ಅದಕ್ಕೆ ಓಕೆ, ಇದಕ್ಕೆ ಏಕೆ? CBFCಗೆ ಕೇರಳ ಹೈಕೋರ್ಟ್​ ತರಾಟೆ; ವಿವಾದದ ಸುಳಿಯಲ್ಲಿ ನಟಿಯ 'JSK' ಸಿನಿಮಾ

ವಿಜಯವಾಣಿ - 2025-06-28T091151.381
Published on

JSK Issue: ತೆಲುಗು ನಟಿ ಅನುಪಮಾ ಪರಮೇಶ್ವರನ್​ ಅಭಿನಯದ ಬಹುನಿರೀಕ್ಷಿತ 'ಜಾನಕಿ ವರ್ಸಸ್​ ಸ್ಟೇಟ್​ ಆಫ್​ ಕೇರಳ' ಚಿತ್ರ ಇದೀಗ ವಿವಾದ ಅಲೆಯಲ್ಲಿ ಸಿಲುಕಿದೆ. ಸಿನಿಮಾದ ಬಹುತೇಕ ಕೆಲಸಗಳ ಪೂರ್ಣಗೊಂಡಿದ್ದೇ ಆದರೂ ಬಿಡುಗಡೆಗೆ ಬೇಕಾದ ಅನುಮತಿಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ನಿರಾಕರಿಸಿದೆ. ಇದೇ ಚಿತ್ರತಂಡ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಚಾರ ಸದ್ಯ ಕೇರಳ ಕೋರ್ಟ್​ ಮೆಟ್ಟಿಲೇರಿದ್ದು, ಚಿತ್ರದ ರಿಲೀಸ್​ಗಾಗಿ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ.

'ಜಾನಕಿ'ಯೇ ವಿವಾದ

ಕೇರಳದ ಚಲನಚಿತ್ರ ನಿರ್ಮಾಪಕರ ಒಕ್ಕೂಟವಾದ ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಕೇರಳ (FEFKA), ಸೋಮವಾರ (ಜೂ.30) ತಿರುವನಂತಪುರಂನಲ್ಲಿರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಇದಕ್ಕೆ ಕಾರಣ ಜೆಸ್​ಕೆ: ಜಾನಕಿ ವರ್ಸಸ್​ ಸ್ಟೇಟ್ ಆಫ್ ಕೇರಳ ಚಿತ್ರದ ಶೀರ್ಷಿಕೆಯಲ್ಲಿರುವ ಜಾನಕಿ ಹೆಸರು. ಚಿತ್ರದಲ್ಲಿ ಹಿಂದೂ ದೇವತೆ ಸೀತೆಯನ್ನು ಉಲ್ಲೇಖಿಸುವ ಪಾತ್ರ ಜಾನಕಿಯ ಹೆಸರನ್ನು ಬದಲಾಯಿಸಬೇಕೆಂದು ಸಿಬಿಎಫ್‌ಸಿ ಒತ್ತಾಯಿಸಿದೆ. ಆದ್ರೆ, ಇದಕ್ಕೆ ಚಿತ್ರತಂಡ ಸುತಾರಾಮ್ ಒಪ್ಪಿಗೆ ನೀಡಿಲ್ಲ.

