

Iran: ಇಸ್ರೇಲ್-ಇರಾನ್ ನಡುವಿನ ಸಂಘರ್ಷದ ಕಿಚ್ಚನ್ನು ಹೆಚ್ಚಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎರಡೂ ದೇಶಗಳ ನಡುವೆ ಕದನ ವಿರಾಮ ತರುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದು ಅಚ್ಚರಿ ಬೆಳವಣಿಗೆ. ಇರಾನ್ ಮತ್ತು ಇಸ್ರೇಲ್ ಶಾಂತಿಯತ್ತ ಸಾಗುತ್ತಿದ್ದಂತೆ ನಾಲಿಗೆ ಹರಿಬಿಟ್ಟ ಟ್ರಂಪ್, ಇರಾನ್‌ನ ಸುಪ್ರೀಂ ನಾಯಕ ಖಮೇನಿಯನ್ನು ಅತ್ಯಂತ ಕೆಟ್ಟ ಸಾವಿನಿಂದ ಬಚಾವ್ ಮಾಡಿದ್ದು ನಾವು ಎಂದರು. ಈ ಹೇಳಿಕೆಗೆ ಇದೀಗ ಇರಾನ್ ಖಡಕ್ ತಿರುಗೇಟು ಕೊಟ್ಟಿದೆ.
ಇರಾನ್-ಇಸ್ರೇಲ್ ಕದನ ವಿರಾಮದ ಬೆನ್ನಲ್ಲೇ ಹಲವಾರು ಹೇಳಿಕೆಗಳನ್ನು ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇದೀಗ ಇರಾನ್ ಮತ್ತೊಮ್ಮೆ ಎಚ್ಚರಿಕೆ ರವಾನಿಸಿದೆ. "ಟ್ರಂಪ್ ನಿಜವಾಗಿಯೂ ತಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಯಸಿದರೆ, ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿ ಬಗ್ಗೆ ಅಗೌರವ ಮತ್ತು ಸ್ವೀಕಾರಾರ್ಹವಲ್ಲದ ಹೇಳಿಕೆಗಳನ್ನು ನೀಡಬಾರದು" ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಗುಡುಗಿದ್ದಾರೆ.
ಟ್ರಂಪ್ ಹೇಳಿಕೆಯನ್ನು ಖಂಡಿಸಿ, ತೀವ್ರ ವಾಗ್ದಾಳಿ ನಡೆಸಿರುವ ಅಬ್ಬಾಸ್, "ಟ್ರಂಪ್ ಪ್ರಾಮಾಣಿಕವಾಗಿರಲು ಬಯಸಿದರೆ, ಖಮೇನಿ ಬಗ್ಗೆ ಅಗೌರವದಿಂದ ಮಾತನಾಡಬಾರದು. ಟ್ರಂಪ್ ತಮ್ಮ ಇಂಥಾ ಹೇಳಿಕೆಗಳಿಂದ ಖಮೇನಿ ಅವರ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ನೋಯಿಸುತ್ತಿದ್ದಾರೆ. ಇರಾನ್ ಹಾರಿಸಿದ ಕ್ಷಿಪಣಿಗಳನ್ನು ಎದುರಿಸಲು ಆಗದ ಇಸ್ರೇಲ್, ತನ್ನ ತಂದೆ (ಅಮೆರಿಕ) ಬಳಿ ಸಹಾಯಕ್ಕೆ ಓಡಿ ಹೋಯಿತು" ಎಂದು ಅಬ್ಬಾಸ್ ಟೀಕಿಸಿ ಮಾತನಾಡಿದ್ದಾರೆ,(ಏಜೆನ್ಸೀಸ್).