

ಜೆರುಸಲೇಂ: ಗಾಜಾದಲ್ಲಿ ಆಡಳಿತ ನಡೆಸುತ್ತಿರುವ ಹಮಾಸ್ ಉಗ್ರಗಾಮಿ ಸಂಘಟನೆಯನ್ನು ಸಂಪೂರ್ಣವಾಗಿ ಸೋಲಿಸಲು ತಿಂಗಳಾನುಗಟ್ಟಲೆ ಅಥವಾ ಸುದೀರ್ಘ ಸಮರಕ್ಕೂ ತಾನು ಸಿದ್ಧ ಎಂದು ಇಸ್ರೇಲ್ ಘೋಷಿಸಿದ್ದು ಅ. 7ರಿಂದ ನಡೆಯುತ್ತಿರುವ ಸಂಘರ್ಷ ಸದ್ಯಕ್ಕೆ ಕೊನೆಗಾಣುವ ಲಕ್ಷಣ ಕಾಣಿಸುತ್ತಿಲ್ಲ. ಯುದ್ಧದಿಂದಾಗಿ ಮೃತಪಟ್ಟ ಪ್ಯಾಲೆಸ್ತೀನಿಯರ ಸಂಖ್ಯೆ 17,700 ದಾಟಿದೆ. ಇಸ್ರೇಲ್ ವೈಮಾನಿಕ ಹಾಗೂ ಫಿರಂಗಿ ದಾಳಿಯನ್ನು ಇನ್ನೂ ತೀವ್ರಗೊಳಿಸಿದ್ದು ಪ್ಯಾಲೆಸ್ತೀನಿಯರ ಆಕ್ರಂದನ ಮುಗಿಲು ಮುಟ್ಟಿದೆ.
* ಯೆಮೆನ್ ಕರಾವಳಿ ಬಳಿ ಕೆಂಪು ಸಮುದ್ರದಲ್ಲಿ ಒಂದು ಹಡಗಿನ ಮೇಲೆ ದಾಳಿ ನಡೆದಿದೆ ಎಂದು ಖಾಸಗಿ ಬೇಹುಗಾರಿಕೆ ಸಂಸ್ಥೆಯೊಂದು ಮಂಗಳವಾರ ಹೇಳಿದೆ. ಇದು ಹೌತಿ ಬಂಡುಕೋರರ ಕೃತ್ಯ ಇರಬಹುದೆಂಬ ಶಂಕೆ ಇದೆ. ತನ್ನ ನೌಕೆಯ ಮೇಲೆ ದಾಳಿಗೆ ಆಗಮಿಸುತ್ತಿದ್ದ ಕ್ಷಿಪಣಿ ಯೊಂದನ್ನು ಹೊಡೆದುರುಳಿಸಿರುವುದಾಗಿ ಫ್ರಾನ್ಸ್ ತಿಳಿಸಿದೆ.
* ಗಾಜಾಕ್ಕೆ ಮಾನವೀಯ ನೆರವಿನ ಸಾಮಗ್ರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಗಿಸಲು ನೆರವಾಗುವ ನಿಟ್ಟಿನಲ್ಲಿ ಗಾಜಾ ಪ್ರವೇಶಿಸುವ ಸರಕು ವಾಹನಗಳ ಪರಿಶೀಲನೆಗೆ ಎರಡನೇ ಕೇಂದ್ರ ತೆರೆಯುವುದಾಗಿ ಇಸ್ರೇಲ್ ಹೇಳಿದೆ.
* ಅಮೆರಿಕ ಪೂರೈಸಿರುವ ಬಿಳಿ ಫಾಸ್ಪರಸ್ ಮದ್ದು ಗುಂಡುಗಳನ್ನು ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ಬಳಸುತ್ತಿದೆ ಎಂಬ ವರದಿಗಳಿಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ.
* ಹಮಾಸ್ ವಿರುದ್ಧ ಇನ್ನಷ್ಟು ಹೊಸ ನಿರ್ಬಂಧಗಳನ್ನು ಹೇರುವಂತೆ ಫ್ರಾನ್ಸ್, ಜರ್ಮನಿ ಮತ್ತು ಇಟಲಿ ವಿದೇಶಾಂಗ ಸಚಿವರು ಆಗ್ರಹಿಸಿದ್ದಾರೆ.
* ಇಸ್ರೇಲ್ಗೆ ಸುಮಾರು 14,000 ಸುತ್ತು ಟ್ಯಾಂಕ್ ಮದ್ದುಗುಂಡುಗಳನ್ನು ಕಾಂಗ್ರೆಸ್ ಅನುಮತಿ ಇಲ್ಲದೆ ಪೂರೈಸಿದ್ದನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಅಥೋನಿ ಬ್ಲಿಂಕೆನ್ ಸಮರ್ಥಿಸಿ ಕೊಂಡಿದ್ದಾರೆ.
* ಮಹಾ ದುರಂತದಲ್ಲಿ ಬದುಕುಳಿದ, ಜಗತ್ತಿನಾದ್ಯಂತ ಇರುವ ಯೆಹೂದಿಗಳು ಹನುಕ್ಕಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಐದನೇ ದಿನವೂ ಸಮಾವೇಶಗೊಂಡಿದ್ದರು. ಜಗತ್ತಿನಾದ್ಯಂತದ ಯೆಹೂದಿಗಳು ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆನ್ಲೈನ್ ಸಮಾವೇಶವನ್ನೂ ಆಯೋಜಿಸಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಕೂಡ ಸೋಮವಾರ ಶ್ವೇತಭವನದಲ್ಲಿ ಹನುಕ್ಕಾ ಏರ್ಪಡಿಸಿದ್ದರು.
ವಿಶ್ವ ಸಂಸ್ಥೆ ತುರ್ತು ಸಭೆ
ಗಾಜಾದಲ್ಲಿ ಮಾನವೀಯ ನೆಲೆಯಲ್ಲಿ ತುರ್ತು ಯುದ್ಧ ವಿರಾಮ ಘೋಷಿಸಲು ಆಗ್ರಹಿಸುವ ಕರಡು ನಿರ್ಣಯದ ಮೇಲೆ ಮತದಾನ ಮಾಡಲು ವಿಶ್ವ ಸಂಸ್ಥೆ ಮಹಾ ಸಭೆಯ ತುರ್ತು ಸಭೆ ಮಂಗಳವಾರ ನಡೆಯಲಿದೆ. ಮಹಾ ಸಭೆಯ ಒಂದು ಮತ ಗಾಜಾ ಕದನ ವಿರಾಮಕ್ಕೆ ವ್ಯಾಪಕ ಬೆಂಬಲ ಕ್ರೋಡೀಕರಣಕ್ಕೆ ನೆರವಾಗಬಹುದೆಂಬುದು ಪ್ಯಾಲೆಸ್ತೀನಿಯರ ಆಶಾವಾದವಾಗಿದೆ.
ಕ್ರಿಸ್ಮಸ್ ಸಮಯ ಬೆತ್ಲೆಹೆಮ್ ನಿರ್ಜನ
ಕ್ರಿಸ್ವುಸ್ ಆಚರಣೆಗೆ ಇನ್ನು ಕೆಲವೇ ದಿನಗಳು ಉಳಿದಿದ್ದರೂ ಯುದ್ಧದ ಪರಿಣಾಮವಾಗಿ ಏಸು ಕ್ರಿಸ್ತನ ಜನ್ಮ ಸ್ಥಳ ಬೆತ್ಲೆಹೆಮ್ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿದೆ. ಯಾತ್ರಿಗಳು ಮತ್ತು ಪ್ರವಾಸಿಗರು ತೊರೆದು ಹೋಗುತ್ತಿರುವುದರಿಂದ ಬೆತ್ಲೆಹೆಮ್ ನಿರ್ಜನವಾಗಿದ್ದು ಕ್ರಿಸ್ವುಸ್ ಸಂಭ್ರಮದ ಮೇಲೆ ಮಂಕು ಕವಿದಿದೆ. ಯುದ್ಧಕ್ಕೆ ಕಾರಣವಾಗುವ ಅಂಶಗಳನ್ನು ತೊಡೆದು ಹಾಕಬೇಕೆಂದು ಪೋಪ್ ಫ್ರಾನ್ಸಿಸ್ ಕರೆ ನೀಡಿದ್ದಾರೆ. ಭಾನುವಾರ ವ್ಯಾಟಿಕನ್ ನಗರದಲ್ಲಿ ನೆರೆದ ಸಾರ್ವಜನಿಕರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪೋಪ್ ನೀಡಿದ ಕರೆ ಪ್ರಸಕ್ತ ಹಮಾಸ್-ಇಸ್ರೇಲ್ ಸಮರದ ಹಿನ್ನೆಲೆಯಲ್ಲಿ ಮಹತ್ವದ್ದಾಗಿದೆ.