More

    ವಿಶ್ವಕಪ್​ನಲ್ಲಿ ಅಪಾಯದಲ್ಲಿವೆ ಈ ದಾಖಲೆಗಳು! ರೆಕಾರ್ಡ್​ ಬ್ರೇಕ್​ ಸನಿಹದಲ್ಲಿದ್ದಾರೆ ಕೊಹ್ಲಿ, ರೋಹಿತ್​

    ಬೆಂಗಳೂರು: ದಾಖಲೆಗಳು ಇರುವುದೇ ಮುರಿಯುವುದಕ್ಕೆ. ಆದರೆ ವಿಶ್ವಕಪ್​ನಂಥ ಮಹಾವೇದಿಕೆಯಲ್ಲಿ ದಾಖಲೆಗಳನ್ನು ಮುರಿಯುವ ಅವಕಾಶ ಲಭಿಸಿದರೆ ಅದು ಇನ್ನಷ್ಟು ವಿಶೇಷವೆನಿಸುತ್ತದೆ. ಈ ಬಾರಿ ಏಕದಿನ ವಿಶ್ವಕಪ್​ನಲ್ಲಿ ಕೆಲ ದಾಖಲೆಗಳು ಪತನಗೊಳ್ಳುವ ಅಪಾಯದಲ್ಲಿವೆ. ಅಂಥ ದಾಖಲೆಗಳ ಸಂಪ್ತ ವಿವರ ಇಲ್ಲಿದೆ…

    ಸಚಿನ್​ ಶತಕದ ದಾಖಲೆಯತ್ತ ಕೊಹ್ಲಿ
    ವಿರಾಟ್​ ಕೊಹ್ಲಿ ವಿಶ್ವಕಪ್​ನಲ್ಲಿ 3 ಶತಕ ಸಿಡಿಸಿದರೆ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ಶತಕ ಬಾರಿಸಿದ ಬ್ಯಾಟರ್​ ಮತ್ತು 50 ಶತಕ ಸಿಡಿಸಿದ ಮೊದಲ ಸಾಧಕ ಎನಿಸಲಿದ್ದಾರೆ. ಸಚಿನ್​ ತೆಂಡುಲ್ಕರ್​ 49 ಶತಕ ಸಿಡಿಸಿರುವ ಹಾಲಿ ದಾಖಲೆ. ವಿರಾಟ್​ ಕೊಹ್ಲಿ (47) ಸದ್ಯ ಅದರಿಂದ ಕೇವಲ 2 ಶತಕ ದೂರದಲ್ಲಿದ್ದಾರೆ.

    ಗರಿಷ್ಠ ವಿಕೆಟ್​ ಸಾಧನೆಯತ್ತ ಸ್ಟಾರ್ಕ್​
    ಆಸ್ಟ್ರೆಲಿಯಾದ ವೇಗಿ ಮಿಚೆಲ್​ ಸ್ಟಾರ್ಕ್​ ದೇಶಬಾಂಧವ ಗ್ಲೆನ್​ ಮೆಕ್​ಗ್ರಾಥ್​ ದಾಖಲೆ ಮುರಿದು ವಿಶ್ವಕಪ್​ ಇತಿಹಾಸದಲ್ಲಿ ಗರಿಷ್ಠ ವಿಕೆಟ್​ ಸಂಪಾದಿಸಿದ ಬೌಲರ್​ ಎನಿಸುವ ಅವಕಾಶ ಹೊಂದಿದ್ದಾರೆ. ಮೆಕ್​ಗ್ರಾಥ್​ 71 ವಿಕೆಟ್​ ಗಳಿಸಿರುವ ಹಾಲಿ ದಾಖಲೆ. ಸ್ಟಾಕ್​ (50) ಸದ್ಯ ಅದರಿಂದ 22 ವಿಕೆಟ್​ ಹಿಂದಿದ್ದಾರೆ. 2015ರಲ್ಲಿ ಗರಿಷ್ಠ 22 ಮತ್ತು 2019ರಲ್ಲಿ ಗರಿಷ್ಠ 27 ವಿಕೆಟ್​ ಕಬಳಿಸಿದ್ದ ಸ್ಟಾರ್ಕ್​, ಈ ಸಲವೇ ಮೆಕ್​ಗ್ರಾಥ್​ ದಾಖಲೆ ಮುರಿಯುವುದು ಅಸಾಧ್ಯವೇನಲ್ಲ.

