ವಿರಾಮ ಅಂತ್ಯದ ಬೆನ್ನಲ್ಲೇ ಮತ್ತೆ ಆಸ್ಪೋಟಗೊಂಡ ಕದನ; ಗಾಜಾ ಪಟ್ಟಿ ಮೇಲೆ ಇಸ್ರೇಲ್ ಬರ್ಬರ ದಾಳಿ

gaza
Published on

ಗಾಜಾ: ಪ್ಯಾಲೆಸ್ತೀನಿ ಉಗ್ರಗಾಮಿ ಸಂಘಟನೆ ಹಮಾಸ್ ಮತ್ತು ಇಸ್ರೇಲ್ ನಡುವೆ ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ತಾತ್ಕಾಲಿಕ ನಿಲುಗಡೆ ಅವಧಿ ಶುಕ್ರವಾರ ಮುಗಿದ ಎರಡೇ ಗಂಟೆಯಲ್ಲಿ ಸಮರ ಮತ್ತೆ ಆಸ್ಪೋಟಗೊಂಡಿದ್ದು 54 ಪ್ಯಾಲೆಸ್ತೀನಿಯರು ಹತರಾಗಿದ್ದಾರೆ. ಕದನವಿರಾಮ ಒಪ್ಪಂದ ವಿಸ್ತರಿಸುವ ಸತತ ಪ್ರಯತ್ನಗಳು ವಿಫಲವಾದ ಹಿನ್ನೆಲೆ ಗಾಜಾ ಮೇಲೆ ಇಸ್ರೇಲ್ ವೈಮಾನಿಕ ಬಾಂಬ್ ದಾಳಿ ಪುನಾರಂಭಿಸಿದ್ದು ಸಾವುನೋವು ಹೆಚ್ಚುವ ಭೀತಿ ಉಂಟಾಗಿದೆ.

ಆರೋಪ-ಪ್ರತ್ಯಾರೋಪ: ಹಮಾಸ್ ಕದನ ವಿರಾಮ ಉಲ್ಲಂಘಿಸಿದೆ ಎಂದು ಇಸ್ರೇಲ್ ಆರೋಪಿಸಿದ್ದರೆ, ಯುದ್ಧ ಪುನಾರಂಭಕ್ಕೆ ಇಸ್ರೇಲ್ ಹೊಣೆ ಎಂದು ಹಮಾಸ್ ದೂಷಿಸಿದೆ. ಗುರುವಾರ ಮುಗಿಯಬೇಕಿದ್ದ ತಾತ್ಕಾಲಿಕ ಕದನ ನಿಲುಗಡೆ ಒಂದು ದಿನ ವಿಸ್ತರಣೆಯಾಗಿದ್ದು ಅದು ಅಂತ್ಯವಾಗುತ್ತಲೇ ಗಾಜಾ ಮೇಲೆ ಇಸ್ರೇಲ್ ವಿಮಾನಗಳ ಭೋರ್ಗರೆತ ಕೇಳಿಸಿ ಪ್ಯಾಲೆಸ್ತೀನೀಯರ ಆಕ್ರಂದನ ಆರಂಭವಾಗಿದೆ. ದಕ್ಷಿಣ ಗಾಜಾದ ಪೂರ್ವ ಭಾಗದ ಪ್ರದೇಶಗಳಲ್ಲಿ ತೀವ್ರ ಬಾಂಬ್ ದಾಳಿ ನಡೆದಿದ್ದು ಮುಗಿಲೆತ್ತರಕ್ಕೆ ಹೊಗೆ ಎದ್ದಿದ್ದು ಕಂಡು ಬಂತು. ಸಾವಿರಾರು ಜನರು ಬೀದಿಗಳಿಗೆ ಬಂದು ರಕ್ಷಣೆಗಾಗಿ ದಿಕ್ಕಾಪಾಲಾಗಿ ಓಡಿದರು. ಮೃತರು ಹಾಗೂ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಈಗಾಗಲೇ 54 ಜನರು ಮೃತಪಟ್ಟಿದ್ದಾರೆ. ಕನಿಷ್ಠ 8 ಮನೆಗಳು ಬಾಂಬ್ ದಾಳಿಗೆ ಒಳಗಾಗಿದ್ದು ಡಜನ್​ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಕತಾರ್ ವಿಷಾದ: ಕದನವಿರಾಮ ಪುನರುಜ್ಜೀವನಕ್ಕೆ ಪ್ರಯತ್ನಿಸುತ್ತಿ ರುವ ಮಧ್ಯಸ್ಥಿಕೆದಾರ ಕತಾರ್, ಮತ್ತೆ ಯುದ್ಧ ಆರಂಭಕ್ಕೆ ವಿಷಾದ ವ್ಯಕ್ತಪಡಿಸಿದೆ. ಪ್ರಯತ್ನಗಳು ಇನ್ನೂ ಮುಂದುವರಿದಿವೆ ಎಂದು ಕತಾರ್ ಅಧಿಕಾರಿಗಳು ಹೇಳಿದ್ದಾರೆ. ಕತಾರ್​ನೊಂದಿಗೆ ಈಜಿಪ್ಟ್ ಕೂಡ ಯುದ್ಧ ನಿಲುಗಡೆ ಯತ್ನದಲ್ಲಿ ಕೈ ಜೋಡಿಸಿದೆ. ಸಂಘರ್ಷ ಆರಂಭಕ್ಕೆ ಇಸ್ರೇಲ್ ಹೊಣೆ ಎಂದು 2 ದೇಶಗಳು ಅಭಿಪ್ರಾಯಪಟ್ಟಿವೆ.

ಪರಸ್ಪರ ಬಿಡುಗಡೆ: ಏಳು ದಿನಗಳ ಕದನವಿರಾಮದ ಅವಧಿಯಲ್ಲಿ ಹಮಾಸ್ ತನ್ನ ವಶದಲ್ಲಿದ್ದ 240 ಒತ್ತೆಯಾಳುಗಳ ಪೈಕಿ 100ಕ್ಕೂ ಹೆಚ್ಚು ಜನರನ್ನು ಬಿಡುಗಡೆ ಮಾಡಿದ್ದು ಅದಕ್ಕೆ ಪ್ರತಿಯಾಗಿ ಇಸ್ರೇಲ್ ತನ್ನ ಸೆರೆಮನೆಗಳಲ್ಲಿರುವ 240 ಪ್ಯಾಲೆಸ್ತೀನಿ ಕೈದಿಗಳನ್ನು ಬಿಟ್ಟಿದೆ.

ಮಕ್ಕಳ ಕೊಲೆಗೆ ವಿಶ್ವ ಸಂಸ್ಥೆ ಆತಂಕ: ಗಾಜಾದಲ್ಲಿ ಸಂಘರ್ಷ ಪುನಾರಂಭಗೊಂಡಿರುವುದನ್ನು ವಿಶ್ವ ಸಂಸ್ಥೆ ಶುಕ್ರವಾರ ಖಂಡಿಸಿದೆ. ‘ಮಕ್ಕಳ ಕೊಲೆ ಪುನಾರಂಭಿಸುವುದಕ್ಕೆ ಆಡಳಿತಗಾರರು ನಿರ್ಧರಿಸಿ ದ್ದಾರೆ’ ಎಂದು ಅದು ಖಾರವಾಗಿ ಹೇಳಿದೆ. ‘ನಿಷ್ಕ್ರಿಯತೆಯು ಮಕ್ಕಳ ಕೊಲೆಗೆ ಕೊಟ್ಟ ಒಪ್ಪಿಗೆಯೇ ಆಗುತ್ತದೆ’ ಎಂದು ವಿಶ್ವ ಸಂಸ್ಥೆಯ ಮಕ್ಕಳ ವಿಭಾಗವಾದ ಯುನಿಸೆಫ್​ನ ವಕ್ತಾರ ಜೇಮ್್ಸ ಎಲ್ಡರ್ ಅಭಿಪ್ರಾಯಪಟ್ಟಿದ್ದಾರೆ.

