More

    ಪಿಯು ಮಟ್ಟದಿಂದಲೇ ಆನ್​ಲೈನ್​ ತರಗತಿ ಆರಂಭಿಸಿ; ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚನೆ

    ಬೆಂಗಳೂರು: ಪಿ.ಯು ಮಟ್ಟದಿಂದಲೇ ಆನ್​ಲೈನ್​ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಪರಿಶೀಲಿಸುವಂತೆ ಸಿಎಂ ಯಡಿಯೂರಪ್ಪ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
    ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದ ಅವರು, ಆನ್ ಲೈನ್ ತರಗತಿಗಳು ಸಾಮಾನ್ಯ ತರಗತಿಗಳಿಗೆ ಹೋಲಿಸಿದರೆ, ಕಡಿಮೆ ವೆಚ್ಚದ್ದಾಗಿದ್ದು, ಈ ವ್ಯವಸ್ಥೆಯನ್ನು ಪಿ.ಯು ಮಟ್ಟದಿಂದಲೇ ಆರಂಭಿಸಲು ಕ್ರಮಕೈಗೊಳ್ಳುವಂತೆ ಹೇಳಿದರು.

    ಕೋವಿಡ್ 19 ಹಿನ್ನೆಲೆಯಲ್ಲಿ ಆನ್ ಲೈನ್ ತರಗತಿಗಳ ಮೂಲಕ ಪಠ್ಯಕ್ರಮವನ್ನು ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಯಾವುದೇ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕೆಂದು ತಿಳಿಸಿದರು. ಲಾಕಡೌನ್ ಪೂರ್ವದಲ್ಲಿ ಶೇ.79 ಪಠ್ಯಕ್ರಮ ಪೂರ್ಣಗೊಂಡಿದ್ದು, ಮೇ 31ರೊಳಗೆ ಇನ್ನುಳಿದ ಪಠ್ಯಕ್ರಮವನ್ನು ಆನ್‍ಲೈನ್ ಬೋಧನೆ ಮೂಲಕ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

    ಇದನ್ನೂ ಓದಿ; ‘X Æ A-12’ ನಂಬರ್​ ಪ್ಲೇಟ್​ ಅಲ್ಲ…., ಎಲಾನ್​ ಮಸ್ಕ್​ ಮಗನ ಹೆಸರು

    ವೆಬ್‍ಎಕ್ಸ್, ಸ್ಕೈಪ್ ಹಾಗೂ ಇತರೆ ಆನ್‍ಲೈನ್ ಪ್ಲಾಟ್ ಫಾರಂ ಮೂಲಕ 30 ಸಾವಿರ ಆನ್‍ಲೈನ್ ತರಗತಿಗಳನ್ನು ನಡೆಸಲಾಗಿದೆ. ವಾಟ್ಸ್ ಆಪ್ ಮತ್ತು ಟೆಲಿಗ್ರಾಂ ಮೂಲಕ ಶೇ.85 ವಿದ್ಯಾಥಿಗಳಿಗೆ ಇ-ನೋಟ್ಸ್, ಪಿಪಿಟಿ ಹಾಗೂ ಹಳೆಯ ಪ್ರಶ್ನೆ ಪತ್ರಿಕೆಗಳ ವಿತರಣೆ ಮಾಡಲಾಗಿದೆ. ಜ್ಞಾನನಿಧಿ ಯು-ಟ್ಯೂಬ್ ಚಾನೆಲ್ ಮೂಲಕ 65 ವಿಷಯಗಳ 7,074 ಬೋಧನಾ ವಿಡಿಯೋ ಅಪ್‍ಲೋಡ್ ಮಾಡಲಾಗಿದ್ದು, 5 ಲಕ್ಷ ಬಾರಿ ವೀಕ್ಷಣೆಯಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

    ಗೆಟ್ ಸಿಇಟಿ ಗೋ ಮೂಲಕ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳನ್ನು ತಲುಪಲಾಗಿದ್ದು, 13, 600 ವಿದ್ಯಾರ್ಥಿಗಳು ಯೂಟ್ಯೂಬ್ ಚಂದಾದಾರರಾಗಿದ್ದಾರೆ. 90 ಸಾವಿರ ಲಾಗಿನ್ ಸೃಜನೆ ಆಗಿದೆ. ಸದರಿ ಪೋರ್ಟಲ್‍ಗೆ ನಾಲ್ಕು ಸ್ಟಾರ್​ಗಳು ದೊರೆತಿದ್ದು, ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. 10 ಸಾವಿರಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದರು.

    ಇದನ್ನೂ ಓದಿ; ಸಾಮೂಹಿಕ ಪ್ರಾರ್ಥನೆ ಬಂದ್​, ಪಾಲಕರಿಗೂ ನಿರ್ಬಂಧ, ಮನೆಯೂಟ ಕಡ್ಡಾಯ… ಶಾಲಾರಂಭಕ್ಕೆ ಹೀಗಿರಲಿದೆಯೇ ಮಾರ್ಗಸೂಚಿ? 

    ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಲ್ಯಾಪ್ ಟಾಪ್ ವಿತರಿಸಲಾಗಿರುವ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕಲಿಕೆ ಅನುಷ್ಠಾನಕ್ಕೆ ಬರಲಿದೆ. ಕೋವಿಡ್-19 ಕಾಲಮಾನದಲ್ಲಿ ಡಿಜಿಟಲ್ ಕಲಿಕೆಗೆ ಹೆಚ್ಚಿನ ಮಹತ್ವ ಒದಗಿಸಲಾಗಿದ್ದು, ಮೈತ್ರಿ ಸಹಾಯವಾಣಿ ಪೋರ್ಟಲ್​ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಪ್ರಯೋಜನಕಾರಿಯಾಗಿದೆ. ಹನ್ನೊಂದು ಕೋಟಿ ರೂ. ಗಳ ವೆಚ್ಚದಲ್ಲಿ ವಿಶ್ವವಿದ್ಯಾಲಯ ಮತ್ತು ಕಾಲೇಜು ಸಮಗ್ರ ನಿರ್ವಹಣಾ ವ್ಯವಸ್ಥೆಯನ್ನು ಇ-ಆಡಳಿತ ಇಲಾಖೆಯ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದರು.

    ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಸಲಹೆಗಾರ ಎಂ. ಲಕ್ಷ್ಮೀನಾರಾಯಣ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಉಪಸ್ಥಿತರಿದ್ದರು.

    ಚಿಕ್ಕವರಿಗಿಲ್ಲ ಇನ್ನೂ ಮೂರು ತಿಂಗಳು ಶಾಲೆ, ದೊಡ್ಡವರಿಗೆ ಪಾಳಿ ಪದ್ಧತಿ; ಕೇಂದ್ರ ಸಿದ್ಧಪಡಿಸುತ್ತಿದೆ ಪುನರಾರಂಭದ ಮಾರ್ಗಸೂಚಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts