

ನವದೆಹಲಿ: ಟೆಲ್ ಅವೀವ್: ಹಮಾಸ್ ಉಗ್ರರು ನಡೆಸಿದ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಇಸ್ರೇಲ್ನ ಮಿಲಿಟರಿ ಪಡೆ ಗಾಜಾ ಪಟ್ಟಿ ಮೇಲೆ ಆರಂಭಿಸಿದ ಕಾರ್ಯಾಚರಣೆ ಈಗ ಮತ್ತೊಂದು ಹಂತ ತಲುಪಿದೆ. ಗಾಜಾ ಪಟ್ಟಿಯ ಒಳಗೆ ಪ್ರವೇಶಿಸಿ ಹಲವು ಪ್ರದೇಶಗಳ ಮೇಲೆ ಆಕ್ರಮಣ ಮಾಡಿದ್ದಾಗಿ ಇಸ್ರೇಲ್ ಮೊದಲ ಬಾರಿಗೆ ಅಧಿಕೃತ ಘೋಷಣೆ ಮಾಡಿದೆ.
ಇಸ್ರೇಲ್ ಸುಮಾರು 3.6 ಲಕ್ಷ ಮೀಸಲು ಯೋಧರನ್ನು ವಾಪಸ್ ಕರೆಸಿಕೊಂಡಿದೆ. ಗಾಜಾದ ಗಡಿಯುದ್ದಕ್ಕೂ ಟ್ಯಾಂಕ್ ಸಹಿತ ಹತ್ತಾರು ಸಾವಿರ ಯೋಧರನ್ನು ನಿಯೋಜನೆ ಮಾಡಿದೆ. ಸದ್ಯದಲ್ಲೇ ಈ ಪಡೆ ಕೂಡ ಗಾಜಾ ಪಟ್ಟಿಯ ಒಳಕ್ಕೆ ನುಗ್ಗಿ ಹಮಾಸ್ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲಿದೆ ಎನ್ನಲಾಗಿದೆ. ಇಸ್ರೇಲ್ನ ವೈಮಾನಿಕ ದಾಳಿಯಿಂದ ವಿದೇಶಿಯರು ಸೇರಿದಂತೆ 13 ಒತ್ತೆಯಾಳುಗಳು ಶನಿವಾರ ಮೃತಪಟ್ಟಿದ್ದಾರೆ ಎಂದು ಹಮಾಸ್ ಹೇಳಿದೆ. ಹಮಾಸ್ ಉಗ್ರರ ವಿರುದ್ಧ ಗಾಜಾಪಟ್ಟಿ ಮೇಲೆ ಸಮರ ಸಾರಿರುವ ಇಸ್ರೇಲ್ ಪಡೆ, ಹಮಾಸ್ ಏರ್ ಫೋರ್ಸ್ ಮುಖ್ಯಸ್ಥ ಮುರಾದ್ ಅಬು ಮುರಾದ್ನನ್ನು ಹತ್ಯೆ ಮಾಡಿದೆ. ಈತನು ಇಸ್ರೇಲ್ ಮೇಲಿನ ದಾಳಿಗೆ ಸಂಚು ರೂಪಿಸಿದ ಪ್ರಮುಖರಲ್ಲಿ ಒಬ್ಬ ಎನ್ನಲಾಗಿದೆ. ವೈಮಾನಿಕ ದಾಳಿ ಮೂಲಕ ಈತನನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ತಿಳಿಸಿದೆ. ವಾಯುಪಡೆ ಮುಖ್ಯಸ್ಥನೇ ಹತನಾಗಿರುವ ಕಾರಣ ಹಮಾಸ್ ಪಡೆ ಇನ್ನಷ್ಟು ಕುಗ್ಗಿದೆ. ಗಾಜಾ ಗಡಿಯಲ್ಲಿ ಇಸ್ರೇಲ್ ಈಗಾಗಲೇ ನೂರಾರು ಟ್ಯಾಂಕ್ಗಳನ್ನು ನಿಯೋಜಿಸಿದೆ. ಸದ್ಯದಲ್ಲೇ ಇವು ಗಾಜಾ ಪ್ರದೇಶ ಒಳಗೆ ಪ್ರವೇಶ ಮಾಡಲಿವೆ ಎನ್ನಲಾಗಿದೆ.
