

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ವಾರ್ಷಿಕ ಸಾಮಾನ್ಯ ಮಹಾಸಭೆ ಈ ಬಾರಿ ಹಲವು ವಿಶೇಷತೆಗಳಿಗೆ ಕಾರಣವಾಗಿದೆ.
ಕೋವಿಡ್ ಕಾರಣದಿಂದಾಗಿ ಮಹಾಸಭೆಯನ್ನು ವರ್ಚುವಲ್ ಆಗಿ ನಡೆಸಲಾಯಿತು. ರಿಲಯನ್ಸ್ ಸಂಸ್ಥೆ ಎಲ್ಲ ಸಾಲಗಳಿಂದ ಮುಕ್ತವಾಗಿದೆ. ಗೂಗಲ್ ಹಾಗೂ ಜಿಯೋ ನಡುವಿನ ಒಪ್ಪಂದವನ್ನು ಘೋಷಿಸಲಾಯಿತು. ಇದೆಲ್ಲದಕ್ಕಿಂತ ಮುಖ್ಯವಾಗಿ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಪತ್ನಿ ಹಾಗೂ ನೀತಾ ಅಂಬಾನಿ ಮೊದಲ ಬಾರಿಗೆ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಕಂಪನಿಯ ನಿರ್ದೇಶಕಿ ಹಾಗೂ ರಿಲಯನ್ಸ್ ಪ್ರತಿಷ್ಠಾನದ ಅಧ್ಯಕ್ಷೆಯೂ ಆಗಿರುವ ನೀತಾ ಅಂಬಾನಿ ಕೋವಿಡ್ ಸಂಕಷ್ಟ ಕಾಲದಲ್ಲಿ ಪ್ರತಿಷ್ಠಾನವು ಕೈಗೊಂಡಿರುವ ಸಮಾಜಸೇವಾ ಚಟುವಟಿಕೆಗಳ ವಿವರ ನೀಡಿದರು.
ಇನ್ನೊಂದು ಮುಖ್ಯ ವಿಷಯವನ್ನು ಅವರು ಉಲ್ಲೇಖಿಸಿದ್ದಾರೆ. ರಿಲಯನ್ಸ್ ಪ್ರತಿಷ್ಠಾನಕ್ಕೀಗ 10 ವರ್ಷ ಸಂದಿದೆ. ಸಾಮಾನ್ಯ ಜನರ ಜೀವನವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಒಂದು ದಶಕ ಕಳೆದಿದೆ. ಈ ಅವಧಿಯಲ್ಲಿ ದೇಶದ 3.6 ಕೋಟಿ ಜನರನ್ನು ಪ್ರತಿಷ್ಠಾನದ ಮೂಲಕ ತಲುಪಲಾಗಿದೆ ಎಂದು ತಿಳಿಸಿದರು.
ಮುಂದಿನ ದಶಕಕ್ಕೆ ಪ್ರವೇಶಿಸುವ ಈ ಹಂತದಲ್ಲಿ ಇಶಾ ಮತ್ತವರ ತಂಡ ಈ ಚಟುವಟಿಕೆಗಳ ಪ್ರಮಾಣ ಹಾಗೂ ಪರಿಣಾಮವನ್ನು 10 ಪಟ್ಟು ಹೆಚ್ಚು ಮಾಡುವ ಧ್ಯೇಯ ಹೊಂದಿದೆ ಎಂದು ಘೋಷಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತಿಷ್ಠಾನವನ್ನು ಇಶಾ ಮುನ್ನಡೆಸಬಹುದು ಎಂಬುದರ ಮುನ್ಸೂಚನೆ ಇದು ಎಂದೇ ವಿಶ್ಲೇಷಿಸಲಾಗುತ್ತಿದೆ.