

ಒಟ್ಟಾವಾ: ಕೆನಡಾ-ಭಾರತದ ನಡುವೆ ಬಿಕ್ಕಟ್ಟು ಏರ್ಪಡಲು ಕಾರಣವಾಗಿರುವ ಖಲಿಸ್ತಾನ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಪಾಕಿಸ್ತಾನದ ಉಗ್ರ ಸಂಸ್ಥೆ ಐಎಸ್ಐ ಕೈವಾಡವಿರುವುದಾಗಿ ವಿಶ್ವಸನೀಯ ಮೂಲಗಳು ತಿಳಿಸಿವೆ.
ಸಹಕರಿಸದಿದ್ದಕ್ಕೆ ಹತ್ಯೆ: ಭಾರತದಲ್ಲಿ ಉಗ್ರವಾದ ಹೆಚ್ಚಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೇಗಾದರೂ ಭಾರತಕ್ಕೆ ಮಸಿ ಬಳಿಯಬೇಕೆಂದು ತೀರ್ಮಾನಿಸಿದ ಪಾಕಿಸ್ತಾನವು, ಖಲಿಸ್ತಾನ್ ವಾದಿಗಳು ಹೆಚ್ಚಾಗಿದ್ದ ಕೆನಡಾದಲ್ಲಿ ತನ್ನ ಮಸಲತ್ತು ತೋರಲು ಐಎಸ್ಐ ಏಜಂಟರನ್ನು ಬಳಸಿಕೊಂಡಿದೆ.
ಕೆಲವು ಐಎಸ್ಐ ಉಗ್ರರನ್ನು ಕೆನಡಾಗೆ ಕಳುಹಿಸಿದ್ದು, ಅವರಿಗೆ ಸಹಕರಿಸುವಂತೆ ನಿಜ್ಜರ್ ಮೇಲೆ ಒತ್ತಡ ಹೇರಿದೆ. ಆದರೆ ಆತ ಇವರಿಗೆ ಸಹಕರಿಸದೆ ಖಲೀಸ್ತಾನ್ ಬೆಂಬಲಿಗರ ಕಡೆಗೇ ಒಲವು ತೋರಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಐಎಸ್ಐ ಉಗ್ರರು ನಿಜ್ಜರ್ರನ್ನು ಹತ್ಯೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮತ್ತೊಬ್ಬ ವ್ಯಕ್ತಿಯನ್ನು ತಮ್ಮ ಮಾತು ಕೇಳುವಂತೆ ಮಾಡಿಕೊಂಡು ಖಲಿಸ್ತಾನ್ ಉಗ್ರರನ್ನು ಪೋಷಿಸಲು ಮುಂದಾಗಿದೆ ಎನ್ನಲಾಗಿದೆ.
ನಿಜ್ಜರ್ ಹತ್ಯೆ ಭಾರತ-ಕೆನಡಾ ನಡುವೆ ಸಂಬಂಧ ಹದಗೆಡಲು ಕಾರಣವಾಗಿದ್ದು, ಭಾರತ ವೀಸಾಗಳನ್ನು ರದ್ಧುಪಡಿಸಿತ್ತಲ್ಲದೆ, ಕೆನಡಾದ ಖಲಸ್ತಾನ್ ಉಗ್ರರ ಭಾರತದಲ್ಲಿನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ವಿಶ್ವಸಂಸ್ಥೆಯ 78ನೇ ಸರ್ವ ಸದಸ್ಯರ ಸಭೆಯಲ್ಲಿ ಆ ದೇಶದ ವಿರುದ್ಧ ಧ್ವನಿ ಎತ್ತಿದ್ದು, ಕೇವಲ ರಾಜಕೀಯ ಲಾಭಕ್ಕಾಗಿ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಸ್ಪಷ್ಟಪಡಿಸಿದ್ದನ್ನು ಸ್ಮರಿಸಬಹುದು,(ಏಜೆನ್ಸೀಸ್).