ವೀಸಾ ನಿಷೇಧ: ಅಮೆರಿಕ ಎಚ್ಚರಿಕೆ

ಈ ನಡುವೆ, ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ತೀನಿ ನಾಗರಿಕರ ವಿರುದ್ಧ ಹಿಂಸಾಚಾರದಲ್ಲಿ ತೊಡಗಿರುವ ಇಸ್ರೇಲಿ ಉಗ್ರಗಾಮಿಗಳ ವೀಸಾ ನಿಷೇಧಿಸುವುದಾಗಿ ಅಮೆರಿಕ ಎಚ್ಚರಿಕೆ ನೀಡಿದೆ. ಪ್ಯಾಲೆಸ್ತೀನಿಯರು ಬಯಸುವ ಸ್ವತಂತ್ರ ರಾಷ್ಟ್ರದಲ್ಲಿ ಪಶ್ಚಿಮ ದಂಡೆ ಪ್ರದೇಶವೂ ಸೇರಿದೆ. ಅಲ್ಲಿ ಇತ್ತೀಚಿನ ದಿನಗಳಲ್ಲಿ ಯೆಹೂದಿಗಳ ವಸಾಹತು ವಿಸ್ತರಣೆಯಾಗುತ್ತಿದ್ದು ಪ್ಯಾಲೆಸ್ತೀನಿಯರ ಮೇಲೆ ಹಿಂಸಾಚಾರ ಹೆಚ್ಚಿದೆ.

ನಗರ ತೊರೆಯುವಂತೆ ಕರಪತ್ರ ಸೂಚನೆ: ಖಾನ್ ಯೂನಿಸ್ ಪಟ್ಟಣದ ಪೂರ್ವ ಭಾಗಗಳನ್ನು ತೊರೆಯುವಂತೆ ಎಚ್ಚರಿಸುವ ಕರಪತ್ರಗಳನ್ನು ಇಸ್ರೇಲಿ ವಿಮಾನಗಳು ದಕ್ಷಿಣ ಗಾಜಾದ ಭಾಗಗಳ ಮೇಲೆ ಎಸೆದಿವೆ. ಖಾನ್ ಯೂನಿಸ್ ಈಗ ಒಂದು ‘ಅಪಾಯಕಾರಿ ಯುದ್ಧ ವಲಯ’ ಎಂದು ಇಸ್ರೇಲ್ ಬೆದರಿಸಿದೆ. ಕರಪತ್ರಗಳ ವಿತರಣೆಯು, ಇದುವರೆಗೆ ಗಾಜಾ ಪಟ್ಟಿಯ ಉತ್ತರ ಭಾಗವನ್ನು ಮಾತ್ರ ಕೇಂದ್ರೀಕರಿಸಿದ್ದ ಇಸ್ರೇಲ್ ತನ್ನ ಆಕ್ರಮಣವನ್ನು ವಿಸ್ತರಿಸುವ ಸೂಚನೆಯಾಗಿದೆ. ಪ್ರಾಣ ರಕ್ಷಣೆಗಾಗಿ ಉತ್ತರ ಗಾಜಾದಿಂದ ಪಲಾಯನ ಮಾಡಿದ್ದ ಲಕ್ಷಾಂತರ ಜನರ ಪೈಕಿ ಅನೇಕರು ದಕ್ಷಿಣದ ಖಾನ್ ಯೂನಿಸ್ ಮತ್ತು ಇತರ ನಗರಗಳಲ್ಲಿ ಆಶ್ರಯ ಪಡೆದಿದ್ದರು. ಈಗ ಅಲ್ಲೂ ಇಸ್ರೇಲ್ ಕಾಕದೃಷ್ಟಿ ಬೀರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net