ಪಿಯು ವಿದ್ಯಾರ್ಥಿಗಳಿಗೂ ಸಿಗಲಿದೆಯೇ ಉಚಿತ ಲ್ಯಾಪ್​ಟಾಪ್​...?

Laptop
Published on

ಬೆಂಗಳೂರು: 'ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ' ಎನ್ನುವ ಕರೊನಾ ಮಂತ್ರ ಭವಿಷ್ಯದ ಎಲ್ಲ ಸಂಕಷ್ಟದ ಸಮಯಗಳಿಗೂ ಅನ್ವಯವಾಗಲಿದೆ. ಸಾಧ್ಯವಾಗಬಹುದಾದ ಎಲ್ಲ ಕೆಲಸಗಳನ್ನು ಮನೆಯಿಂದಲೇ ಮಾಡಬೇಕಾದುದು ಅನಿವಾರ್ಯವೂ ಆಗಲಿದೆ.

ಶಾಲೆ, ಕಾಲೇಜುಗಳ ಪುನರಾರಂಭವಾಗದ ಹಿನ್ನೆಲೆಯಲ್ಲಿ ಕಲಿಕೆಯಂತೂ ಸದ್ಯ ಆನ್​ಲೈನ್​ನಲ್ಲಿಯೇ ನಡೆಯುತ್ತಿದೆ. ಜತೆಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡ ಆನ್​ಲೈನ್​ ಕಲಿಕೆ ಪ್ರೋತ್ಸಾಹಕ್ಕೆ ಯೋಜನೆ ರೂಪಿಸುತ್ತಿವೆ. ಶಾಲೆಯಲ್ಲಿ ಕಲಿಕೆಯ ಅವಧಿಯನ್ನು ಕಡಿತಗೊಳಿಸಿ ಮಕ್ಕಳು ಮನೆಯಲ್ಲಿರುವಾಗಲೇ ಪಾಠ ಹೇಳುವಂತೆ ತಜ್ಞರ ಸಮಿತಿಯೂ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ಇದೆಲ್ಲದರ ನಡುವೆ, ಇತ್ತೀಚೆಗೆ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆನ್​ಲೈನ್​ ಬೋಧನೆಗೆ ಒತ್ತು ನೀಡುವಂತೆ ತಿಳಿಸಲಾಗಿತ್ತು. ಪರೀಕ್ಷೆಗೂ ಮುನ್ನ ಬಾಕಿ ಪಠ್ಯಕ್ರಮವನ್ನು ಆನ್​ಲೈನ್​ನಲ್ಲಿ ಬೋಧಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ ಪಿ.ಯು ಮಟ್ಟದಿಂದಲೇ ಆನ್​ಲೈನ್​ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಪರಿಶೀಲಿಸುವಂತೆ ತಿಳಿಸಿದ್ದರು. ಹೀಗಾಗಿ ಪಿಯು ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್​ಟಾಪ್​ ವಿತರಣೆಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್​ ನೀಡಲಾಗುತ್ತಿದೆ. ಆರಂಭದಲ್ಲಿ ಎಸ್​ಎಸಿ, ಎಸ್​ಟಿ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗಿದ್ದ ಯೋಜನೆಯನ್ನು ನಂತರ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಯಿತು. ಸದ್ಯ ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 1.09 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ನೀಡಲಾಗಿದೆ.

ಆದರೆ, ಪದವಿ ಪ್ರಥಮ ವರ್ಷದಲ್ಲಿ ನೀಡಲಾಗುವ ಲ್ಯಾಪ್​ಟಾಪ್​ಅನ್ನೇ ಪಿಯು ಮೊದಲ ವರ್ಷದಲ್ಲಿ ನೀಡಿದರೆ ಪದವಿ ಹಂತಕ್ಕೂ ಬಳಸಬಹುದು ಎಂಬ ಸಲಹೆಯನ್ನೂ ಅಧಿಕಾರಿಗಳು ನೀಡಿದ್ದಾರೆ ಎನ್ನಲಾಗಿದೆ.

ಇದಲ್ಲದೇ, ನೆರೆಯ ತಮಿಳುನಾಡು ಸೇರಿ ಕೆಲ ರಾಜ್ಯಗಳಲ್ಲಿ 11, 12 ನೇ ತರಗತಿ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ನೀಡಲಾಗುತ್ತಿದೆ. ಆನ್​ಲೈನ್​ ಶಿಕ್ಷಣದ ಮಹತ್ವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಯೋಜನೆಗೆ ಸಮ್ಮತಿ ನೀಡಬಹುದು ಇಲ್ಲವೇ, ಆರ್ಥಿಕ ಸಂಕಷ್ಟದ ಕಾರಣ ಜನಪ್ರಿಯ ಯೋಜನೆಗಳ ಘೋಷಣೆಯಿಂದ ದೂರವೇ ಉಳಿಯಬಹುದು ಎಂದು ವಿಶ್ಲೇಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net