

ಬೆಂಗಳೂರು: ಜಗತ್ತಿನ 200ಕ್ಕೂ ಅಧಿಕ ಕಂಪನಿಗಳೀಗ ಕರೊನಾ ಲಸಿಕೆ ಕಂಡು ಹಿಡಿಯುವ ಕಾಯಕದಲ್ಲಿ ತೊಡಗಿವೆ. ಇದರಲ್ಲಿ 20ಕ್ಕೂ ಅಧಿಕ ಕಂಪನಿಗಳು ಕ್ಲಿನಿಕಲ್ ಟ್ರಯಲ್ ಹಂತಕ್ಕೆ ತಲುಪಿವೆ.
ಸಾಮಾನ್ಯವಾಗಿ ಇಲಿ, ಮಂಗಗಳ ಮೇಲೆ ಲಸಿಕೆಯನ್ನು ಪ್ರಯೋಗಿಸಿದ ಮೇಲೆ ಯಶಸ್ಸು ಕಂಡ ಬಂದಲ್ಲಿ ಅದನ್ನು ಮಾನವರ ಮೇಲೆ ಪ್ರಯೋಗಿಸುವ ಹಂತಕ್ಕೆ ಬರಲಾಗುತ್ತದೆ. ಈ ಇಲಿ ಹಾಗೂ ಮಂಗಗಳಿಗೂ ಬಾರಿ ಡಿಮ್ಯಾಂಡ್ ಇದೆ ಎನ್ನುವುದು ಬೇರೆ ಮಾತು.
ಆಯಾ ರೋಗಗಳಿಗೆ ಕಾರಣವಾಗುವ ವೈರಸ್ಗಳನ್ನು ದುರ್ಬಲಗೊಳಿಸಿ ಅಥವಾ ನಾಶಗೊಳಿಸಿ ಲಸಿಕೆ ರೂಪದಲ್ಲಿ ದೇಹಕ್ಕೆ ಸೇರಿಸುವ ವಿಧಾನವೇ ಹೆಚ್ಚಾಗಿ ಬಳಕೆಯಲ್ಲಿದೆ. ಆರಂಭದಲ್ಲಿ ಆರೋಗ್ಯವಂತ ಮಾನವರ ಮೇಲೆ ಇಂಥ ಲಸಿಕೆಗಳನ್ನು ಪ್ರಯೋಗಿಸಲಾಗುತ್ತದೆ.
ಮೊದಲ ಹಂತದಲ್ಲಿ ಹತ್ತಾರು ಜನರ ಮೇಲೆ ಎರಡನೇ ಹಂತದಲ್ಲಿ ನೂರಾರು ಹಾಗೂ ಮೂರನೇ ಹಂತದಲ್ಲಿ ಸಾವಿರಾರು ಕೆಲವೊಮ್ಮೆ ಹತ್ತಿಪ್ಪತ್ತು ಸಾವಿರ ಜನರ ಮೇಲೆ ಪ್ರಯೋಗಿಸಲಾಗುತ್ತದೆ. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಪ್ರಯೋಗ ನಡೆದು ಯಶಸ್ವಿಯಾದರಷ್ಟೇ ಅದರ ಸಾರ್ವತ್ರಿಕ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅಥವಾ ಇತರ ಸಂಸ್ಥೆಗಳು ಅನುಮತಿ ನೀಡುತ್ತವೆ.
ಸಾಮಾನ್ಯವಾಗಿ ಕ್ಲಿನಿಕಲ್ ಟ್ರಯಲ್ಗೆ ಒಳಗಾಗುವ ಆರೋಗ್ಯವಂತ ವ್ಯಕ್ತಿಗಳಿಗೆ ಗೌರವ ಧನ ಅಥವಾ ಪರಿಹಾರ ನಿಡಲಾಗುತ್ತದೆ. ಔಷಧ ಕಂಪನಿಗಳಿಗೆ ಇಂಥ ಮಾನವ ಸಂಪನ್ಮೂಲ ಒದಗಿಸುವ ನೂರಾರು ಕಂಪನಿಗಳು ಜಾಗತಿಕವಾಗಿ ಕಾರ್ಯ ನಿರ್ವಹಿಸುತ್ತವೆ. ಇವುಗಳ ವೆಬ್ಸೈಟ್ನಲ್ಲಿ ಕ್ಲಿನಿಕಲ್ ಟ್ರಯಲ್ಗೆ ಬೇಕಾಗುವ ವ್ಯಕ್ತಿಗಳು, ಅವಧಿ ಹಾಗೂ ಅದಕ್ಕೆ ನೀಡಲಾಗುವ ಮೊತ್ತವನ್ನು ಪಾರದರ್ಶಕವಾಗಿ ನೀಡಲಾಗಿರುತ್ತದೆ. ಇದು ಕೆಲ ಸಾವಿರ ರೂ.ಗಳಿಂದ ಲಕ್ಷಗಟ್ಟಲೇ ಇರುತ್ತದೆ.
ಉದಾಹರಣೆಗೆ, ಫ್ಲೊರಿಡಾದ ಕಂಪನಿಯೊಂದು ಒಂದು ತಿಂಗಳ ಕ್ಲಿನಿಕಲ್ ಟ್ರಯಲ್ 21-60 ವಯಸ್ಸಿನ ಪುರುಷ ಮತ್ತು ಮಹಿಳೆಯರಿಗೆ 2,500 ಡಾಲರ್ ನೀಡಿದರೆ (ಅಂದಾಜು 1.87 ಲಕ್ಷ) ಇನ್ನೊಂದು ಕಂಪನಿ ಇಷ್ಟೇ ಅವಧಿಗೆ 13,056 ಡಾಲರ್ ( ಅಂದಾಜು 9.79 ಲಕ್ಷ ರೂ) ಆಫರ್ ಮಾಡಿದೆ. ಕೆಲವೊಮ್ಮೆ ಈ ಮೊತ್ತ ಇನ್ನು ಹೆಚ್ಚಾಗಬಹುದು. ಭಾರತದಲ್ಲಿ ಈ ಮೊತ್ತ ಸಾವಿರಗಟ್ಟಲೇ ಇರುತ್ತದೆ. ಇದನ್ನು ಬಹಿರಂವಾಗ ಘೋಷಿಸುವ ವೆಬ್ಸೈಟ್ಗಳು ಕಡಿಮೆ.
ಸದ್ಯ ನಡೆಯುತ್ತಿರುವ ಕರೊನಾ ಲಸಿಕೆಯ ಕ್ಲಿನಿಕಲ್ ಟ್ರಯಲ್ಗೆ ಆಯಾ ದೇಶಗಳೇ ಜವಾಬ್ದಾರಿ ವಹಿಸಿಕೊಂಡಿವೆ. ಭಾರತದಲ್ಲಿ ಭಾರತ್ ಬಯೋಟೆಕ್ಗೆ ಐಸಿಎಂಆರ್ ಕ್ಲಿನಿಕಲ್ ಟ್ರಯಲ್ ಸಹಭಾಗಿತ್ವ ನೀಡಿದೆ. ರಷ್ಯಾದಲ್ಲಿ ರಕ್ಷಣಾ ಇಲಾಖೆ ಯೋಧರನ್ನೇ ಇದಕ್ಕೆ ಬಳಸಿಕೊಳ್ಳುತ್ತಿದೆ. ಚೀನಾದಲ್ಲಿ ಸೂಚಿತ ಸರ್ಕಾರಿ ಉದ್ಯೋಗಿಗಳಿಗೆ ಇದು ಕಡ್ಡಾಯ. ಅಮೆರಿಕದಲ್ಲಿ ಮಾಡೆರ್ನಾ ಕಂಪನಿಗೆ ಕೋಟ್ಯಂತರ ಡಾಲರ್ಗಳನ್ನು ಸರ್ಕಾರ ನೀಡಿದೆ.
ಕ್ಲಿನಿಕಲ್ ಟ್ರಯಲ್ಗೆ ಒಳಗಾಗುವ ಅಭ್ಯರ್ಥಿಗಳಿಗೆ 24 ಗಂಟೆಯೂ ವೈದ್ಯರ ನೆರವು ದೊರೆಯುವಂತೆ ನೋಡಿಕೊಳ್ಳಲಾಗಿರುತ್ತದೆ. ಕಂಪನಿ, ಔಷಧಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸದಂತೆ ಒಪ್ಪಂದ ಮಾಡಿಕೊಂಡಿರಲಾಗುತ್ತದೆ. ಕೆಲವೊಮ್ಮೆ ಲಸಿಕೆ ಹಾಕಿಸಿಕೊಂಡವರಿಗೆ ಅದು ಏನು, ಯಾಕಾಗಿ ನೀಡಲಾಗಿದೆ ಎಂಬುದು ಗೊತ್ತಿಲ್ಲದೇ ಬಲಿಪಶುಗಳಾಗಿರುತ್ತಾರೆ.