ಹಮಾಸ್ಗೆ ಹಿಜ್ಬುಲ್ಲಾ ಬೆಂಬಲ: ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಹಮಾಸ್ಗೆ ಬೆಂಬಲ ನೀಡಲು ಸಂಪೂರ್ಣ ಸಿದ್ಧ ಎಂದು ಇರಾನ್ ಬೆಂಬಲಿತ ಹಿಜ್ಬುಲ್ಲಾ ಉಗ್ರ ಸಂಘಟನೆ ಹೇಳಿಕೊಂಡಿದೆ. ಹಮಾಸ್ ಮತ್ತು ಇಸ್ರೇಲ್ ಯುದ್ಧ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಗಾಜಾ ಪಟ್ಟಿಯಲ್ಲಿರುವ ಹಮಾಸ್ ಅಡಗುತಾಣಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ ಮುಂದುವರಿಸಿದೆ. ಈ ಬೆನ್ನಲ್ಲೇ ಹಿಜ್ಬುಲ್ಲಾ ತನ್ನ ನಿಲುವು ಪ್ರಕಟಿಸಿದೆ. ನಮ್ಮ ಯೋಜನೆಯ ಪ್ರಕಾರ ಹಮಾಸ್ ಜತೆ ಸೇರಿ ಇಸ್ರೇಲ್ ವಿರುದ್ಧ ಹೋರಾಟ ನಡೆಸುತ್ತೇವೆ. ನಾವು ಇದಕ್ಕೆ ಸಂಪೂರ್ಣವಾಗಿ ಸಿದ್ಧರಿದ್ದೇವೆ. ಸಮಯ ಬಂದಾಗ ನಿರ್ಧಾರ ಪ್ರಕಟಿಸುತ್ತೇವೆ ಎಂದು ಬೈರುತ್ನ ದಕ್ಷಿಣ ಉಪನಗರಗಳಲ್ಲಿ ಪ್ಯಾಲೆಸ್ತೀನ್ ಪರ ನಡೆದ ರ್ಯಾಲಿಯಲ್ಲಿ ಹಿಜ್ಬುಲ್ಲಾ ನಾಯಕ ಕಾಸೆಮ್ ಘೋಷಣೆ ಮಾಡಿದ್ದಾನೆ. ಪ್ರಮುಖ ರಾಷ್ಟ್ರಗಳು, ಅರಬ್ ದೇಶಗಳು ಮತ್ತು ವಿಶ್ವಸಂಸ್ಥೆಯ ರಾಯಭಾರಿಗಳು ಯುದ್ಧದಲ್ಲಿ ಮಧ್ಯಪ್ರವೇಶಿಸದಂತೆ ನಮ್ಮನ್ನು ಕೇಳುತ್ತಿದ್ದಾರೆ. ಇದು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ಹಿಜ್ಬುಲ್ಲಾ ತನ್ನ ಕರ್ತವ್ಯ ಮಾಡಲಿದೆ ಎಂದು ಆತ ಹೇಳಿದ್ದಾನೆ. ಹಮಾಸ್ ಯುದ್ಧ ಆರಂಭವಾದ ನಂತರ ಲೆಬನಾನ್ ಗಡಿ ಮೂಲಕ ಹಿಜ್ಬುಲ್ಲಾ ಉಗ್ರರು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದಾರೆ.
