ಮೂರನೆಯ ಮಹಾಯುದ್ಧದ ಆತಂಕಕ್ಕೆ ಅಂಕೆ ಇರಲಿ | Isreal Iran War

iran
Published on
iran war
ಇರಾನ್ ಪರವಾಗಿ ಹೋರಾಡಲು ಯಾವುದೇ ಮಹಾಶಕ್ತಿ ಅದರ ಜತೆಗಿಲ್ಲ. ಆದರೆ, ಇಸ್ರೇಲ್ (Isreal Iran War) ಪರವಾಗಿ ಅಮೆರಿಕ ಗಟ್ಟಿಯಾಗಿ ನಿಂತಿದೆ, ನಿಂತೇ ಇರುತ್ತದೆ. ಇದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಜತೆಗೆ ಬ್ರಿಟನ್ ಸಹ ಪೂರ್ಣವಾಗಿ ಇಸ್ರೇಲ್ ಪರವಾಗಿದೆ. ಕಳೆದ ವಾರಾಂತ್ಯದಲ್ಲಿ ಫ್ರಾನ್ಸ್ ನಡುವೆ ಉಂಟಾಗಿದ್ದ ವಿವಾದ ಒಂದೇ ದಿನದಲ್ಲಿ ತಣ್ಣಗಾಗಿದೆ.

ಇಸ್ರೇಲ್ ಮೇಲೆ ಹಮಾಸ್ ಇಪ್ಪತ್ತು ನಿಮಿಷಗಳಷ್ಟು ಕಡಿಮೆ ಆವಧಿಯಲ್ಲಿ ಸುಮಾರು ಏಳುಸಾವಿರ ಕ್ಷಿಪಣಿಗಳ ಮೂಲಕ ದಾಳಿಯೆಸಗಿ, ಗಡಿಯೊಳಗೂ ನುಗ್ಗಿ ಒಂದುಸಾವಿರದ ಇನ್ನೂರರಷ್ಟು ನಾಗರಿಕರನ್ನು ಬರ್ಬರವಾಗಿ ಕೊಂದು, ಇನ್ನೂರೈವತ್ತರಷ್ಟು ಜನರನ್ನು ಬಂಧಿಗಳಾಗಿ ಗಾಝಾದೊಳಕ್ಕೆ ಎಳೆದುಕೊಂಡು ಹೋಗಿ ಇದೇ ಅಕ್ಟೋಬರ್ 7ಕ್ಕೆ ಒಂದು ವರ್ಷವಾಯಿತು. ಅಂದು ಇಸ್ರೇಲಿಗಳಿಗಾದ ಆಘಾತ, ದುಃಖ ಮತ್ತು ಕ್ರೋಧ ಅಭೂತಪೂರ್ವ. ಅವೆಲ್ಲವುಗಳ ಪರಿಣಾಮವಾಗಿ ಅವರಲ್ಲಿ ಉಕ್ಕಿದ ಸೇಡು ಕಳೆದೊಂದು ವರ್ಷದಲ್ಲಿ ಗಾಝಾವನ್ನು ಸರಿಸುಮಾರು ಸ್ಮಶಾನವಾಗಿಸಿದೆ, ಅಲ್ಲಿನ ಸುಮಾರು 42,000 ನಾಗರಿಕರು ಹತರಾಗಿದ್ದಾರೆ, 67% ಕಟ್ಟಡಗಳು ಪೂರ್ಣವಾಗಿ ನೆಲಸಮವಾಗಿವೆ. ಇಸ್ರೇಲಿ ಸೇನೆ ಓ(ಇಸ್ರೇಲಿ ಡಿಫೆನ್ಸ್ ಫೋರ್ಸಸ್, ಐಡಿಎಫ್) ಹೇಳುವ ಪ್ರಕಾರ ಇಪ್ಪತೆôದರಿಂದ ಮೂವತ್ತು ಸಾವಿರದಷ್ಟಿರಬಹುದಾದ ಹಮಾಸ್ ಉಗ್ರಗಾಮಿಗಳಲ್ಲಿ ಹದಿನೇಳು ಸಾವಿರದಷ್ಟನ್ನು ಅದು ಕೊಂದಿದೆ. ಅವರಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹಾನಿಯೇ ಸೇರಿದಂತೆ ಇಪ್ಪತ್ತೊಂದು ಅತಿಮುಖ್ಯ ನಾಯಕರೂ ಸೇರಿದ್ದಾರೆ. ‘ಪ್ಯಾಲಸ್ಟೀನಿಯನ್ನರ ಸ್ವಾತಂತ್ರ್ಯ ಮತ್ತವರ ನೆಮ್ಮದಿಯ ಬದುಕಿಗಾಗಿ ಹೋರಾಡುತ್ತಿದ್ದೇನೆ’ ಎಂದು ಹೇಳಿಕೊಳ್ಳುವ ಹಮಾಸ್ ಇದುವರೆಗೆ ಸಾಧಿಸಿದ್ದು ಇದು!

ಐಡಿಎಫ್ ನೀಡುವ ಲೆಕ್ಕದ ಪ್ರಕಾರ ಗಾಝಾ ಕಾರ್ಯಾಚರಣೆಯಲ್ಲಿ ಅದು ಇದುವರೆಗೆ ಕಳೆದುಕೊಂಡಿರುವುದು 726 ಸೈನಿಕರನ್ನು. ಒಟ್ಟಾರೆಯಾಗಿ ಇಸ್ರೇಲ್ ರಾಷ್ಟ್ರವಾಗಲೀ, ಐಡಿಎಫ್ ಆಗಲೀ ಗಮನಾರ್ಹ ಹಾನಿಯನ್ನೇನೂ ಅನುಭವಿಸಿಲ್ಲ. ಈ ‘ಯಶಸ್ಸು’ ಕಳೆದೆರಡು ವಾರಗಳಿಂದಲೂ ಇಸ್ರೇಲ್​ನ ಗಮನವನ್ನು ಉತ್ತರದ ಲೆಬನಾನ್​ನಲ್ಲಿ ಪಟ್ಟಾಗಿ ಕೂತು ಯೆಹೂದಿ ರಾಷ್ಟ್ರವನ್ನು ನಿರಂತರವಾಗಿ ಕೆಣಕುತ್ತಿದ್ದ ಹೆಝೊ್ಬಲ್ಲಾದತ್ತ ತಿರುಗಿಸಿದೆ. ಆ ಶಿಯಾ ಸಂಘಟನೆಯ ಮುಖ್ಯ ಠಿಕಾಣಿಗಳು ಮತ್ತು ಶಸ್ತ್ರಸಂಗ್ರಹಗಳನ್ನು ನಾಶಗೊಳಿಸುವುದರ ಜತೆಗೆ ಮೂರು ದಶಕಗಳಿಂದಲೂ ಅದರ ಮೇರುನಾಯಕನಾಗಿದ್ದ ಸೈಯದ್ ಇಸ್ಮಾಯಿಲ್ ನಸರುಲ್ಲಾನನ್ನು ಐಡಿಎಫ್ ಕೊಂದಿದೆ. ಹೆಝೊ್ಬಲ್ಲಾ ನಾಯಕತ್ವ ವಹಿಸಿಕೊಂಡ ಹಾಶಿಮ್ ಸಫೆದ್ದೀನ್ ಸಹ ಕೆಲವೇ ದಿನಗಳಲ್ಲಿ ಐಡಿಎಫ್ ದಾಳಿಗೆ ಬಲಿಯಾಗಿದ್ದಾನೆ.

ಇದೆಲ್ಲಕ್ಕೆ ಪ್ರತಿಯಾಗಿ ಇಸ್ರೇಲ್ ಗಳಿಸಿರುವುದೇನು?

ವರ್ಷದ ಹಿಂದೆ ಹಮಾಸ್ ಬಂಧಿಗಳನ್ನಾಗಿಸಿಕೊಂಡವರಲ್ಲಿ ಬಿಡುಗಡೆಯಾದವರು ಬೆರಳೆಣಿಕೆಯಷ್ಟೇ. ಬಹುತೇಕರು ಹಮಾಸ್​ನಿಂದ ಹತ್ಯೆಗೊಳಗಾಗಿದ್ದಾರೆ ಅಥವಾ ಅನಾರೋಗ್ಯ ಮತ್ತು ನಿತ್ರಾಣತೆಯಿಂದಾಗಿ ಸಾವಿಗೀಡಾಗಿದ್ದಾರೆ. ಗಾಝಾದಲ್ಲಿ ಇನ್ನೂ ಇರಬಹುದಾದ ಸುರಂಗಗಳಲ್ಲಿ ಬದುಕಿ ಉಳಿದಿರುವವರು 97 ಬಂಧಿಗಳು ಮಾತ್ರ ಎಂದು ಒಂದು ವರದಿ ಹೇಳುತ್ತದೆ. ಇನ್ನು ಹಮಾಸ್​ನ್ನು ಐಡಿಎಫ್ ಪೂರ್ಣವಾಗಿ ನಿಗ್ರಹಿಸಿದೆಯೇ ಅಂದರೆ ಅದೂ ಇಲ್ಲ. ಹಮಾಸ್ ಬಲಹೀನಗೊಂಡಿದೆ, ಆದರೆ ಪೂರ್ಣವಾಗಿ ನೆಲಕಚ್ಚಿಲ್ಲ. ಇಂದಿಗೂ ಅದು ದಿನಕ್ಕೆ ನೂರರಷ್ಟು ಡ್ರೋನ್​ಗಳ ಮೂಲಕ ಇಸ್ರೇಲ್ ಮೇಲೆ ದಾಳಿಯೆಸಗುತ್ತಲೇ ಇದೆ. ದೂರ ದಕ್ಷಿಣದ ಯೆಮೆನ್​ನ ಹೂತಿಗಳೂ ಅವರ ಜತೆ ಸೇರಿಕೊಂಡು ಯೆಹೂದಿ ರಾಷ್ಟ್ರದ ನೆಮ್ಮದಿಗೆಡಿಸುತ್ತಿದ್ದಾರೆ. ಹೆಝೊ್ಬಲ್ಲಾ ಸಹ ಸದ್ಯಕ್ಕೆ ಕುಸಿದುಬೀಳುವ ಸಾಧ್ಯತೆ ಕಂಡುಬರುತ್ತಿಲ್ಲ. ಇವೆಲ್ಲವುಗಳ ಜತೆ ಇರಾನ್ ಸಹ ಇಸ್ರೇಲ್ ಮೇಲೆ ಇದೇ ಅಕ್ಟೋಬರ್ 1ರ ರಾತ್ರಿ 181 ಕ್ಷಿಪಣಿಗಳಿಂದ ದಾಳಿ ನಡೆಸಿದೆ. ಅವುಗಳಲ್ಲಿ ಬಹುತೇಕವನ್ನು ಇಸ್ರೇಲ್​ನ ಹೆಸರಾಂತ ಆರೋ, ಡೇವಿಡ್ಸ್ ಸ್ಲಿಂಗ್, ಐರನ್ ಡೋಮ್ ಐರನ್ ಬೀಮ್ ಕ್ಷಿಪಣಿ ನಿರೋಧಕ ವ್ಯವಸ್ಥೆಗಳ ಜತೆ ಅಮೆರಿಕದ ಕ್ಷಿಪಣಿ ನಿರೋಧಕ ವ್ಯವಸ್ಥೆಯೂ ಸೇರಿಕೊಂಡು ನಾಶಗೊಳಿಸಿವೆ. ಆದಾಗ್ಯೂ, ಇರಾನ್​ನ ಈ ಕೃತ್ಯ ಇಸ್ರೇಲ್ ಅನ್ನು ಇನ್ನಷ್ಟು ಕೆರಳಿಸಿ ಅದನ್ನು ಪ್ರತೀಕಾರಕ್ಕೆ ಸಜ್ಜುಗೊಳಿಸುತ್ತಿದೆ. ಇಸ್ರೇಲಿ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ‘ಇರಾನ್ ದೊಡ್ಡ ತಪ್ಪನ್ನು ಎಸಗಿದೆ... ಪರಿಣಾಮವನ್ನು ಅದು ಅನುಭವಿಸಲಿದೆ’ ಎಂದು ನೇರ ಎಚ್ಚರಿಕೆ ನೀಡಿರುವುದಲ್ಲದೆ ‘ಇಸ್ರೇಲ್ ಇಂದು ಏಳು ರಂಗಗಳ ಯುದ್ಧದಲ್ಲಿ ಹೋರಾಡುತ್ತಿದೆ’ ಎಂದು ತಮ್ಮ ರಾಷ್ಟ್ರ ಇಂದು ಇರುವ ಸ್ಥಿತಿಯನ್ನು ಜಗತ್ತಿಗೆ ಸಾರಿದ್ದಾರೆ. ಇದು ಸೂಚಿಸುವ ಇಸ್ರೇಲ್ ಮತ್ತು ಇರಾನ್​ಗಳ ನಡುವಿನ ನೇರ ಸಂಘರ್ಷವನ್ನು ಜಗತ್ತು ಆತಂಕದಿಂದ ಎದರುನೋಡುತ್ತಿದೆ.

ಮುಂದೇನಾಗಬಹುದು? ಈ ಪ್ರಶ್ನೆಗೆ ಉತ್ತರ ಹುಡುಕುವ ಮೊದಲು ಹಿಂದೇನಾಗಿತ್ತು ಎನ್ನುವುದನ್ನೊಮ್ಮೆ ನೆನಪಿಸಿಕೊಳ್ಳುವುದು ಅಗತ್ಯ.

ಕಳೆದ ವರ್ಷದ ಅಕ್ಟೋಬರ್ ಮೊದಲವಾರದವರೆಗೂ ಪಶ್ಚಿಮ ಏಷ್ಯಾ ಕನಿಷ್ಠ ಎರಡು ವರ್ಷಗಳ ತಾತ್ಕಾಲಿಕ ಶಾಂತಿಯನ್ನು ಅನುಭವಿಸಿತ್ತು ಮತ್ತು ಪರಿಸ್ಥಿತಿ ವೇಗವಾಗಿ ಸುಧಾರಿಸಿ ಹಳೆಯ ವೈರಿಗಳ ನಡುವೆ ಸ್ನೇಹ-ಸಹಕಾರ ಹಾಗೂ ಆರ್ಥಿಕ ಸಹಭಾಗಿತ್ವ ಅಭೂತಪೂರ್ವ ಎನ್ನಿಸುವ ಮಟ್ಟಕ್ಕೇರುವ ಸೂಚನೆಯೂ ಕಂಡುಬಂದಿತ್ತು. ಜಾಗತಿಕವಾಗಿ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಇಂಡಿಯಾ ಮಿಡ್ಲ್-ಈಸ್ಟ್ -ಯುರೋಪ್ ಕಾರಿಡಾರ್’ (ಐಎಂಇಸಿ, ಐಮೆಕ್) ಯೋಜನೆಯ ಅಂಗವಾಗಿ ಭಾರತದಿಂದ ಯುಎಎವರೆಗೆ ನೌಕಾಮಾರ್ಗ, ಯುಎಇ, ಸೌದಿ ಅರೇಬಿಯಾ, ಜೋರ್ಡಾನ್ ಮತ್ತು ಇಸ್ರೇಲ್​ಗಳ ಮೂಲಕ ರೈಲುಮಾರ್ಗ, ನಂತರ ಅದಾನಿ ಗ್ರೂಪ್ ನಿರ್ವಹಿಸುತ್ತಿರುವ ಇಸ್ರೇಲ್​ನ ಹೈಫಾ ಬಂದರಿನಿಂದ ಗ್ರೀಸ್ ಮತ್ತು ಇಟಲಿಯ ಬಂದರುಗಳಿಗೆ ನೌಕಾಮಾರ್ಗ, ಅಲ್ಲಿಂದ ಇಡೀ ಯುರೋಪಿಯನ್ ಯೂನಿಯನ್​ನಲ್ಲಿ ಈಗಾಗಲೇ ಇರುವ ಸುವ್ಯವಸ್ಥಿತ ರಸ್ತೆ ಮತ್ತು ರೈಲುಮಾರ್ಗಗಳ ಜಾಲಕ್ಕೆ ಸಂಪರ್ಕವುಂಟಾಗಿ ಭಾರತ, ಮಧ್ಯ ಏಷ್ಯಾ ಮತ್ತು ಯುರೋಪ್​ನ್ನು ಆರ್ಥಿಕವಾಗಿ ಬೆಸೆದುಕೊಳ್ಳುವ ಕನಸನ್ನು ಈ ವಲಯದ ಎಲ್ಲ ದೇಶಗಳೂ ಕಂಡಿದ್ದವು. ಅದರಲ್ಲಿ ಗಮನಾರ್ಹವಾಗಿದ್ದದ್ದು ಅರಬ್ ದೇಶಗಳು ಮತ್ತು ಇಸ್ರೇಲ್​ಗಳು ರಸ್ತೆ ಮತ್ತು ರೈಲುಮಾರ್ಗಗಳ ಮೂಲಕ ಆರ್ಥಿಕವಾಗಿ ಗಾಢ ಸಹಭಾಗಿತ್ವ ಹೊಂದುವ ಚಿತ್ರಣ. ಆರ್ಥಿಕವಾಗಿ ಬೆಸೆದುಕೊಂಡ ದೇಶಗಳು ಯುದ್ಧಕ್ಕಿಳಿಯುವುದಿಲ್ಲ ಎನ್ನವುದು ಮತ್ತೆಮತ್ತೆ ಸಾಬೀತಾಗಿರುವ ಐತಿಹಾಸಿಕ ಸತ್ಯ. ಇದರರ್ಥ ಅರಬ್ ದೇಶಗಳು ಮತ್ತು ಇಸ್ರೇಲ್ ನಡುವೆ ಶಾಶ್ವತ ಅಥವಾ ದೀರ್ಘಕಾಲೀನ ಮೈತ್ರಿಯನ್ನು ಸ್ಥಾಪಿಸಿ ಸಂಘರ್ಷದ ಯುಗವನ್ನು ಇತಿಹಾಸಕ್ಕೆ ಸೇರಿಸಿಬಿಡುವ ಸ್ಪಷ್ಟ ಸೂಚನೆಯನ್ನು ಐಮೆಕ್ ಯೋಜನೆ ನೀಡಿತ್ತು.

ಈ ಶಾಂತ, ಸುಂದರ ಕನಸು ಕಿಸುರಾದದ್ದು ಚೀನಾ, ಟರ್ಕಿ ಮತ್ತು ಇರಾನ್​ಗಳ ಕಣ್ಣಿಗೆ. ತಮಗೆ ಸ್ಥಾನವಿಲ್ಲದ ಐಮೆಕ್ ಯೋಜನೆ ಚಾಲ್ತಿಗೆ ಬಂದಲ್ಲಿ ಈ ವಲಯದಲ್ಲಿ ತಾವು ಆರ್ಥಿಕವಾಗಿ ಪಕ್ಕಕ್ಕೆ ಸರಿಸಲ್ಪಡುವುದು ನಿಶ್ಚಿತ ಮತ್ತು ಆ ಕಾರಣದಿಂದಾಗಿ ಏಷ್ಯಾ ಯುರೋಪ್ ರಾಜತಂತ್ರದಲ್ಲೂ ತಮ್ಮ ಪ್ರಭಾವ ಕುಸಿದುಹೋಗುತ್ತದೆ ಎಂದು ಶಂಕಿಸಿದ ಈ ಮೂವರ ದುಷ್ಟಕೂಟ ಇಡೀ ಯೋಜನೆಯನ್ನೇ ಹಾಳುಗೆಡಹುವ ಕರಾಳ ಸಂಚು ರೂಪಿಸಿತು. ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವೆ ಮತ್ತೆ ವೈಮನಸ್ಯ ದೊಡ್ಡದಾಗಿ ಭುಗಿಲೇಳುವಂತೆ ಮಾಡುವುದು ಐಮೆಕ್ ಯೋಜನೆಯನ್ನು ಮೊಳಕೆಯಲ್ಲೇ ಚಿವುಟಿಹಾಕುವ ಅತ್ಯುತ್ತಮ ಮಾರ್ಗ ಎಂದೆಣಿಸಿದ ಈ ಮೂರು ದೇಶಗಳು ಅದಕ್ಕಾಗಿ ಆರಿಸಿಕೊಂಡದ್ದು ಹಮಾಸ್​ನ್ನು. ಅದರ ಪರಿಣಾಮವೇ 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ಎಸಗಿದ ಬರ್ಬರ ದಾಳಿ. ನಿರೀಕ್ಷೆಯಂತೆ ಇಸ್ರೇಲ್ ತನ್ನ ಪ್ರತಿಕಾರ್ಯಾಚರಣೆ ಆರಂಭಿಸಿತು, ಲೆವಾಂಟ್ (ಪಶ್ಚಿಮ ಏಷ್ಯಾದ ಮೆಡಿಟರೇನಿಯನ್ ಸಮುದ್ರತೀರದ ನಾಡುಗಳು) ಮತ್ತೆ ಹೊತ್ತಿ ಉರಿಯತೊಡಗಿತು, ಇನ್ನೂ ಉರಿಯುತ್ತಲೇ ಇದೆ. ಈ ಉರಿ ಇಸ್ರೇಲ್-ಇರಾನ್ ಸಂಘರ್ಷಕ್ಕೆ ಕಾರಣವಾಗಿ ಮೂರನೆಯ ಜಾಗತಿಕ ಮಹಾಯುದ್ಧಕ್ಕೆ ಕಾರಣವಾಗುತ್ತದೆ ಎಂಬ ಮಾತು ಇಂದು ದೊಡ್ಡದಾಗಿಯೇ ಕೇಳಿಬರುತ್ತಿದೆ. ಇದೆಷ್ಟು ಸತ್ಯ?

ಮೊದಲನೆಯ ಮತ್ತು ಎರಡನೆಯ ಮಹಾಯುದ್ಧಗಳಲ್ಲಿ ಭಾಗಿಯಾಗಿದ್ದುದು ಆ ದಿನಗಳ ಜಾಗತಿಕ ಶಕ್ತಿಗಳು. ಎರಡೂ ಗುಂಪುಗಳಲ್ಲಿ ಎರಡಕ್ಕಿಂತ ಹೆಚ್ಚು ಮಹಾಶಕ್ತಿಗಳಿದ್ದವು ಮತ್ತು ಎರಡೂ ಗುಂಪಿನ ಸೇನಾಶಕ್ತಿ ಸರಿಸುಮಾರು ಸಮವೇ ಆಗಿತ್ತು. ಯುದ್ಧವನ್ನು ಗೆಲ್ಲುವ ವಿಶ್ವಾಸ ಎರಡು ಗುಂಪುಗಳಲ್ಲೂ ಇತ್ತು. ಆದರೆ ಇಂದಿನ ಸ್ಥಿತಿ ಹಾಗಿಲ್ಲ. ಇಸ್ರೇಲ್ ಮತ್ತು ಇರಾನ್ ಜಾಗತಿಕ ಶಕ್ತಿಗಳಲ್ಲ ಮತ್ತು ಅವುಗಳ ಬೆನ್ನಿಗೆ ನಿಂತಿರುವ ದೇಶಗಳ ಶಕ್ತಿ ಹಾಗೂ ನಿಷ್ಠೆಯಲ್ಲಿ ಅಗಾಧ ವ್ಯತ್ಯಾಸವಿದೆ. ಇರಾನ್​ನ ಸೇನೆ ಹಾಗೂ ನೌಕಾಪಡೆ ಇಸ್ರೇಲ್​ನದಕ್ಕಿಂತಲೂ ದೊಡ್ಡದಿದ್ದರೂ ಈ ಸಂದರ್ಭದಲ್ಲಿ ಅವು ಉಪಯೋಗಕ್ಕೆ ಬರುವುದಿಲ್ಲ. ಇರಾನ್ ತನ್ನ ಸೇನೆಯನ್ನು ಇಸ್ರೇಲ್​ನೊಳಗೆ ಕಳುಹಿಸಲು ಸಾಧ್ಯವಿಲ್ಲ. ಎರಡೂ ದೇಶಗಳ ನಡುವೆಯಿರುವ ಇರಾಕ್ ಮತ್ತು ಜೋರ್ದಾನ್ ಅದಕ್ಕೆ ಅವಕಾಶ ನೀಡುವುದಿಲ್ಲ. ಇನ್ನು ಇರಾನಿ ನೌಕಾಪಡೆ ಬಗ್ಗೆ ಹೇಳುವುದಾದರೆ ಅದು ಇರಾನಿ ಜಲಪ್ರದೇಶದ ಆಚೆ ಹೋಗಲು ಉತ್ತರ ಅರಬ್ಬಿ ಸಮುದ್ರದಲ್ಲಿ ಈಗಾಗಲೇ ಸಜ್ಜಾಗಿ ನಿಂತಿರುವ ಅಮೆರಿಕದ ನೌಕಾಪಡೆ ಬಿಡುವುದಿಲ್ಲ. ಇನ್ನುಳಿದದ್ದು ಇರಾನಿ ವಾಯುಪಡೆ ಮಾತ್ರ. ಅದರಲ್ಲಿರುವ ಐವತ್ತು ವರ್ಷ ಹಳೆಯ ಅಮೆರಿಕನ್ ಎಫ್-4 ಯುದ್ಧವಿಮಾನಗಳು ಇಂದು ಇಸ್ರೇಲ್ ಹೊಂದಿರುವ ಅತ್ಯಾಧುನಿಕ ಎಫ್-35 ಯುದ್ಧವಿಮಾನಗಳಿಗೆ ಯಾವ ವಿಧದಲ್ಲೂ ಸಾಟಿಯಲ್ಲ. ಹೀಗಾಗಿ ಇರಾನ್ ಅವಲಂಬಿಸುವುದು ಡ್ರೋನ್​ಗಳು ಮತ್ತು ಕ್ಷಿಪಣಿಗಳನ್ನು ಮಾತ್ರ. ಆದರೆ ಅವು ಅದೆಷ್ಟು ಪರಿಣಾಮಕಾರಿ ಎನ್ನುವುದನ್ನು ನಾವು ಕಳೆದ ಏಪ್ರಿಲ್​ನಲ್ಲೂ ನೋಡಿದ್ದೆವು ಮತ್ತು ಇದೇ ಅಕ್ಟೋಬರ್ 1ರಂದೂ ನೋಡಿದೆವು.

ಹೋಗಲಿ, ಇಸ್ರೇಲ್​ನ ವಾಯುದಾಳಿ ಮತ್ತು ಕ್ಷಿಪಣಿ ದಾಳಿಯನ್ನು ತಡೆಯುವ ಸಾಮರ್ಥ್ಯವಾದರೂ ಇರಾನ್​ಗಿದೆಯೇ ಅಂದರೆ ಅದೂ ಇಲ್ಲ. ಇರಾನ್​ನ ಅರ್ವನ್ ಕ್ಷಿಪಣಿ-ನಿರೋಧಕ ವ್ಯವಸ್ಥೆ ಮತ್ತು ಸ್ವನಿರ್ವಿುತ ರಕ್ಷಣಾವ್ಯವಸ್ಥೆಯು ಇಸ್ರೇಲ್​ನ ಐರನ್ ಡೋಮ್ ಮತ್ತು ಐರನ್ ಬೀಮ್ ವ್ಯವಸ್ಥೆಯ ಮುಂದೆ ಮಕ್ಕಳ ಆಟಿಕೆಗಳಷ್ಟೇ. ಇರಾನ್​ನ ಅಣುಸ್ಥಾವರಗಳು, ತೈಲ ಸಂಸ್ಕರಣಾಗಾರಗಳು, ಶಸ್ತ್ರಾಸ್ತ್ರ ಭಂಡಾರಗಳು ಮತ್ತು ಸೇನಾ ಠಿಕಾಣಿಗಳ ಮೇಲೆ ಇಸ್ರೇಲ್ ದಾಳಿಯೆಸಗಿದೆರೆ ಅದನ್ನು ತಡೆಯುವ ಸಾಮರ್ಥ್ಯ ಇರಾನ್​ಗಿಲ್ಲ.

ಅದೂ ಹೋಗಲಿ, ಇರಾನ್ ಪರವಾಗಿ ಹೋರಾಡಲು ಯಾವುದಾದರೂ ಮಹಾಶಕ್ತಿ ಇದೆಯೇ ಅಂತ ನೋಡೋಣ. ಇಸ್ರೇಲ್ ಪರವಾಗಿ ಅಮೆರಿಕ ಗಟ್ಟಿಯಾಗಿ ನಿಂತಿದೆ, ನಿಂತೇ ಇರುತ್ತದೆ. ಇದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಜತೆಗೆ ಬ್ರಿಟನ್ ಸಹ ಪೂರ್ಣವಾಗಿ ಇಸ್ರೇಲ್ ಪರವಾಗಿದೆ. ಕಳೆದ ವಾರಾಂತ್ಯದಲ್ಲಿ ಫ್ರಾನ್ಸ್ ನಡುವೆ ಉಂಟಾಗಿದ್ದ ವಿವಾದ ಒಂದೇ ದಿನದಲ್ಲಿ ತಣ್ಣಗಾಗಿದೆ. ‘ನಮ್ಮೆರಡೂ ದೇಶಗಳು ಘನಿಷ್ಟ ಮಿತ್ರರು’ ಎಂದು ಫ್ರೆಂಚ್ ಸರ್ಕಾರ ಹೇಳಿದ್ದಲ್ಲದೆ ‘ಶಾಂತಿಸ್ಥಾಪನೆ’ಗಾಗಿ ಪಶ್ಚಿಮ ಏಷ್ಯಾದ ರಾಜಧಾನಿಗಳಿಗೆ ಭೇಟಿ ನೀಡುತ್ತಿರುವ ಫ್ರೆಂಚ್ ವಿದೇಶಮಂತ್ರಿ ಜೀನ್-ನೊಯೇಲ್ ಬರೋ ಅಕೋಬರ್ 7ರಂದೇ ಇಸ್ರೇಲ್​ಗೂ ಹೋಗಿದ್ದಾರೆ.

ಹೀಗೆ ಅತ್ಯಂತ ಪ್ರಬಲ ದೇಶಗಳು ಇಸ್ರೇಲ್​ನ ಪರವಾಗಿ ನಿಂತಿವೆ ಅಥವಾ ಅದರ ವಿರುದ್ಧವಾಗಿ ಹೋಗುವುದಿಲ್ಲ ಎನ್ನವುದು ಸ್ಪಷ್ಟವಾಯಿತು. ಇರಾನ್ ಕಥೆ ಏನು? ಅದರ ಪರವಾಗಿ ದನಿಯೆತ್ತುವುದು ಚೀನಾ ಮತ್ತು ರಷ್ಯಾ. ಆದರೆ ತಮ್ಮ ದನಿಯನ್ನು ಸೇನಾಸಹಕಾರವಾಗಿ ಬದಲಾಯಿಸಲು ಅವು ತಯಾರಿಲ್ಲ. ಇರಾನ್ ಪರವಾಗಿ ಕಾಲುಕೆರೆದುಕೊಂಡು ಹೋಗಿ ಅಮೆರಿಕ ಮತ್ತು ಬ್ರಿಟನ್ ಅಂದರೆ ವ್ಯಾಟೋವನ್ನು ಎದುರು ಹಾಕಿಕೊಳ್ಳಲು ಅವು ತಯಾರಿಲ್ಲ. ಮಹಾಶಕ್ತಿಗಳಾವುವೂ ನಂಬಿಗಸ್ತ ಸಹಯೋಗಿಗಳಾಗಿಲ್ಲದ ಇರಾನ್​ಗೆ ಮುಸ್ಲಿಂ ದೇಶಗಳ ಬೆಂಬಲವೂ ಇಲ್ಲ ಎನ್ನುವುದು ಇನ್ನೊಂದು ವಾಸ್ತವ. ಇದನ್ನೊಂದಿಷ್ಟು ವಿವರವಾಗಿಯೇ ಹೇಳಬೇಕು.

ಪ್ಯಾಲಸೆ ôನ್ ಕುರಿತಾಗಿ ಅರಬ್ ದೇಶಗಳಲ್ಲೀಗ ಹಿಂದಿನ ಮಮತೆ ಇಲ್ಲ. ‘ಇಸ್ರೇಲ್​ನಿಂದ ನಮಗೊದಗಬಹುದಾದ ಆರ್ಥಿಕ ಹಾಗೂ ವೈಜ್ಞಾನಿಕ ಅನುಕೂಲತೆಗಳನ್ನು ನಾವು ಪ್ಯಾಲಸ್ತೀನಿಯನ್ನರಿಗಾಗಿ ಬಲಿಗೊಡುವುದು ವ್ಯಾವಹಾರಿಕ ನೀತಿಯಲ್ಲ’ ಎಂದು ಸೌದಿ ಅರೇಬಿಯಾ, ಯುಎಇ ಸೇರಿದಂತೆ ಬಹುತೇಕ ಅರಬ್ ದೇಶಗಳ ಸರ್ಕಾರಗಳು ಈಗ ತಿಳಿದುಕೊಂಡಿವೆ. ಆ ದೇಶಗಳ ಜನತೆಯ ಒಂದು ಭಾಗ ಪ್ಯಾಲಸ್ತೀನ್​ಗಾಗಿ ಇನ್ನೂ ದನಿಯೆತ್ತುತ್ತಿರುವುದರಿಂದ ಸರ್ಕಾರಗಳೂ ತಮ್ಮ ಇಸ್ರೇಲ್-ಪ್ರೀತಿಯನ್ನು ದೊಡ್ಡದಾಗಿ ವ್ಯಕ್ತಪಡಿಸುತ್ತಿಲ್ಲ. ಆದರೆ ತೆರೆಯ ಹಿಂದೆಯೇ ಇಸ್ರೇಲ್ ಜತೆಗೆ ಹಿತಕರ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುತ್ತಿವೆ. ಹೀಗಾಗಿ ಇಂದು ಅರಬ್ ಪ್ರಪಂಚದಲ್ಲಿ ಇಸ್ರೇಲ್ ಪರವಾದ ಗಾಳಿ ಬೀಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಒಳ್ಳೆಯದಾಗಬಹುದಾಗಿದ್ದ ಭವಿಷ್ಯವನ್ನು ಹಾಳುಗೆಡವಿದ್ದಕ್ಕಾಗಿ ಹಮಾಸ್ ಬಗ್ಗೆ ಅರಬ್ ದೇಶಗಳಲ್ಲಿ, ಮುಖ್ಯವಾಗಿ ಸೌದಿ ಅರೇಬಿಯಾ ಮತ್ತು ಯುಎಇಗಳಲ್ಲಿ ಆ ಭಯೋತ್ಪಾದಕ ಸಂಘಟನೆಯ ಬಗ್ಗೆ ತಿರಸ್ಕಾರ ಉಂಟಾಗಿದೆ. ಹಮಾಸ್ ಮತ್ತು ಹೂತಿಗಳನ್ನು ಇಸ್ರೇಲ್ ದಮನಿಸುತ್ತಿರುವುದರ ಬಗ್ಗೆ ಈ ದೇಶಗಳಿಗೆ ಸಮಾಧಾನವೇ ಆಗುತ್ತಿದೆ. ಇದರರ್ಥ ಇಷ್ಟೇ- ಬೀಜಿಂಗ್, ತೆಹರಾನ್ ಮತ್ತು ಅಂಕಾರಾಗಳ ಮಾತು ಕೇಳಿ ಹಮಾಸ್ ತನ್ನ ಮೇಲೆ ತಾನೇ ಕಲ್ಲುಹಾಕಿಕೊಂಡಿದೆ ಮತ್ತು ಅದನ್ನು ಅರಿಯುವಲ್ಲಿ ಸೋತು ಇರಾನ್ ಮೇಲೆ ಇನ್ನಷ್ಟು ಅವಲಂಬಿತವಾಗುತ್ತಿದೆ.

ಅರಬ್ ಸುನ್ನಿ ದೇಶಗಳು ಮತ್ತು ಶಿಯಾ ಇರಾನ್ ನಡುವಿನ ವೈಮನಸ್ಯ 1979ರ ಇರಾನಿ ಇಸ್ಲಾಮಿಕ್ ಕ್ರಾಂತಿಯ ತರುವಾಯ ತಡೆಯಿಲ್ಲದೆ ಏರುತ್ತಿರುವುದು ಸರ್ವವಿದಿತ. ಅದರ ಮುಂದುವರಿಕೆಯಾಗಿ, ಇಂದು ಇರಾನ್​ನ ಕಾಲಾಳುವಾಗಿರುವ ಹಮಾಸ್ ಮತ್ತು ಹೆಜ್ಬೊಲ್ಲಾಗಳೂ ಅರಬ್ ಪ್ರಪಂಚಕ್ಕೆ ಅಪಥ್ಯ. ಹಿಂದೆ ನಿಂತು ಅವುಗಳನ್ನು ಛೂ ಬಿಟ್ಟು ಈ ವಲಯದಲ್ಲಿ ಅಶಾಂತಿ ಹಬ್ಬಿಸುತ್ತಿರುವ ಇರಾನಿ ಮೂಲಭೂತವಾದಿ ಸರ್ಕಾರ ತೊಲಗಿದರೆ ಅರಬ್ ರಾಷ್ಟ್ರಗಳು ನೆಮ್ಮದಿಯಿಂದ ಉಸಿರಾಡುತ್ತವೆ ಮತ್ತು ಅದಕ್ಕಾಗಿ ಇಸ್ರೇಲ್​ಗೆ ಕೃತಜ್ಞರೂ ಆಗಿರುತ್ತವೆ. ಪಶ್ಚಿಮ ಏಷ್ಯಾದ ಭೂ-ರಾಜಕೀಯ, ಭೂ-ಆರ್ಥಿಕ ಮತ್ತು ಭೂ-ಸಾಮರಿಕ ವಾಸ್ತವಗಳು ಹೀಗಿರುವಾಗ ಇಸ್ರೇಲ್-ಇರಾನ್ ಸಂಘರ್ಷ ಮೂರನೆಯ ಮಹಾಯುದ್ಧಕ್ಕೆ ನಾಂದಿಯಾಗುತ್ತದೆ ಎಂದು ಹೇಳುವುದು ಈ ದಿನಗಳ ಇನ್ನೊಂದು ನಗೆಪಾಟಲಿನ ಬ್ರೇಕಿಂಗ್ ನ್ಯೂಸ್ ಬುರುಡೆಯಷ್ಟೇ.

-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net