ಕತಾರ್ ರಾಜಧಾನಿ ದೋಹಾದಲ್ಲಿ ಸಭೆ ಸೇರಿದ್ದ ಹಮಾಸ್​ ಉಗ್ರರ ಮೇಲೆ ದಾಳಿ ಮಾಡಿದ ಇಸ್ರೇಲ್| Israel​

Benjamin Netanyahu 09
Published on

Israel: ಕತಾರ್ ರಾಜಧಾನಿ ದೋಹಾದಲ್ಲಿ ಸ್ಫೋಟಗಳು ಸಂಭವಿಸಿದ್ದು, ಕದನ ವಿರಾಮ ಮಾತುಕತೆಗೆ ಹಾಜರಿದ್ದ ಪ್ಯಾಲೆಸ್ಟೀನಿಯನ್ ಗುಂಪು ಹಮಾಸ್‌ನ ಉನ್ನತ ನಾಯಕರ ಮೇಲೆ ಇಸ್ರೇಲ್ ದಾಳಿ ನಡೆಸಿದೆ.

ಈ ದಾಳಿಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಅದನ್ನು ಪ್ರಾರಂಭಿಸಿದೆ. ಇಸ್ರೇಲ್ ಅದನ್ನು ಕಾರ್ಯಗತಗೊಳಿಸಿತು ಮತ್ತು ಇಸ್ರೇಲ್ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಯಾರು ಸಾವನ್ನಪ್ಪಿರಬಹುದು ಅಥವಾ ಗಾಯಗೊಂಡಿರಬಹುದು ಎಂಬ ವಿವರಗಳು ತಕ್ಷಣಕ್ಕೆ ತಿಳಿದು ಬಂದಿಲ್ಲ. ಆದರೆ, ಇಸ್ರೇಲಿ ಮಾಧ್ಯಮಗಳು ಖಲೀಲ್ ಅಲ್-ಹಯಾ ಮತ್ತು ಜಹೆರ್ ಜಬಾರಿನ್ ಗಾಯಗೊಂಡವರಲ್ಲಿ ಸೇರಿದ್ದಾರೆ ಎಂದು ತಿಳಿಸಿವೆ.

ಹಮಾಸ್‌ನ ಗಡಿಪಾರು ಮಾಡಲಾದ ನಾಯಕರು ಬಹಳ ಹಿಂದಿನಿಂದಲೂ ಕತಾರ್‌ನಲ್ಲಿ ನೆಲೆಸಿದ್ದರು. ಕಳೆದ ವರ್ಷ ಇಸ್ರೇಲ್‌ ಸೇನೆನಿಂದ ಯಾಹ್ಯಾ ಸಿನ್ವಾರ್ ಹತ್ಯೆಯಾಗಿದ್ದರು. ಇಸ್ರೇಲ್ ಗಾಜಾ ನಗರವನ್ನು ತನ್ನ ನಿವಾಸಿಗಳಿಂದ ತೆರವುಗೊಳಿಸಲು ಮುಂದಾದಾಗಲೂ, ಈ ದಾಳಿಯು ಗಾಜಾದಲ್ಲಿ ಕದನ ವಿರಾಮದ ಕುರಿತಾದ ಮಾತುಕತೆಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಬಹುದು.

ಈ ವಾರದ ಆರಂಭದಲ್ಲಿ ಡೊನಾಲ್ಡ್ ಟ್ರಂಪ್ ಕದನ ವಿರಾಮಕ್ಕಾಗಿ ಹಮಾಸ್‌ಗೆ ತನ್ನ ಕೊನೆಯ ಎಚ್ಚರಿಕೆ ನೀಡುತ್ತಿರುವುದಾಗಿ ತಿಳಿಸಿದ್ದರು. ಟ್ರಂಪ್ ಮಧ್ಯಪ್ರಾಚ್ಯ ರಾಯಭಾರಿ ಸ್ಟೀವ್ ವಿಟ್ಕಾಫ್ ಮಂಡಿಸಿದ ಈ ಪ್ರಸ್ತಾವನೆಯು, ಮಾತುಕತೆಯ ಮೂಲಕ ಯುದ್ಧವನ್ನು ಕೊನೆಗೊಳಿಸಲು ಮತ್ತು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ನಂತರ ಮತ್ತು ಕದನ ವಿರಾಮವನ್ನು ಸ್ಥಾಪಿಸಿದ ನಂತರ ಗಾಜಾದಿಂದ ಇಸ್ರೇಲಿ ಪಡೆಗಳನ್ನು ಹಿಂತೆಗೆದುಕೊಳ್ಳಲು ಕರೆ ನೀಡಿದೆ ಎಂದು ತಿಳಿದು ಬಂದಿತ್ತು.

ಈ ದಾಳಿಗೆ ಪ್ರತಿಕ್ರಿಯಿಸಿರುವ ಕತಾರ್ ಆಡಳಿತ ಹೇಡಿತನ ಎಂದು ಖಂಡಿಸಿದೆ . ಕತಾರ್​ ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್-ಅನ್ಸಾರಿ ಇದನ್ನು ಎಲ್ಲಾ ಅಂತರರಾಷ್ಟ್ರೀಯ ಕಾನೂನುಗಳು ಮತ್ತು ಮಾನದಂಡಗಳ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದ್ದಾರೆ.

ಇಸ್ರೇಲಿ ಸೇನೆಯು ಯಾವುದೇ ನಿರ್ದಿಷ್ಟ ಮಾಹಿತಿಯನ್ನು ನೀಡಿಲ್ಲ. ಆದರೆ, ಹಮಾಸ್ ನಾಯಕರು ಹಲವು ವರ್ಷಗಳಿಂದ ಭಯೋತ್ಪಾದಕ ಕಾರ್ಯಾಚರಣೆಗಳನ್ನು ಮುನ್ನಡೆಸುತ್ತಿದ್ದಾರೆ. 2023ರ ಅಕ್ಟೋಬರ್ 7 ರಂದು ನಡೆದ ಕ್ರೂರ ಹತ್ಯಾಕಾಂಡಕ್ಕೆ ನೇರ ಹೊಣೆಗಾರರಾಗಿದ್ದಾರೆ ಎಂದು ಇಸ್ರೇಲ್ ತಿಳಿಸಿತು. ನಾಗರಿಕರಿಗೆ ಆಗುವ ಹಾನಿಯನ್ನು ಕಡಿಮೆ ಮಾಡಲು, ದಾಳಿಗೂ ಮುನ್ನ ನಿಖರವಾದ ಯುದ್ಧಸಾಮಗ್ರಿಗಳ ಬಳಕೆ ಮತ್ತು ಹೆಚ್ಚುವರಿ ಗುಪ್ತಚರ ಮಾಹಿತಿ ಸೇರಿದಂತೆ ಕ್ರಮಗಳನ್ನು ತೆಗೆದುಕೊಂಡಿದ್ದಾಗಿ ಇಸ್ರೇಲಿ ಸೇನೆ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net