    ಭಾರತ ಪರ ಗರಿಷ್ಠ ವಿಕೆಟ್​
    ಜಾವಗಲ್​ ಶ್ರೀನಾಥ್​ ಮತ್ತು ಜಹೀರ್​ ಖಾನ್​ ತಲಾ 44 ವಿಕೆಟ್​ಗಳೊಂದಿಗೆ ಏಕದಿನ ವಿಶ್ವಕಪ್​ನಲ್ಲಿ ಗರಿಷ್ಠ ವಿಕೆಟ್​ ಕಬಳಿಸಿದ ಭಾರತೀಯ ಬೌಲರ್​ಗಳೆನಿಸಿದ್ದಾರೆ. 3ನೇ ವಿಶ್ವಕಪ್​ ಆಡುತ್ತಿರುವ ವೇಗಿ ಮೊಹಮದ್​ ಶಮಿ (31 ವಿಕೆಟ್​) ಸದ್ಯ ಅದಕ್ಕಿಂತ 13 ವಿಕೆಟ್​ ಹಿಂದಿದ್ದಾರೆ. ವಿಶ್ವಕಪ್​ನಲ್ಲಿ ಆಡುವ 11ರ ಬಳಗದಲ್ಲಿ ಹೆಚ್ಚಿನ ಪಂದ್ಯ ಆಡುವ ಅವಕಾಶ ಲಭಿಸಿದರೆ ಶಮಿ ಈ ದಾಖಲೆ ಮುರಿಯಬಹುದಾಗಿದೆ.

    ವಿಶ್ವಕಪ್​ನಲ್ಲಿ ಗರಿಷ್ಠ ಶತಕ
    ವಿಶ್ವಕಪ್​ನಲ್ಲಿ ಗರಿಷ್ಠ 6 ಶತಕ ಸಿಡಿಸಿದ ಸಚಿನ್​ ತೆಂಡುಲ್ಕರ್​ ಸಾಧನೆಯನ್ನು ರೋಹಿತ್​ ಶರ್ಮ ಕಳೆದ ಆವೃತ್ತಿಯಲ್ಲೇ ಸರಿಗಟ್ಟಿದ್ದರು. ಸಚಿನ್​ 44 ಇನಿಂಗ್ಸ್​ಗಳಲ್ಲಿ ಮಾಡಿದ ಸಾಧನೆಯನ್ನು ರೋಹಿತ್​ 17 ಇನಿಂಗ್ಸ್​ಗಳಲ್ಲೇ ಸಾಧಿಸಿದ್ದರು. ಹೀಗಾಗಿ ರೋಹಿತ್​ ಈ ಬಾರಿ ಒಂದು ಶತಕ ಸಿಡಿಸಿದರೂ, ಸಚಿನ್​ ದಾಖಲೆ ಮುರಿಯಲಿದ್ದಾರೆ.

    ಗರಿಷ್ಠ ಸಿಕ್ಸರ್​
    ರೋಹಿತ್​ ಶರ್ಮ ವಿಶ್ವಕಪ್​ನಲ್ಲಿ 3 ಸಿಕ್ಸರ್​ ಸಿಡಿಸಿದರೂ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಗರಿಷ್ಠ ಸಿಕ್ಸರ್​ ಬಾರಿಸಿದ ಬ್ಯಾಟರ್​ ಎನಿಸಲಿದ್ದಾರೆ. ವೆಸ್ಟ್​ ಇಂಡೀಸ್​ನ ಕ್ರಿಸ್​ ಗೇಲ್​ 553 ಸಿಕ್ಸರ್​ ಸಿಡಿಸಿರುವುದು ಹಾಲಿ ದಾಖಲೆಯಾಗಿದ್ದರೆ, ರೋಹಿತ್​ 472 ಇನಿಂಗ್ಸ್​ಗಳಲ್ಲಿ 551 ಸಿಕ್ಸರ್​ ಸಿಡಿಸಿ ಅದರ ಸನಿಹದಲ್ಲಿದ್ದಾರೆ.

    ಕ್ಯಾಲೆಂಡರ್​ ವರ್ಷದ ಗರಿಷ್ಠ ರನ್​
    ಹಾಲಿ ವರ್ಷ ಭರ್ಜರಿ ಫಾರ್ಮ್​ನಲ್ಲಿರುವ ಆರಂಭಿಕ ಶುಭಮಾನ್​ ಗಿಲ್​ ಇದುವರೆಗೆ ಆಡಿದ 20 ಇನಿಂಗ್ಸ್​ಗಳಲ್ಲಿ 1230 ರನ್​ ಬಾರಿಸಿದ್ದು, ಕ್ಯಾಲೆಂಡರ್​ ವರ್ಷವೊಂದರಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ರನ್​ ಸಿಡಿಸಿದ ಸಚಿನ್​ ತೆಂಡುಲ್ಕರ್​ ಅವರ 25 ವರ್ಷ ಹಿಂದಿನ ದಾಖಲೆ ಮುರಿಯುವ ಅವಕಾಶ ಹೊಂದಿದ್ದಾರೆ. ಸಚಿನ್​ 1998ರಲ್ಲಿ 1,894 ರನ್​ ಸಿಡಿಸಿರುವುದು ಹಾಲಿ ದಾಖಲೆಯಾಗಿದ್ದು, ಇದನ್ನು ಮುರಿಯಲು ಗಿಲ್​ ವಿಶ್ವಕಪ್​ನಲ್ಲಿ 665 ರನ್​ ಬಾರಿಸಬೇಕಿದೆ.

    VIDEO| ವಿಶ್ವಕಪ್​ನಲ್ಲಿ ಅಮೋಘ ಫೀಲ್ಡಿಂಗ್​ಗಾಗಿ ಸ್ವರ್ಣ ಪದಕ ಗೆದ್ದ ವಿರಾಟ್​ ಕೊಹ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts