

ಜೆರುಸಲೇಂ: ಕಳೆದ ಶನಿವಾರ (ಅ.7) ಮುಂಜಾನೆ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಹಮಾಸ್ ಉಗ್ರರ ನಡುವೆ ಶುರುವಾದ ಯುದ್ಧದಲ್ಲಿ ಈವರೆಗೆ ಸಾವಿಗೀಡಾದವರ ಸಂಖ್ಯೆ 3000 ಗಡಿಯನ್ನು ದಾಟಿದೆ. ಯುದ್ಧ ಮುಂದುವರಿದಿದ್ದು, ಜನರು ಆತಂಕದಲ್ಲಿ ಸಮಯ ಕಳೆಯಬೇಕಾದ ಸ್ಥಿತಿಯು ಹಾಗೇ ಉಳಿದಿದೆ. ಹಮಾಸ್ ಉಗ್ರರಿಂದ ಗಾಜಾಪಟ್ಟಿಯ ಗಡಿ ಪ್ರದೇಶಗಳನ್ನು ಮತ್ತೆ ವಶಕ್ಕೆ ಪಡೆದಿರುವುದಾಗಿ ಇಸ್ರೇಲ್ ತಿಳಿಸಿದೆ.
ಯುದ್ಧ ಶುರುವಾಗಿ ನಾಲ್ಕು ದಿನಗಳು ಕಳೆದಿವೆ. ಅಪಾರ ಪ್ರಾಣ ಹಾನಿ ಹಾಗೂ ಸಾರ್ವಜನಿಕ ಆಸ್ತಿ ಹಾನಿಯಾಗಿದೆ. ಅಟ್ಟಹಾಸ ಮೆರೆಯುತ್ತಿರುವ ಹಮಾಸ್ ಉಗ್ರರ ಗುಂಪನ್ನು ನಾಶಮಾಡುವ ಮತ್ತು ಇಡೀ ಮಧ್ಯಪ್ರಾಚ್ಯವನ್ನು ಬದಲಾಯಿಸುವ ನಿರಂತರ ಯುದ್ಧದ ಪ್ರಾರಂಭವಿದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಈ ನಡುವೆ, ಇಸ್ರೇಲ್-ಹಮಾಸ್ ಭೀಕರ ಕಾಳಗ ನಾಲ್ಕನೇ ದಿನ ಪ್ರವೇಶಿಸಿದ್ದು, ಇಸ್ರೇಲ್ ಗಾಜಾ ಪ್ರದೇಶದ ಗಡಿಗಳನ್ನು ತನ್ನ ವಶಕ್ಕೆ ಮರುಪಡೆದಿದೆ. ದಾಳಿ ಆರಂಭವಾದ ಪ್ರದೇಶದಲ್ಲಿ ಯುದ್ಧ ಇನ್ನಷ್ಟು ತೀವ್ರತೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಇಸ್ರೇಲ್ನಲ್ಲಿ ಸಾವಿನ ಸಂಖ್ಯೆ 900ಕ್ಕೂ ಅಧಿಕವಾಗಿದೆ. ಕಳೆದ 75 ವರ್ಷಗಳಲ್ಲೇ ಇದು ಅಂತ್ಯಂತ ಭೀಕರ ದಾಳಿಯಾಗಿದ್ದು, ಗಾಜಾ ಒಂದರಲ್ಲೇ 765 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 1,600ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇಸ್ರೇಲ್ ಮತ್ತು ಗಾಜಾ ಪಟ್ಟಿಯಲ್ಲಿ ಸತ್ತವರ ಮತ್ತು ಇಸ್ರೇಲ್ ಹೇಳಿಕೊಂಡಂತೆ 1,500 ಶವಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಮೃತರ ಒಟ್ಟು ಸಂಖ್ಯೆ 3,000 ದಾಟುತ್ತದೆ.
ಹಮಾಸ್ ಕೇಂದ್ರದ ತವರಾಗಿರುವ ಗಾಜಾ ಪಟ್ಟಣದ ಮೇಲೆ ಇಸ್ರೇಲಿ ಯುದ್ಧ ವಿಮಾನಗಳು ಮಂಗಳವಾರ ಮುಂಜಾನೆ ಭಾರಿ ಬಾಂಬ್ ದಾಳಿ ನಡೆಸಿವೆ. ಇಸ್ರೇಲ್ನ ವೈಮಾನಿಕ ಬಾಂಬ್ ದಾಳಿಗಳಿಂದ ನಲುಗಿರುವ ಗಾಜಾ ಪಟ್ಟಿಯ ಪ್ಯಾಲೆಸ್ತೀನಿಯರು ಪ್ರಾಣ ಉಳಿಸಿಕೊಳ್ಳಲು ಒಂದರಿಂದ ಇನ್ನೊಂದು ಪ್ರದೇಶಕ್ಕೆ ಓಡಾಡುತ್ತಿದ್ದಾರೆ. ಆದರೆ, ಎಲ್ಲಿ ಹೋದರೂ ಅವರಿಗೆ ಸುರಕ್ಷತೆ ಎಂಬುದು ಮರೀಚಿಕೆ ಯಾಗಿದೆ. ಅಂದಾಜು 1,80,000 ಪ್ಯಾಲೆಸ್ತೀನಿಯರು ವಿಶ್ವ ಸಂಸ್ಥೆಯ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
40 ಶಿಶುಗಳ ಶಿರಚ್ಛೇದ?
ಹಮಾಸ್ ಉಗ್ರ ಸಂಘಟನೆ ಇಸ್ರೇಲ್ನಲ್ಲಿ ಕನಿಷ್ಟ 40 ಶಿಶುಗಳ ಹತ್ಯೆಗೈದಿದೆ ಎಂದು ವರದಿಯಾಗಿದೆ. ಹಮಾನ್ ಉಗ್ರರು ಎಸಗಿರುವ ನರಮೇಧ ಊಹೆಗೂ ಮೀರಿದ್ದು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಇಸ್ರೇಲ್ನ ಯೋಧರಿಗೆ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದ್ದು, ಯೋಧರು ಪ್ರತಿದಾಳಿಗೆ ಮುಂದಾದ ಸಮಯದಲ್ಲಿ ಶಿಶುಗಳ ಶಿರಚ್ಛೇದ ಮಾಡಿರುವ ದೃಶ್ಯಗಳು ಕಂಡು ಬಂದಿವೆ.
ಒತ್ತೆಯಾಳುಗಳ ಹತ್ಯೆ ಬೆದರಿಕೆ: ಈ ನಡುವೆ, ನಾಗರಿಕ ವಸತಿ ಪ್ರದೇಶಗಳ ಮೇಲೆ ಬಾಂಬ್ ದಾಳಿ ನಡೆಸಿದರೆ ಒತ್ತೆಯಾಳುಗಳನ್ನು ಒಬ್ಬೊಬ್ಬರಾಗಿಯೇ ಕೊಲ್ಲುವುದಾಗಿ ಹಮಾಸ್ ಬೆದರಿಕೆ ಹಾಕಿದೆ. ಒಂದು ಬಾಂಬ್ ದಾಳಿಗೆ ಒಬ್ಬರಂತೆ ಹತ್ಯೆ ಮಾಡುವುದಾಗಿ ಹೇಳಿದೆ. ಶನಿವಾರ ಇಸ್ರೇಲ್ನೊಳಗೆ ನುಗ್ಗಿ ಆಕ್ರಮಣ ನಡೆಸಿದ್ದ ಗಾಜಾದ ಹಮಾಸ್ ಮತ್ತಿತರ ಉಗ್ರಗಾಮಿ ಸಂಘಟನೆಗಳು 150ಕ್ಕೂ ಹೆಚ್ಚು ಸೈನಿಕರು ಮತ್ತು ನಾಗರಿಕರನ್ನು ಒತ್ತೆ ಸೆರೆ ಇರಿಸಿಕೊಂಡಿವೆ.
ತಮ್ಮ ದೇಶ ಯುದ್ಧವನ್ನು ಆರಂಭಿಸಿಲ್ಲವಾದರೂ ತಾನು ಅದನ್ನು ಕೊನೆಗೊಳಿಸುವುದಾಗಿ ಇಸ್ರೇಲ್ ಪ್ರಧಾನಿ ನೇತ್ಯಾನಹು ಹೇಳಿದ್ದಾರೆ. ಹಮಾಸ್ ಮತ್ತು ಇತರ ಇಸ್ರೇಲ್ ವಿರೋಧಿಗಳಿಗೆ ದಶಕಗಟ್ಟಲೆ ನೆನಪಿರುವ ರೀತಿಯಲ್ಲಿ ಪಾಠ ಕಲಿಸಲಾಗುವುದೆಂದು ಅವರು ಎಚ್ಚರಿಸಿದ್ದಾರೆ. ನಮಗೆ ಬೇಕಿಲ್ಲದ ಯುದ್ಧವನ್ನು ನಮ್ಮ ಮೇಲೆ ಹೇರಲಾಗಿದೆ. ಐಸಿಸ್ಗಿಂತಲೂ ಹಮಾಸ್ ಭಯಾನಕವಾದುದು ಎಂದಿದ್ದಾರೆ.
ಇಸ್ರೇಲ್ಗೆ ಪ್ರಮುಖ ರಾಷ್ಟ್ರಗಳ ಬೆಂಬಲ
ತನ್ನನ್ನು ರಕ್ಷಿಸಿಕೊಳ್ಳುವ ಇಸ್ರೇಲ್ ಪ್ರಯತ್ನಗಳನ್ನು ಬೆಂಬಲಿಸುವುದಾಗಿ ಅಮೆರಿಕ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಬ್ರಿಟನ್ ನಾಯಕರು ಜಂಟಿ ಹೇಳಿಕೆ ನೀಡಿದ್ದಾರೆ. ಪ್ಯಾಲೆಸ್ತೀನ್ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಗುರುತಿಸುತ್ತೇವೆ. ಆದರೆ, ಪ್ಯಾಲೆಸ್ತೀನ್ ಜನರಿಗೆ ಹೆಚ್ಚು ಭಯೋತ್ಪಾದನೆ ಮತ್ತು ರಕ್ತಪಾತವನ್ನು ಹೊರತುಪಡಿಸಿ ಬೇರೇನನ್ನೂ ಹಮಾಸ್ ನೀಡುವುದಿಲ್ಲ ಎಂದು ಅಮೆರಿಕದ ಶ್ವೇತಭವನ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಹೇಳಲಾಗಿದೆ. ಬ್ರಿಟನ್ ಪ್ರಧಾನಮಂತ್ರಿ ರಿಷಿ ಸುನಕ್ ಜತೆ ಫೋನ್ ಸಂಭಾಷಣೆಯ ನಂತರ ಈ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ಭಯೋತ್ಪಾದನೆಗೆ ಎಂದಿಗೂ ಸಮರ್ಥನೀಯವಲ್ಲ. ಹಮಾಸ್ನ ಭಯೋತ್ಪಾದಕ ಕ್ರಮಗಳು ಯಾವುದೇ ಸಮರ್ಥನೆ ಹಾಗೂ ನ್ಯಾಯಸಮ್ಮತತೆ ಹೊಂದಿಲ್ಲ. ಈ ದಾಳಿಯನ್ನು ಸಾರ್ವತ್ರಿಕವಾಗಿ ಖಂಡಿಸಬೇಕು ಎಂದು ನಾವು ಸ್ಪಷ್ಟಪಡಿಸುತ್ತೇವೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ.
ಹಮಾಸ್ ಭಯೋತ್ಪಾದಕರು ಮನೆಗಳಲ್ಲಿ ಕುಟುಂಬದವರನ್ನು ಕಗ್ಗೊಲೆ ಮಾಡಿದ್ದಾರೆ. ಸಂಗೀತ ಉತ್ಸವವನ್ನು ಆನಂದಿಸುತ್ತಿದ್ದ 200ಕ್ಕೂ ಹೆಚ್ಚು ಯುವಕರನ್ನು ಹತ್ಯೆಗೈದಿದ್ದಾರೆ. ವಯಸ್ಸಾದ ಮಹಿಳೆಯರು, ಮಕ್ಕಳು ಮತ್ತು ಇಡೀ ಕುಟುಂಬಗಳನ್ನು ಅಪಹರಿಸಿ ಈಗ ಒತ್ತೆಯಾಳುಗಳಾಗಿ ಇರಿಸಿರುವುದನ್ನು ಜಗತ್ತು ಭಯಾನಕತೆಯಿಂದ ನೋಡಿದೆ. ನಮ್ಮ ದೇಶಗಳು ಇಂತಹ ದೌರ್ಜನ್ಯಗಳ ವಿರುದ್ಧ ಮತ್ತು ತನ್ನ ಜನರನ್ನು ರಕ್ಷಿಸಿಕೊಳ್ಳುವ ಇಸ್ರೇಲ್ ಪ್ರಯತ್ನಗಳನ್ನು ಬೆಂಬಲಿಸುತ್ತವೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಇಸ್ರೇಲ್- ಪ್ಯಾಲೆಸ್ತೀನ್ ವಿವಾದವೇನು?
ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ದೇಶಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.
ಗಾಜಾ ಪಟ್ಟಿ ಎಂದರೇನು? : ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ. (ಏಜೆನ್ಸೀಸ್)