

ಕೆ.ಎನ್.ರಾಘವೇಂದ್ರ ಮಂಡ್ಯ
ನೀರಾವರಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ತಗಲುವ ವೆಚ್ಚವನ್ನು ರೈತರೇ ಭರಿಸಬೇಕೆನ್ನುವ ರಾಜ್ಯ ಸರ್ಕಾರದ ಆದೇಶ ಕಗ್ಗಂಟಾಗಿ ಪರಿಣಮಿಸಿದೆ. ಬರಗಾಲದಿಂದ ಕಂಗೆಟ್ಟಿರುವ ರೈತರು ದುಬಾರಿ ಹಣ ಖರ್ಚು ಮಾಡುವಷ್ಟು ಶಕ್ತಿ ಹೊಂದಿಲ್ಲ. ಪರಿಣಾಮ, ವಿದ್ಯುತ್ ಸಂಪರ್ಕದ ಆರ್ಥಿಕ ‘ಭಾರ’ಕ್ಕೆ ಹೆದರಿ ಬೋರ್ವೆಲ್ ಕೊರೆಸಲು ಹಿಂದೆಮುಂದೆ ನೋಡುವಂತಹ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಸ್ವಂತ ವೆಚ್ಚದ ಆದೇಶವನ್ನು ಸರ್ಕಾರ ಈ ಬಜೆಟ್ನಲ್ಲಿ ಹಿಂಪಡೆಯಬಹುದೆನ್ನುವ ನಿರೀಕ್ಷೆ ಹೆಚ್ಚಾಗಿದೆ.
ಹಿಂದೆ ಅಕ್ರಮ ಸಕ್ರಮಕ್ಕೆಂದು 18 ಸಾವಿರ ರೂ. ಪಾವತಿಸಿದರೆ ಸಾಕಿತ್ತು. ಈ ರೀತಿ ಶುಲ್ಕ ಪಾವತಿಸಿದ ಅಕ್ಕಪಕ್ಕದ ಜಮೀನಿನವರ ಬಿಲ್ ಪಡೆದು ವಿದ್ಯುತ್ ಕಂಬ, ವಯರ್ ಹಾಗೂ ಟಿಸಿಗಳನ್ನು ಇಲಾಖೆಯಿಂದ ಪೂರೈಕೆ ಮಾಡಲಾಗುತ್ತಿತ್ತು. ಟೆಂಡರ್ ಪಡೆದ ಗುತ್ತಿಗೆದಾರ ಕೆಲಸ ಮಾಡಿಕೊಡುತ್ತಿದ್ದರು. ಇಂಥ ಸ್ಥಿತಿ ಇದ್ದಾಗಲೂ ವಿದ್ಯುತ್ ಸಂಪರ್ಕ ಪಡೆಯಲು ಹರಸಾಹಸ ಪಡಬೇಕಿತ್ತು. ಎಷ್ಟೋ ವರ್ಷದ ಹಿಂದೆ ಸರ್ಕಾರಕ್ಕೆ ಶುಲ್ಕ ಪಾವತಿಸಿದವರು ಸಂಪರ್ಕಕ್ಕೆ ಇಂದಿಗೂ ಕಾಯುತ್ತಿದ್ದಾರೆ. ಆದರೆ ಸರ್ಕಾರದ ಹೊಸ ಆದೇಶದಿಂದ ಪ್ರತಿ ರೈತರು ಕನಿಷ್ಠ 2 ರಿಂದ 3 ಲಕ್ಷ ರೂ. ವೆಚ್ಚ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಇಕ್ಕಟ್ಟಿಗೆ ಸಿಲುಕಿಸಿರುವ ಆದೇಶ: ಸ್ವಂತ ವೆಚ್ಚ ಪಾವತಿಸುವ ಆದೇಶವನ್ನು ರಾಜ್ಯ ಸರ್ಕಾರ ಕಳೆದ ವರ್ಷ ಜಾರಿಗೆ ತಂದಿತು. 2023ರ ಸೆ.22ಕ್ಕೆ ಅನ್ವಯಿಸುವಂತೆ ಐಪಿ ಸೆಟ್ಗಳನ್ನು ಒಂದು ಬಾರಿಗೆ ಸಕ್ರಮಗೊಳಿಸುವ ನಿರ್ಧಾರ ಮಾಡಿತ್ತು. ಅಂದರೆ, ಸೆ.22ಕ್ಕೂ ಮುನ್ನ ಸಲ್ಲಿಕೆಯಾಗಿರುವ ಅರ್ಜಿ ಹಾಗೂ ಅಕ್ರಮ ಸಕ್ರಮ ಪಾವತಿಸಿರುವ ಐಪಿ ಸೆಟ್ಗಳಿಗೆ ಮಾತ್ರ ಸರ್ಕಾರದ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಘೊಷಣೆ ಮಾಡಿತ್ತು. ಇದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಅ.10ರಂದು ಇಂಧನ ಇಲಾಖೆ ನೂತನ ಆದೇಶ ಹೊರಡಿಸಿತ್ತು. ಆದರೆ ಇದು ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಿಂದಿನ ಒಂದಷ್ಟು ವರ್ಷಗಳಿಗೆ ಹೋಲಿಸಿದರೆ ಮಳೆಯ ಪ್ರಮಾಣವೂ ಉತ್ತಮವಾಗಿತ್ತು. ತೀರಾ ಅನಿವಾರ್ಯತೆ ಇದ್ದವರಷ್ಟೇ ಬೋರ್ವೆಲ್ ಕೊರೆಸಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಿದ್ದರು. ಅದರಲ್ಲಿಯೂ ಮಳೆಯಾಶ್ರಿತ ಪ್ರದೇಶಕ್ಕೆ ಇದು ಅನಿವಾರ್ಯ. ಇತ್ತೀಚಿನ ವರ್ಷದಲ್ಲಿ ಮಳೆಯ ಪ್ರಮಾಣ ಇಳಿಮುಖವಾಗುತ್ತಿದೆ. ಇದರಿಂದಾಗಿ ಬೋರ್ವೆಲ್ ಕೊರೆಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಆದರೆ ರೈತರು ನಿರೀಕ್ಷೆಯನ್ನೇ ಮಾಡದ ರೀತಿ ರಾಜ್ಯ ಸರ್ಕಾರ ಹೊರಡಿಸಿದ ಸ್ವಂತ ವೆಚ್ಚದ ಆದೇಶ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪರಿಣಾಮ, ಕೃಷಿಯಿಂದ ವಿಮುಖಗೊಳ್ಳುವಂತೆ ಪ್ರೇರೆಪಿಸುತ್ತಿದೆ. ಇನ್ನು ಹೊಸ ನಿಯಮ ಜಾರಿಯಾದ ಬಳಿಕ ವಿದ್ಯುತ್ ಸಂಪರ್ಕಕ್ಕೆ ಅರ್ಜಿಯನ್ನು ಸ್ವೀಕರಿಸುತ್ತಿಲ್ಲ.
ದೊಡ್ಡಮಟ್ಟದ ನಿರೀಕ್ಷೆ: ಆದೇಶ ಹೊರಡಿಸಿದ ಸಮಯ ದಲ್ಲಿಯೇ ರೈತರಿಂದ ಆಕ್ಷೇಪ ವ್ಯಕ್ತವಾಗಿತ್ತು. ಅದರಲ್ಲಿಯೂ ಕೃಷಿ ಪ್ರಧಾನ ಜಿಲ್ಲೆಗಳಲ್ಲಿ ಆಡಳಿತ ಪಕ್ಷಕ್ಕೆ ದೊಡ್ಡಮಟ್ಟದ ಹಿನ್ನಡೆಯಾಗಲಿದೆ ಎನ್ನುವ ಸಂದೇಶವೂ ರವಾನೆಯಾಗಿತ್ತು. ಇನ್ನು ಇಲಾಖೆಯ ಅಧಿಕಾರಿಗಳು ಆದೇಶದಿಂದಾಗುತ್ತಿರುವ ಬಾಧಕದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಎಲ್ಲ ಕಾರಣದಿಂದ ಬಜೆಟ್ನಲ್ಲಿ ಆದೇಶ ಹಿಂಪಡೆಯುವ ನಿರೀಕ್ಷೆಯನ್ನು ರೈತರ ಜತೆಗೆ ಸ್ವತಃ ಅಧಿಕಾರಿಗಳೂ ಹೊಂದಿದ್ದಾರೆ.