ಹೆಣ್ಣನ್ನು ಕೊಲ್ಲುವುದು ತರವೆ?

Killing
Published on
krishnaraja kuthpadi
ಕೃಷ್ಣರಾಜ ಕುತ್ಪಾಡಿ
ದೊಡ್ಡವರು ಹೇಳಿದ್ದನ್ನು ಕಣ್ಮುಚ್ಚಿ ನಡೆಸಬಹುದೇ?

ಕಣ್ಣಿಗೆ ಕಾಣದ ಸಂಗತಿಗಳ ಬಗ್ಗೆ ಹೇಳಿದ ಆದೇಶವಾದರೆ ಒಪ್ಪಬಹುದು. ಸಂದೇಹ ದಿಟವಾದರೆ ಜಿಜ್ಞಾಸೆಯನ್ನೂ ವ್ಯಕ್ತಪಡಿಸಬಹುದು. ಸಾಮಾನ್ಯವಾಗಿ ಪ್ರಶ್ನೆಯನ್ನು ಇಬ್ಬರು ಕೇಳುತ್ತಾರೆ. ದಡ್ಡರು ಮತ್ತೆ ಕೆಲವೊಮ್ಮೆ ಬುದ್ಧಿವಂತರು. ಬುದ್ಧಿವಂತರಲ್ಲಿ ಮತ್ತೆ ಇಬ್ಬರಿದ್ದಾರೆ. ಕೇವಲ ಪ್ರಶ್ನೆ ಕೇಳುವುದಷ್ಟೇ ಉದ್ದೇಶವಾಗಿರುತ್ತೆ. ಪ್ರಶ್ನೆ ಕೇಳುವುದರಲ್ಲಿ ನನಗೆ ತಾಕತ್ತಿದೆ ಅನ್ನುವ ತೋರ್ಪಡಿಕೆ. ಇನ್ನು ಕೆಲವರು ಪ್ರಶ್ನೆ ಕೇಳುವುದು ಉತ್ತರಕ್ಕಾಗಿ. ಉತ್ತರವನ್ನು ತಿಳಿದಿದ್ದರೂ ಕುಹಕಕ್ಕಾಗಿ ಪ್ರಶ್ನಿಸುವ ಅಥವಾ ಉತ್ತರವೇ ಬೇಕಿಲ್ಲವೆಂದು ಪ್ರಶ್ನಿಸುವ ಮಂದಿಗೆ ಎಂದೂ ಉತ್ತರಿಸಿ ಉಪಯೋಗವಿಲ್ಲ. ಜಾಣನಿದ್ದಾನೆಯೆ ಎಂದು ಗುರು ಶಿಷ್ಯನನ್ನು ಪರೀಕ್ಷಿಸುವಂತೆ ಶಿಷ್ಯನು ತನಗೆ ಹೊಂದುವ ಸಂಗತಿಗಳನ್ನು ಹೇಳಬಲ್ಲರೇ? ಎಂಬ ಕುತೂಹಲವನ್ನು ತಣಿಸಿಕೊಳ್ಳಬಹುದು.ಅದಕ್ಕೆ ಸಹಕಾರಿ ಈ ಗುರು-ಶಿಷ್ಯರ ಸಂವಾದ.


ನಹಿ ತೇ ಸ್ತ್ರೀವಧಕೃತೇ ಘೃಣಾಕಾರ್ಯಾ ನರೋತ್ತಮ|
ಚಾತುರ್ವರ್ಣ್ಯ-ತಾರ್ಥಾಯ ಕರ್ತವ್ಯ ರಾಜಸೂನುನಾ||

‘ಈ ಹೆಣ್ಣಿನ ಹತ್ಯೆಗಾಗಿ ಕರುಣೆ ತೋರದಿರು. ಸ್ವ-ಕರ್ತವ್ಯ-ನಿರ್ವಹಣೆ ನಡೆಸುವ ಜನರ ರಕ್ಷಣೆಗಾಗಿ ರಾಜನಾಗಿ ನೀನು ಆಕೆಯನ್ನು ಕೊನೆಗಾಣಿಸಲೇಬೇಕು.’ ಇವಳು ಸಾಮಾನ್ಯಳಲ್ಲ. ಸುಕೇತು ಎನ್ನುವ ಯಕ್ಷನ ಮಗಳು. ನಾಲ್ಮೊಗನಲ್ಲಿ ಮಗಳು ಬೇಕೆಂದು ವರ ಪಡೆದು, ಜೊತೆಗೆ ಆಕೆಯಲ್ಲಿ 10,000 ಆನೆಯ ಬಲವನ್ನು ಕೋರಿ ಪಡೆದಿದ್ದನು. ಪಡೆದ ಬಲದ ಪ್ರಯೋಗ ಮಾಡುವುದು ವ್ಯಕ್ತಿಯ ಸಹಜ ಗುಣ. ಸುಂದ ಉಪಸುಂದರೇ ಮೊದಲಾದ ದುರುಳರಕ್ಕಸರ ಸಹವಾಸದಿಂದ ಋಷಿಗಳ ಬದುಕು ದುರ್ಭರವಾಯಿತು. ಅಗಸ್ತಯ ಶಾಪ ಕೂಡ ಅದಕ್ಕೆ ಇಂಬು ತುಂಬಿತು. ಕೊಳೆತ ಹೆಣವನ್ನೇ ಇಷ್ಟಪಡುವ ಈ ತಾಟಕೆಯ ವಿಕಾರಕ್ಕೆ ಸಮೃದ್ಧವಾಗಿದ್ದ ‘ಮಲದ ಮತ್ತು ಕರೂಶ’ ಎಂಬ ಎರಡು ದೇಶಗಳು ಬಲಿಯಾದವು.

ಏನಾಂ ರಾಘವ ದುರ್ವೃತ್ತಾಂ ಯಕ್ಷೀಂ ಪರಮದಾರುಣಾಂ|
ಗೋಬ್ರಾಹ್ಮಣಹಿತಾರ್ಥಾಯ ಜಹಿ ದುಷ್ಟಪರಾಕ್ರಮಾಂ||

‘ದಾರುಣಳಾದ, ಕೆಟ್ಟ ನಡೆಯ, ಬಲಮತ್ತಳಾದ ಈ ಯಕ್ಷಿಯನ್ನು ಗೋವುಗಳ, ಜ್ಞಾನಿಗಳ ರಕ್ಷಣೆಗಾಗಿ ನೀನು ಕೊಲ್ಲಲೇಬೇಕು.’ ಹೆಣ್ಣನ್ನು ಕೊಲ್ಲಲೇಬಾರದು. ಆದರೆ ಹೆಮ್ಮಾರಿ ಯನ್ನು ಕೊಲ್ಲುವುದರಲ್ಲಿ ಯಾವ ತಪ್ಪೂ ಇಲ್ಲ. ದೇವತೆಗಳು ಈಕೆಯನ್ನು ಎದುರಿಸಲು ಹೆಣಗಾಡಬೇಕಿದೆ. ಹಿಂದಿನ ಒಂದೆರಡು ಉದಾಹರಣೆಗಳನ್ನು ನಿನ್ನ ಮುಂದಿಡುವೆ.

ಶ್ರೂಯತೇ ಹಿ ಪುರಾ ಶಕ್ರೋ ವಿರೋಚನಸುತಾಂ ನೃಪ|
ಪೃಥಿವೀಂ ಹಂತುಮಿಚ್ಛಂತೀ ಮಂಥರಾಮಭ್ಯಸೂದಯತ್||

ಬಹಳ ಹಿಂದೆ ವಿರೋಚನನ ಮಗಳು ಮಂಥರಾ ಎಂಬ ರಕ್ಕಸಿ ಭುವಿಯನ್ನೇ ನುಂಗಹೊರಟಳು. ಆಗ ಇಂದ್ರ ಯುದ್ಧದಲ್ಲಿ ಎದುರಿಸಿ ಆಕೆಯನ್ನು ಸಂಹರಿಸಿದನು.

ವಿಷ್ಣುನಾ ಚ ಪುರಾ ರಾಮ ಭೃಗುಪತ್ನೀ ದೃಢವ್ರತಾ|
ಅನಿಂದ್ರಂ ಲೋಕಮಿಚ್ಛಂತೀ ಕಾವ್ಯಮಾತಾ ನಿಸೂದಿತಾ||

ಹಿಂದೆ ಭೃಗುವಿನ ಮಡದಿಯಾದ, ಶುಕ್ರನ ತಾಯಿ ‘ಜಗಕ್ಕೆ ಒಡೆಯನೇ ಇರಬಾರದು; ಎಲ್ಲವನ್ನೂ ತಾನೇ ತನ್ನ ವಶದಲ್ಲಿ ಇಟ್ಟುಕೊಳ್ಳಬೇಕು’ ಎಂದು ಬಯಸಿ ದಳು. ಆಗ ಸ್ವತಃ ವಿಷ್ಣುವೇ ಆಕೆಯನ್ನು ಸಂಹರಿಸಿದನು. ಹೀಗೆ ಸಂದೇಹಗಳನ್ನೆಲ್ಲ ವಿಶ್ವಾಮಿತ್ರ ಪರಿಹರಿಸಿದ ಬಳಿಕ ರಾಮನು ಸಂಹಾರ ಕಾರ್ಯಕ್ಕೆ ಪಣತೊಟ್ಟನು.

ಸೋಹಂ ಪಿತೃವಚಃ ಶ್ರುತ್ವಾ ಶಾಸನಾದ್ಬ›ಹ್ಮವಾದಿನಾ|
ಗೋಬ್ರಾಹ್ಮಣಹಿತಾರ್ಥಾಯ ದೇಶಸ್ಯಾಸ್ಯ ಸುಖಾಯ ಚ||
ಕರಿಷ್ಯಾಮಿ ನ ಸಂದೇಶ ತಾಟಕಾವಧಮುತ್ತಮಂ||

‘ಗುರುಗಳು ಹೇಳಿದಂತೆ ನಡೆದುಕೋ’ ಎನ್ನುವ ತಂದೆಯ ಮಾತನ್ನು ನಡೆಸಿಕೊಡುವೆ. ಅಂತೆಯೇ ವಿಶ್ವಾಮಿತ್ರರ ಮಾತನ್ನು ಶಿರಸಾ ವಹಿಸುವೆನು. ಗೋವುಗಳ, ಜ್ಞಾನಿಗಳ ರಕ್ಷಣೆಗಾಗಿ ಈ ದೇಶದ ಉಳಿವಿಗಾಗಿ, ಅದರ ಸೌಖ್ಯಕ್ಕಾಗಿ ತಾಟಕೆಯ ವಧವನ್ನು ನಿಶ್ಚಯವಾಗಿ ನಡೆಸುವೆನು. ಸಂದೇಹ ಬೇಡ’. ಹೀಗೆ ಗುರುಗಳಲ್ಲಿ ಸಂದೇಹವನ್ನು ಪರಿಹರಿಸಿಕೊಂಡ ಬಳಿಕ ಅವರ ಶುಶ್ರೂಷೆ ನಡೆಸಿ, ಅನೇಕ ಅಸ್ತ್ರಗಳ ಬಲವನ್ನು ಪಡೆದನು. ಅಷ್ಟೇ ಅಲ್ಲ. ಲೋಕದಲ್ಲಿ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ಮಾತನ್ನು ಕೂಡ ದೃಢಪಡಿಸಿದನು.

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net