಕು ಬಾರಿ ಮುಂದೂಡಲ್ಪಟ್ಟಿತು. 5ನೇ ಬಾರಿಗೆ ಚೆನ್ನೈ ಮೂಲದ ಸ್ಟಾರ್ಟಪ್ ಕಂಪನಿ ಅಗ್ನಿಕುಲ್ ಕಾಸ್ಮೊಸ್ ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ.

ಈ ಸಾಧನೆಯು ಭಾರತೀಯ ಖಾಸಗಿ ಉಡಾವಣಾ ವಾಹನದ ಎರಡನೇ ಪರೀಕ್ಷಾರ್ಥ ಹಾರಾಟವಾಗಿದೆ. ಈ ಮೊದಲು ನವೆಂಬರ್ 2022ರಲ್ಲಿ ಸ್ಕೈರೂಟ್ ಏರೋಸ್ಪೇಸ್‌ನಿಂದ ವಿಕ್ರಮ್-ಎಸ್ ಅನ್ನು ಉಡಾವಣೆ ಮಾಡಲಾಗಿತ್ತು. ಯಶಸ್ವಿ ಉಡಾವಣೆಯು ಭಾರತದ ಅಭಿವೃದ್ಧಿ ಹೊಂದುತ್ತಿರುವ ಬಾಹ್ಯಾಕಾಶ ಕ್ಷೇತ್ರಕ್ಕೆ ಖಾಸಗಿ ಕಂಪನಿಗಳ ಬೆಳೆಯುತ್ತಿರುವ ಸಾಮರ್ಥ್ಯಗಳು ಮತ್ತು ಕೊಡುಗೆಗಳನ್ನು ಒತ್ತಿಹೇಳುತ್ತದೆ ಎನ್ನಲಾಗಿದೆ.

ಅಗ್ನಿಬಾನ್ ರಾಕೆಟ್ ಎರಡು ಹಂತದ ರಾಕೆಟ್ ಆಗಿದೆ. ಇದು ಸುಮಾರು 700 ಕಿ.ಮೀ. ಎತ್ತರದಲ್ಲಿರುವ ಕಕ್ಷೆಗೆ 300 ಕೆಜಿಯವರೆಗಿನ ಪೇಲೋಡ್ ಅನ್ನು ಸಾಗಿಸಬಲ್ಲದು. ಈ ಪ್ರಯೋಗವು ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಖಾಸಗೀಕರಣದ ಪ್ರಯತ್ನಗಳಲ್ಲಿ ಪ್ರಮುಖವಾಗಿದೆ. ಭವಿಷ್ಯದಲ್ಲಿ ಸಣ್ಣ ಉಪಗ್ರಹಗಳನ್ನು ಕಡಿಮೆ ಭೂಮಿಯ ಕಕ್ಷೆಗೆ ಉಡಾಯಿಸಲು ಇಸ್ರೋ ಈ ರೀತಿಯ ಪ್ರಯೋಗವನ್ನು ಉತ್ತೇಜಿಸುತ್ತದೆ. ಇಸ್ರೋ ಅಧ್ಯಕ್ಷ ಡಾ.ಸೋಮನಾಥ್ ಉಡಾವಣಾ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಿದರು. ಇದು ದೇಶದ ಮೊದಲ ಸೆಮಿ ಕ್ರಯೋಜೆನಿಕ್ ಎಂಜಿನ್ ಆಧಾರಿತ ರಾಕೆಟ್ ಆಗಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net