ಗಾಜಾದಲ್ಲಿ 2,215 ಮಂದಿ ಸಾವು: ಗಾಜಾಪಟ್ಟಿ ಮೇಲೆ ಇಸ್ರೇಲ್ ನಡೆಸುತ್ತಿರುವ ವೈಮಾನಿಕ ದಾಳಿಯಲ್ಲಿ ಈವರೆಗೆ 724 ಮಕ್ಕಳು ಸೇರಿ 2,215 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೀನ್ ಪ್ರದೇಶದ ಹಮಾಸ್ ನಿಯಂತ್ರಿತ ಆರೋಗ್ಯ ಸಚಿವಾಲಯ ತಿಳಿಸಿದೆ. ಸಾವನ್ನಪ್ಪಿದವರಲ್ಲಿ 458 ಮಹಿಳೆಯರೂ ಇದ್ದಾರೆ. ಕಳೆದ 24 ಗಂಟೆಗಳಲ್ಲಿ ಕನಿಷ್ಠ 324 ಜನರು ಸಾವನ್ನಪ್ಪಿದ್ದು, 8,714 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದೆ. ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿ 320ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 1000 ಮಂದಿ ಗಾಯಗೊಂಡಿದ್ದಾರೆ. ಈ ನಡುವೆ ವೈದ್ಯಕೀಯ ಸಾಮಗ್ರಿ ಒಳಗೊಂಡ ವಿಶ್ವ ಆರೋಗ್ಯ ಸಂಸ್ಥೆಯ ವಿಮಾನ ಈಜಿಪ್ ್ಟೆ ಬಂದಿಳಿದಿದೆ.
ಅಲ್ ಖೈದಾಕ್ಕಿಂತಲೂ ಕೆಟ್ಟ ಕೃತ್ಯ: ಇಸ್ರೇಲ್ ಮೇಲೆ ದಾಳಿ ನಡೆಸಿದ ಉಗ್ರಗಾಮಿ ಗುಂಪು ಹಮಾಸ್ 1,000ಕ್ಕೂ ಹೆಚ್ಚು ಅಮಾಯಕರ ಜೀವಗಳನ್ನು ಬಲಿ ತೆಗೆದá-ಕೊಂಡಿದೆ. ಇದು ಅಲ್ ಖೈದಾಕ್ಕಿಂತಲೂ ಕೆಟ್ಟ ಕೃತ್ಯ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ದಾಳಿ ಅತ್ಯಂತ ಹೆಚ್ಚು ಭಯಾನಕವಾಗಿದೆ. 27 ಅಮೆರಿಕನ್ನರು ಸೇರಿ 1,000 ಕ್ಕೂ ಹೆಚ್ಚು ಮುಗ್ಧ ಜನರು ಮೃತಪಟ್ಟಿದ್ದಾರೆ ಎಂದು ಫಿಲಡೆಲ್ಪಿಯಾದಲ್ಲಿನ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದ್ದಾರೆ. ಅಮೆರಿಕ ಇಸ್ರೇಲ್ ಜತೆಗೆ ನಿಂತಿದೆ. ಇಸ್ರೇಲ್ ತನ್ನನ್ನು ರಕ್ಷಿಸಿಕೊಳ್ಳಲು ಮತ್ತು ಈ ದಾಳಿಗಳಿಗೆ ಪ್ರತಿಕ್ರಿಯಿಸಲು ಅಗತ್ಯವಿರುವ ನೆರವನ್ನು ಅಮೆರಿಕ ನೀಡಲಿದೆ. ಗಾಜಾದಲ್ಲಿನ ಮಾನವೀಯ ಬಿಕ್ಕಟ್ಟನ್ನು ತುರ್ತಾಗಿ ಪರಿಹರಿಸುವುದು ನಮ್ಮ ಆದ್ಯತೆಯಾಗಿದೆ. ಈಜಿಪ್ಟ್, ಜೋರ್ಡಾನ್ ಮತ್ತು ಇತರ ಅರಬ್ ರಾಷ್ಟ್ರಗಳು, ವಿಶ್ವಸಂಸ್ಥೆ ಗಾಜಾ ಸಂತ್ರಸ್ತರಿಗೆ ಅಗತ್ಯ ನೆರವು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.
