

ನವದೆಹಲಿ: ಶಿಕ್ಷಣ ಸಂಸ್ಥೆಗಳು, ಚಿತ್ರಮಂದಿರ ಹಾಗೂ ಸಾರ್ವಜನಿಕ ಸಭೆ ಸಮಾರಂಭ ಹೊರತುಪಡಿಸಿದರೆ ಇನ್ನುಳಿದ ಚಟುವಟಿಕೆಗಳ ಮೇಲಿದ್ದ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ.
ಆದರೆ, ಕಂಟೇನ್ಮೆಂಟ್ ಝೋನ್ಗಳಲ್ಲಿ ವಿಧಿಸಬಹುದಾದ ನಿರ್ಬಂಧಗಳನ್ನು ರಾಜ್ಯ ಸರ್ಕಾರಗಳೇ ನಿರ್ಧರಿಸಲಿವೆ. ಕರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಮತ್ತೆ ಲಾಕ್ಡೌನ್ ಜಾರಿ ಮಾಡಲಾಗುತ್ತಿದೆ.
ಪಟನಾದಲ್ಲಿ ಈಗಾಗಲೇ ಲಾಕ್ಡೌನ್ ವಿಧಿಸಲಾಗಿದ್ದು, ಇದೀಗ ಪಶ್ಚಿಮ ಬಂಗಾಳ ಸರ್ಕಾರ ಕೂಡ ಕೋಲ್ಕತ್ತ, ಹೌರಾ, ಉತ್ತರ 24 ಪರಗಣ ಜಿಲ್ಲೆಯಲ್ಲಿ ಗುರುವಾರದಿಂದಲೇ (ಜು.9) ಸಂಜೆ 5 ಗಂಟೆಯಿಂದ ಲಾಕ್ಡೌನ್ ಜಾರಿಗೊಳಿಸಲಿದೆ. ಇದು ಏಳು ದಿನಗಳ ಅವಧಿಗೆ ಸೀಮಿತವಾಗಿದ್ದ, ಅಗತ್ಯ ಬಿದ್ದರಷ್ಟೇ ವಿಸ್ತರಿಸಲಾಗುವುದು ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈಗಾಗಲೇ ಲಾಕ್ಡೌನ್ ವಿಧಿಸಲಾಗಿರುವ ಜಿಲ್ಲೆಗಳಲ್ಲಿ ಎಂದಿನಂತೆ ಆದೇಶ ಮುಂದುವರಿಯಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಕಳೆದ 24 ತಾಸುಗಳಲ್ಲಿ 850 ಹೊಸ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದಲ್ಲದೆ, ಅಸ್ಸಾಂ ಗುವಾಹಟಿ, ಚೆನ್ನೈ, ಜಾರ್ಖಂಡ್, ಹರಿಯಾಣ, ಮಹಾರಾಷ್ಟ್ರದ ಹಲವೆಡೆಗಳಲ್ಲಿ ಜು.13ರವರೆಗೆ ಜಾರಿಯಲ್ಲಿದೆ. ಹೀಗಾಗಿ ಕರೊನಾ ಸೋಂಕು ಹೆಚ್ಚಾಗಿತ್ತಿರುವ ಕಾರಣ ಇನ್ನಷ್ಟು ರಾಜ್ಯಗಳು ಲಾಕ್ಡೌನ್ಗೆ ಮೊರೆ ಹೋಗುತ್ತಿವೆ.