ಕಂಸ ಉಗ್ರಸೇನನ ಮಗನೇ?

ವಿಜಯವಾಣಿ
Published on

ವಸುದೇವ ದೇವಕಿಯರು ಪರಮಭಗವದ್ಭಕ್ತರು. ಕಶ್ಯಪ ಹಾಗೂ ಅದಿತಿಯ ಅವತಾರಸಂಭೂತರು. ಅನೇಕ ವರ್ಷ ತಪಸ್ಸು ಮಾಡಿ ಈ ಸೌಭಾಗ್ಯವನ್ನು ಪಡೆದಿದ್ದಾರೆ. ಈ ಅದಿತಿ ಕಶ್ಯಪರು ಇದೇ ಮೊದಲು ದೇವರನ್ನು ಮಗನನ್ನಾಗಿ ಪಡೆದದ್ದಲ್ಲ. ಇದಕ್ಕೂ ಮೊದಲು ಶ್ರೀಕೃಷ್ಣನನ್ನು ಪ್ರಶ್ನಿಗರ್ಭ ಎಂಬ ಹೆಸರಿನಿಂದ ನಂತರ ವಾಮನ ಎಂಬ ಹೆಸರಿನಿಂದ ಮಗನನ್ನಾಗಿ ಪಡೆದಿದ್ದಾರೆ. ಮೂರನೆಯದಾಗಿ ಕೃಷ್ಣ ಎಂಬ ರೂಪದಲ್ಲಿ ಪರಮಾತ್ಮನನ್ನು ಮಗನನ್ನಾಗಿ ಪಡೆಯುತ್ತಿದ್ದಾರೆ.

ಹೀಗೆ ಮೂರು ಬಾರಿ ಯಾರ ಮಗನಾಗಿ ಪರಮಾತ್ಮ ಅವತಾರ ಮಾಡಿದ್ದಾನೆಯೋ ಅಂತಹ ಮಹಾಭಾಗ್ಯವಂತರು ವಸುದೇವ-ದೇವಕಿಯರು. ಶ್ರೀಕೃಷ್ಣ ನಮ್ಮ ಮಗನಲ್ಲ ಅವನು ಸವೋತ್ತಮದೇವತೆ ಎಂದು ಅವನನ್ನು ಆಗಾಗ ಸ್ತೋತ್ರಮಾಡಿದ್ದೂ ಉಂಟು. ಆದರೂ ಇವರಿಗೆ ಆಗಾಗ ಶ್ರೀಕೃಷ್ಣ ನಮ್ಮ ಮಗ ಎಂಬ ಭಾವನೆ ಬರುತ್ತಿತ್ತು. ಆ ಭಾವನೆ ಬಂದಿರುವುದಕ್ಕೋ ಏನೋ ಮತ್ತೆ ಮತ್ತೆ ಅವರಿಗೆ ಬಂಧನ ಆಗಿದೆ. ಬಂಧನದಲ್ಲಿ ಇರಿಸಿದವನು ಕಂಸನಾದರೂ ದೇವರೇ ಎಲ್ಲರಿಗೂ ಪ್ರೇರಕ.

ಆ ಮೂಲಕ ತನ್ನ ಸ್ಮರಣೆ ಆಗುವಂತೆ ಮಾಡಿದ್ದಾನೆ. ಕಂಸನಿಂದ ಬಂಧನಕ್ಕೊಳಗಾದ ವಸುದೇವ ದೇವಕಿಯರನ್ನು ನೋಡಿ ಜನರು ಕಂಸನನ್ನು ಬಯ್ಯುತ್ತಿದ್ದಾರೆ. ಯುದ್ಧ ಮಾಡುವವರು ಶತ್ರುಗಳನ್ನು ಸಂಹಾರ ಮಾಡಲು ಮುಂದಾಗುತ್ತಾರೆ. ನೀನು ನೋಡಿದರೆ ತಂದೆ ಉಗ್ರಸೇನ, ಚಿಕ್ಕಪ್ಪ ದೇವಕ, ತಂಗಿ ದೇವಕಿ, ತಂಗಿಯ ಗಂಡ ವಸುದೇವನನ್ನು ಕೊಲ್ಲಬೇಕು, ಅವರನ್ನು ಬಂಧನದಲ್ಲಿ ಇಡಬೇಕು ಎಂದು ಹೊರಡುತ್ತಿದ್ದೀಯಲ್ಲ ಇದು ನಿನಗೆ ಶೋಭೆತರುವಂತಹದ್ದಲ್ಲ ಎಂದು. ಅದಕ್ಕೆ ಕಂಸ ಹೇಳುತ್ತಾನೆ.

ನಾನು ಈ ಉಗ್ರಸೇನನ ಮಗನೇ ಅಲ್ಲ. ಉಗ್ರಸೇನನ ಮಗ ಎಂದು ಪ್ರಸಿದ್ಧಿ ಇದೆ ನಿಜ. ಆದರೆ ನಾನು ಉಗ್ರಸೇನನ ಹೆಂಡತಿಯಲ್ಲಿ ಜಾರನಿಂದ ಹುಟ್ಟಿದವ. ಹೀಗಿರುವಾಗ ನನಗೆ ಉಗ್ರಸೇನನ ಮೇಲೆ ಏಕೆ ಅಭಿಮಾನ ಇರಬೇಕು. ಅವನ ಸಂಬಂಧವೇ ನನಗೆ ಇಲ್ಲ ಎಂದ ಮೇಲೆ ಬೇರೆಯವರ ಸಂಬಂಧಕ್ಕೆ ಯಾವ ಅರ್ಥವೂ ಇಲ್ಲ. ಇವರೆಲ್ಲರೂ ನನಗೆ ಶತ್ರುಗಳು ಎನ್ನುತ್ತಾನೆ ಕಂಸ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net