More

    ಹಿರಿಯ ಪತ್ರಕರ್ತ ಅರ್ಜುನ್‌ ದೇವ್ ನಿಧನ

    ಬೆಂಗಳೂರು: ನಾಡಿನ ಹಿರಿಯ ಪತ್ರಕರ್ತ ಅರ್ಜುನ್ ದೇವ್ (92) ಅವರು ಬುಧವಾರ ನಿಧನರಾದರು.
    ಕೆಲ ಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕೆಂಗೇರಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ವಯೋಸಹಜ ಕಾಯಿಲೆಯಿಂದಾಗಿ ಅವರು ಮೃತರಾಗಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

    ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಬುಧವಾರ ಸಂಜೆಯೇ ಹುಟ್ಟೂರಾದ ಕೋಲಾರ ಜಿಲ್ಲೆಯ ಚೌಡದೇವನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

    ರಾಜ್ಯದ ಪ್ರಮುಖ ಪತ್ರಿಕೆಗಳಾದ ತಾಯಿನಾಡು, ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಪತ್ರಿಕೆಯಲ್ಲಿ ಅವರು ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಸೂರ್ಯೋದಯ ಪತ್ರಿಕೆಯ ಸಂಪಾದಕರಾಗಿಯೂ ಅವರು ಹೆಸರು ಮಾಡಿದ್ದರು. 1960ರ ದಶಕದಲ್ಲೇ ಅವರು ವಿಧಾನಮಂಡಲದ ವರದಿಗಾರಿಕೆಯಲ್ಲಿ ದೊಡ್ಡ ಹೆಸರು ಪಡೆದಿದ್ದರು. ಹಲವು ಯುವ ಪತ್ರಕರ್ತರನ್ನು ಬೆಳೆಸುವಲ್ಲಿ ಕಾಳಜಿ ವಹಿಸಿದ್ದರು. ರಾಜ್ಯದಲ್ಲಿ ಮಾಧ್ಯಮ ಅಕಾಡೆಮಿ ಸ್ಥಾಪನೆ ಮಾಡುವಲ್ಲಿ ಅರ್ಜುನ್ ದೇವ್ ಪಾತ್ರ ಪ್ರಮುಖವಾಗಿತ್ತು. ಸರ್ಕಾರ ಕೊಡಮಾಡುವ ಟಿಎಸ್‌ಆರ್ ಪ್ರಶಸ್ತಿ, ಬಿಬಿಎಂಪಿಯ ಕೆಂಪೇಗೌಡ ಪ್ರಶಸ್ತಿ, ಮಂಗಳೂರಿನ ಸಂದೇಶ್ ಪ್ರಶಸ್ತಿ ಸಂದಿವೆ.

    ಸಿಎಂ, ಡಿಸಿಎಂ ಕಂಬನಿ:

    ಪತ್ರಕರ್ತ ಅರ್ಜುನ್ ದೇವ್ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಪ್ರೆಸ್ ಕ್ಲಬ್ ಸೇರಿ ಹಲವು ಸಂಘಟನೆಗಳು ಕಂಬನಿ ಮಿಡಿದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts