

ಬೆಂಗಳೂರು: ಜಾತಿ ಆಧಾರಿತ ನಿಗಮ-ಮಂಡಳಿಗಳ ಸ್ಥಾಪನೆಯಿಂದ ಜಾತ್ಯತೀತ ಪರಿಕಲ್ಪನೆಯ ಉಲ್ಲಂಘನೆಯಾಗಲಿದೆಯೇ ಎನ್ನುವ ಕುರಿತು ಪರಿಶೀಲಿಸುವುದಾಗಿ ಹೈಕೋರ್ಟ್ ಹೇಳಿದೆ. ವೀರಶೈವ-ಲಿಂಗಾಯತ ಅಭಿವೃದ್ಧಿ ಮಂಡಳಿ, ಮರಾಠ ಅಭಿವೃದ್ಧಿ ನಿಗಮ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸೇರಿ ಜಾತಿ ಆಧಾರಿತ ನಿಗಮ-ಮಂಡಳಿಗಳನ್ನು ರಚಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಪಿಐಎಲ್ಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಸರ್ಕಾರ, ಅರ್ಜಿದಾರರು ಹಾಗೂ ಇತರ ಪ್ರತಿವಾದಿಗಳ ಪರವಾಗಿ 2 ತಾಸಿಗೂ ಅಧಿಕ ಸಮಯ ವಾದ-ಪ್ರತಿವಾದ ಆಲಿಸಿದ ಪೀಠ, ಜಾತಿ ಆಧಾರಿತ ನಿಗಮ-ಮಂಡಳಿಗಳ ರಚನೆಯನ್ನು ಕಾನೂನಿನ ವ್ಯಾಪ್ತಿಯಲ್ಲಿ ಪರಿ ಗಣಿಸಿ, ಪರಿಶೀಲಿಸುವುದಾಗಿ ತಿಳಿಸಿ, ಅರ್ಜಿ ಗಳನ್ನು 2022ರ ಫೆ.2ಕ್ಕೆ ಅಂತಿಮ ವಿಚಾರಣೆಗೆ ನಿಗದಿಪಡಿಸಿತು.
ಪ್ರಾಥಮಿಕ ಆಕ್ಷೇಪಣೆ ಪರಿಗಣಿಸಲು ನಕಾರ: ಸರ್ಕಾರಗಳಿಗೆ ಜಾತಿ ಆಧಾರಿತ ನಿಗಮಗಳನ್ನು ಸ್ಥಾಪಿಸಲು ಸಂವಿಧಾನದ ಪಟ್ಟಿ 2ರಲ್ಲಿನ 32ನೇ ಉಲ್ಲೇಖದ ಅಡಿಯಲ್ಲಿ ಅವಕಾಶವಿದೆಯೇ, ಕೆಲವೇ ಕೆಲವು ಜಾತಿಗಳ ಅಭಿವೃದ್ಧಿಗಾಗಿ ಸಾರ್ವಜನಿಕರ ಹಣವನ್ನು ವಿನಿಯೋಗಿಸುವುದು ಸಂವಿಧಾನದ ಪರಿಚ್ಛೇದ 27ರ ಉಲ್ಲಂಘನೆ ಯಾಗಲಿದೆಯೇ ಎಂಬ ಅಂಶಗಳು ಸೇರಿ, ಅನೇಕ ಪ್ರಶ್ನೆಗಳಿಗೆ ಮೊದಲು ಉತ್ತರ ಕಂಡುಕೊಳ್ಳಬೇಕಿದೆ. ಆದ್ದರಿಂದ, ಅರ್ಜಿಗಳ ವಿಚಾರಣಾ ಮಾನ್ಯತೆ ಬಗ್ಗೆ ಸರ್ಕಾರ ಎತ್ತಿರುವ ಪ್ರಾಥಮಿಕ ಆಕ್ಷೇಪಣೆಗಳನ್ನು ಈ ಹಂತದಲ್ಲಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿತು.
ಅರ್ಜಿದಾರರ ಆಕ್ಷೇಪ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಪೊ›. ರವಿವರ್ಮ ಕುಮಾರ್, ಜಾತಿ ಆಧಾರಿತ ನಿಗಮಗಳನ್ನು ಸೃಷ್ಟಿಸಿರುವ ಕ್ರಮ ಸಂಪೂರ್ಣ ತಾರತಮ್ಯ, ಸ್ವೇಚ್ಛೆಯಿಂದ ಕೂಡಿದೆ. ರಾಜಕೀಯ ಉದ್ದೇಶದಿಂದ ನಿಗಮ- ಮಂಡಳಿಗಳನ್ನು ರಚಿಸಲಾಗಿದ್ದು, ಅವುಗಳನ್ನು ರದ್ದುಗೊಳಿಸಬೇಕು ಎಂದು ಕೋರಿದರು.
ಸರ್ಕಾರದ ವಾದವೇನು?: ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ಕೆಲವೇ ಕೆಲವು ನಿಗಮ ಮಂಡಳಿಗಳನ್ನು ಗುರಿಯಾಗಿಟ್ಟುಕೊಂಡು ಪಿಐಎಲ್ ಸಲ್ಲಿಸಲಾಗಿದೆ. ಇಂಥ ನಿಗಮ ಅಥವಾ ಮಂಡಳಿಗಳನ್ನು ರಚಿಸುವ ಸಂಬಂಧ ಸರ್ಕಾರ ಹೊರಡಿಸಿರುವ ಎಲ್ಲ ಆದೇಶಗಳನ್ನೂ ಪ್ರಶ್ನಿಸಲಾಗಿಲ್ಲ. ಕೆಲ ನಿಗಮ-ಮಂಡಳಿಗಳು 15-20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಅರ್ಜಿದಾರರು 2020ರಲ್ಲಿ ರಚನೆಯಾದ ನಿಗಮಗಳನ್ನು ಮಾತ್ರ ಪ್ರಶ್ನಿಸಿದ್ದಾರೆ ಎಂದು ಅರ್ಜಿಗಳ ವಿಚಾರಣಾ ಮಾನ್ಯತೆ ಬಗ್ಗೆ ಪ್ರಾಥಮಿಕ ಆಕ್ಷೇಪಣೆ ಎತ್ತಿದರು. ಸರ್ಕಾರ ಬಜೆಟ್ನಲ್ಲಿ ಘೋಷಿಸುವ ಅನುದಾನ ಬಳಕೆ ಮಾಡಿಕೊಂಡು ಕಾರ್ಯಕ್ರಮ ಜಾರಿ ಮಾಡುವುದಷ್ಟೇ ನಿಗಮ-ಮಂಡಳಿಗಳ ಕೆಲಸವಾಗಿದ್ದು, ಅವು ಜಾರಿ ಸಂಸ್ಥೆಗಳಷ್ಟೇ ಆಗಿವೆ. ಎಲ್ಲಿಯವರೆಗೆ ಕರ್ನಾಟಕ ಧನ ವಿನಿಯೋಗ ಕಾಯ್ದೆ-2021 ಅನ್ನು ಪ್ರಶ್ನಿಸುವುದಿಲ್ಲವೋ ಅಲ್ಲಿಯವರೆಗೆ ಪ್ರತ್ಯೇಕವಾಗಿ ಈ ನಿಗಮ-ಮಂಡಳಿಗಳ ರಚನೆ ಪ್ರಶ್ನಿಸಲಾಗದು ಎಂದು ತಿಳಿಸಿದರು.