

ನವದೆಹಲಿ: ಕರೊನಾ ಸಂಕಷ್ಟಕ್ಕೆ ಇನ್ನಿಲ್ಲದಂತೆ ತತ್ತರಿಸಿದೆ ಪಾಕಿಸ್ತಾನ ಮೊದಲೇ ಆರ್ಥಿಕ ವ್ಯವಸ್ಥೆ ಹದಗೆಟ್ಟು ಪಾಕಿಸ್ತಾನ ಕಂಗೆಟ್ಟಿತ್ತು. ಅದರಲ್ಲೀಗ ಕರೊನಾ ಹೊಡೆತಕ್ಕೆ ಮೇಲೇಳದಂತಾಗಿದೆ.
ದೇಶದಲ್ಲಿನ ಕರೊನಾ ಸಂಕಷ್ಟವನ್ನು ನಿಗ್ರಹಿಸಲು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (ಐಎಂಎಫ್) ಅತ್ತು ಕರೆದು ನೆರವು ಪಡೆದಿತ್ತು. ಕಳೆದ ತಿಂಗಳು 1.4 ಬಿಲಿಯನ್ ಡಾಲರ್ ( ಅಂದಾಜು 2.24 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿ) ನೆರವು ಐಎಂಎಫ್ ಸಮ್ಮತಿಸಿತ್ತು.
ಐಎಂಎಫ್ ಮಂಡಳಿಯಿಲ್ಲಿದ್ದ ಭಾರತ ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಪಾಕಿಸ್ತಾನ ಈ ಹಣವನ್ನು ಬೇರೆ ಉದ್ದೇಶಗಳಿಗಾಗಿ ಬಳಸದಂತೆ ನಿಗಾವಹಿಸಬೇಕೆಂದು ಒತ್ತಾಯಿಸಿತ್ತು. ಹೀಗಾಗಿ ಐಎಂಎಫ್ ಕೂಡ ಕರೊನಾ ಹೋರಾಟಕ್ಕೆ ನೀಡಿದ ಹಣವನ್ನು ಇನ್ಯಾವುದೇ ಉದ್ದೇಶಕ್ಕೆ ಬಳಸುವಂತಿಲ್ಲ. ಸಾಲ ತೀರಿಸಲು ಅಥವಾ ಸೇನೆಗೆ ಉಪಯೋಗಿಸದಂತೆ ನಿರ್ದೇಶಿಸಿತ್ತು. ಆದರೆ, ಯಾವುದರ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿತ್ತೋ ಈಗ ಅದನ್ನೇ ಪಾಕಿಸ್ತಾನ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಪ್ರಸ್ತುತ ಸೇನೆಯ ಬಜೆಟ್ ಮೊತ್ತವನ್ನು ಶೇ.20ರಷ್ಟು ಹೆಚ್ಚಿಸಲು ಪಾಕ್ ಸರ್ಕಾರ ಮುಂದಾಗಿದೆ. ಅದರಲ್ಲೂ ಮುಖ್ಯವಾಗಿ ಪಾಕ್ ಯೋಧರ ಸಂಬಳವನ್ನು ಹೆಚ್ಚಿಸುವ ಸುತ್ತೋಲೆ ಹೊರಡಿಸಿದೆ.
ಯೋಧರ ಸಂಬಳ ಹೆಚ್ಚಿಸಲೇಬೇಕೆಂದು ಪಾಕ್ ಸೇನೆ ಪಟ್ಟು ಹಿಡಿದಿತ್ತು. ಪಾಕ್ ರೂಪಾಯಿಯ ಅಪಮೌಲ್ಯ ಹಾಗೂ ಹೆಚ್ಚುತ್ತಿರುವ ಹಣದುಬ್ಬರ ಕಾರಣದಿಂದಾಗಿ ಯೋಧರ ನೈತಿಕ ಸ್ಥೈರ್ಯವೇ ಕುಸಿದಿದೆ. ಈ ಕಾರಣದಿಂದಾಗಿ ಸಂಬಳ ಹೆಚ್ಚಿಸಬೇಕೆಂದು ತಿಳಿಸಿತ್ತು.
ಇದೀಗ ಕರೊನಾ ವಿರುದ್ಧದ ಹೋರಾಟ ಹೆಸರಲ್ಲಿ ಪಡೆದಿರುವ ನೆರವನ್ನು ಇದಕ್ಕಾಗಿ ಖರ್ಚು ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಅಲ್ಲಿಗೆ ಭಾರತ ವ್ಯಕ್ತಪಡಿಸಿದ್ದ ಆತಂಕ ನಿಜವಾದಂತಾಗಿದೆ. ಇದರ ವಿರುದ್ಧ ಐಎಂಎಫ್ ಯಾವ ಕ್ರಮವನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.