ಇಸ್ರೇಲ್ನಿಂದ 2ನೇ ತಂಡ ಆಗಮನ: ಇಸ್ರೇಲ್ನಿಂದ 235 ಭಾರತೀಯರನ್ನು ಹೊತ್ತ ಎರಡನೇ ವಿಮಾನ ಶನಿವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಭಾರತವು ಆಪರೇಷನ್ ಅಜಯ್ ಹೆಸರಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದೆ. ಎರಡು ದಿನಗಳಲ್ಲಿ ಇಸ್ರೇಲ್ನಿಂದ 400ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಸ್ವದೇಶಕ್ಕೆ ಮರಳಿದ್ದಾರೆ. ಶನಿವಾರ ಎರಡು ವಿಶೇಷ ವಿಮಾನಗಳು ಕಾರ್ಯಾಚರಣೆ ನಡೆಸಲಿದ್ದು, ಮತ್ತಷ್ಟು ಭಾರತೀಯರು ದೇಶಕ್ಕೆ ಮರಳಲಿದ್ದಾರೆ ಎಂದು ಭಾರತದ ರಾಯಭಾರ ಕಚೇರಿ ತಿಳಿಸಿದೆ. ಮೊದಲ ವಿಮಾನವು ಸ್ಥಳೀಯ ಸಮಯ ಸಂಜೆ 5 ಗಂಟೆಗೆ ಹೊರಡುವ ನಿರೀಕ್ಷೆಯಿದೆ. ಎರಡನೇ ವಿಮಾನವು ಸ್ಥಳೀಯ ಸಮಯ ರಾತ್ರಿ 11:00 ಗಂಟೆಗೆ ಪ್ರಯಾಣ ಆರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಕಾಳಗ ಉಲ್ಬಣಗೊಂಡಿದ್ದು ಗಾಜಾದಿಂದ 4 ಲಕ್ಷಕ್ಕೂ ಅಧಿಕ ಜನರನ್ನು ತೆರವು ಗೊಳಿಸಲಾಗಿದೆ. ಹೊಸದಾಗಿ ಆಸ್ಪೋಟಗೊಂಡ ಸಂಘರ್ಷದಲ್ಲಿ 44ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ ಹಾಗೂ ಹಮಾಸ್ನ ಒಬ್ಬ ಕಮಾಂಡರ್ನನ್ನು ಇಸ್ರೇಲಿ ಪಡೆಗಳು ಹೊಡೆದುರುಳಿಸಿವೆ. ಕಳೆದ ಶನಿವಾರ ಬಿಕ್ಕಟ್ಟು ಆರಂಭವಾದಾಗಿನಿಂದ 200ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಕಳೆದ ಶನಿವಾರ ಸಂಘರ್ಷ ಆರಂಭವಾದ ಒಂದು ವಾರದ ನಂತರ ಪಶ್ಚಿಮ ದಂಡೆಯ ರಾಮಲ್ಲಾ, ಬೆಬ್ಲಸ್, ಟುಲ್ಕಮ್ರ್, ಹೆಬ್ರಾನ್ ಮತ್ತಿತರ ನಗರ ಹಾಗೂ ಪಟ್ಟಣಗಳಲ್ಲಿ ಕಾಳಗ ಆರಂಭವಾಗಿದೆ. ಅಕ್ಟೋಬರ್ 7ರಂದು ಇಸ್ರೇಲ್ನೊಳಗೆ ಹಠಾತ್ತನೆ ನುಗ್ಗಿ ಬಂದ ಹಮಾಸ್ ಪಡೆಗಳು ಭಾರಿ ದಾಳಿ ನಡೆಸಿ ಅಪಾರ ಪ್ರಾಣ ಹಾನಿಗೆ ಕಾರಣವಾಗಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೈನ್ಯವೂ ತೀಕ್ಷ್ಣ ದಾಳಿ ನಡೆಸಿದ್ದು ನಂತರ ಈ ಘರ್ಷಣೆ ಪೂರ್ಣ ರೂಪದ ಯುದ್ಧವಾಗಿ ಪರಿವರ್ತನೆ ಗೊಂಡಿದೆ. ಪಶ್ಚಿಮ ದಂಡೆಯಲ್ಲಿ ಶುಕ್ರವಾರ ಮಧ್ಯಾಹ್ನದ ವರೆಗೆ ಒಂಬತ್ತು ಜನರು ಆಕ್ರಮಣಕಾರಿ ಇಸ್ರೇಲ್ನ ಗುಂಡುಗಳಿಗೆ ಬಲಿಯಾಗಿದ್ದಾರೆ ಹಾಗೂ ವಿವಿಧ ಪ್ರದೇಶಗಳಲ್ಲಿ ಸುಮಾರು 130 ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ. ಕನಿಷ್ಠ 44 ಪ್ಯಾಲೆಸ್ತೀನಿಯರು ಗಾಜಾದಲ್ಲಿ ಮೃತರಾಗಿದ್ದಾರೆಂದು ಪ್ಯಾಲೆಸ್ಟೈನ್ ಆರೋಗ್ಯ ಸಚಿವಾಲಯ ಕೂಡ ತಿಳಿಸಿದೆ. ನೆಬ್ಲಸ್ ಸಮೀಪದ ಬೀಟ್ ಫುರಿಕ್ನಲ್ಲಿ 14 ವರ್ಷದ ಒಬ್ಬ ಬಾಲಕ ಕೂಡ ಗುಂಡಿಗೆ ಬಲಿಯಾಗಿದ್ದಾನೆ. ಬೀಟ್ ಉಲಾ, ತಮ್ಮುನ್, ಬೆತ್ಲೆಹಾಂ ಮತ್ತು ಹೆಬ್ರಾನ್ನಲ್ಲಿ ಕೂಡ ಸಾವುಗಳು ಸಂಭವಿಸಿವೆ ಎಂದು ಪ್ಯಾಲೆಸ್ಟೈನ್ ಆರೋಗ್ಯ ಸಚಿವಾಲಯ ಹೇಳಿದೆ.
ನಾಗರಿಕರ ತೆರವು: ಉತ್ತರ ಗಾಜಾ ಪಟ್ಟಿಯಿಂದ ದಕ್ಷಿಣಕ್ಕೆ ತೆರಳುವಂತೆ ಇಸ್ರೇಲ್ ಮಿಲಿಟರಿ ಆದೇಶಿಸಿದ್ದು ಇದುವರೆಗೆ ಕನಿಷ್ಠ 4 ಲಕ್ಷ ಜನರನ್ನು ತೆರವುಗೊಳಿಸಲಾಗಿದೆ. ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ ಒಸಿಎಚ್ಎ ಈ ಮಾಹಿತಿ ನೀಡಿದೆ.
220 ಬಂಧನ: ಶನಿವಾರ ಸಂಘರ್ಷ ಆರಂಭವಾ ದಾಗಿನಿಂದ ಪಶ್ಚಿಮ ದಂಡೆಯಾದ್ಯಂತ, 220 ಪ್ಯಾಲೆಸ್ಟೀನಿಯರನ್ನು ಬಂಧಿಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ತಿಳಿಸಿದೆ. ಅವರಲ್ಲಿ ಹಲವರು ಹಮಾಸ್ಗೆ ಸಂಯೋಜಿತರಾದವರು ಎಂದು ಹೇಳಿದೆ. ಗುರುವಾರ ರಾತ್ರಿ 32 ಹಮಾಸ್ ಸದಸ್ಯರನ್ನು ಬಂಧಿಸಲಾಗಿತ್ತು.