"ಈ ವಿಷಯವನ್ನು ಸಾರ್ವಜನಿಕರಲ್ಲಿ ಚರ್ಚಿಸಬೇಕು ಎಂಬ ಕಾರಣಕ್ಕಾಗಿ ನಾವು ಪ್ರತಿಭಟಿಸಲು ನಿರ್ಧರಿಸಿದ್ದೇವೆ. ಸೀತಾ ಹೆಸರಿನಲ್ಲಿ ಈ ಹಿಂದೆ ಹಲವಾರು ಚಿತ್ರಗಳು ತೆರೆಗೆ ಬಂದಿವೆ. ಅಂದು ಉಂಟಾಗಾದ ಸಮಸ್ಯೆಗಳು ಇಂದ್ಯಾಕೆ? ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸಲಾಗಿದೆ. ಈ ಸಮಸ್ಯೆ ಕೇವಲ ಉದ್ಯಮದ ಮೇಲೆ ಮಾತ್ರವಲ್ಲ, ಇಡೀ ಸಮಾಜದ ಮೇಲೆಯೂ ಪರಿಣಾಮ ಬೀರುತ್ತದೆ. ನಮ್ಮಲ್ಲಿ 'ಸೀತಾ ಕಲ್ಯಾಣಂ', 'ಪಟಾಲಂ ಜಾನಕಿ' ಮುಂತಾದ ಚಲನಚಿತ್ರಗಳಿವೆ. ಈಗ ಅದು ಹೇಗೆ ಸಮಸ್ಯೆ ಆಗಿ ಪರಿಣಮಿಸಿದೆ?" ಎಂದು FEFKA ನಿರ್ದೇಶಕರ ಸಂಘದ ಅಧ್ಯಕ್ಷ ರಂಜಿ ಪಣಿಕರ್ ಹೇಳಿದ್ದಾರೆ.

ಹೈಕೋರ್ಟ್ ತರಾಟೆ

ಈ ಪ್ರಕರಣದ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್​ ಸಿಬಿಎಫ್​ಸಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು. "ಈ ಹಿಂದೆ ರಾಮ-ಸೀತಾ ಹೆಸರಿನಲ್ಲಿ ಬಂದಿರುವ ಚಿತ್ರಗಳಿಗೆ ಇಲ್ಲದ ಅಡ್ಡಿ ಈಗ್ಯಾಕೆ? ರಾಮ್​ ಲಖನ್​ ಟೈಟಲ್​ ಓಕೆ, ಆದರೆ ಜಾನಕಿ ಯಾಕೆ? ನಮ್ಮಲ್ಲಿ 'ಸೀತಾ ಔರ್ ಗೀತಾ' ಎಂಬ ಚಿತ್ರವಿದೆ. ಜಾನಕಿ ಸೀತಾ. ಏನೂ ಆಗಲಿಲ್ಲ. ಯಾವುದೇ ಸಮಸ್ಯೆ ಇಲ್ಲ. ಯಾರಿಗೂ ಯಾವುದೇ ದೂರು ಇಲ್ಲ. ನಮ್ಮಲ್ಲಿ ರಾಮ್ ಲಖನ್ ಎಂಬ ಚಿತ್ರವಿದೆ. ಎಲ್ಲಿಯೂ ಸಮಸ್ಯೆ ಆಗದಿದ್ದು, ಈಗ ಏಕೆ? ಜಾನಕಿಗೆ ದೂರು ಏಕೆ ಬಂತು?"ಎಂದು ನ್ಯಾಯಾಧೀಶರು ಸಿಬಿಎಫ್‌ಸಿ ಪ್ರತಿನಿಧಿಗೆ ಪ್ರಶ್ನಿಸಿದರು. ಇದನ್ನೂ ಓದಿ: ನೀಲಿ ಇಂಕ್​ನಲ್ಲಿ ಆಟೋಗ್ರಾಫ್ ಹಾಕಲ್ಲ ಟಾಪ್​​ ಸೆಲೆಬ್ರಿಟಿಗಳು! ಇದರ ಹಿಂದಿರುವ ಕಾರಣ ತಿಳಿದ್ರೆ ಹುಬ್ಬೇರುವುದು ಖಚಿತ | Blue Ink

ಜೂನ್​ 27ಕ್ಕೆ ರಿಲೀಸ್​

'ಜಾನಕಿ v/s ಸ್ಟೇಟ್ ಆಫ್ ಕೇರಳ' ಚಿತ್ರವು ಯು/ಎ 13+ ಪ್ರಮಾಣಪತ್ರವನ್ನು ಪಡೆದು ಇದೇ ಜೂನ್ 27ರಂದು ಬಿಡುಗಡೆಯಾಗಲು ಸಿದ್ಧವಾಗಿತ್ತು. ಚಿತ್ರದ ಶೀರ್ಷಿಕೆಯಲ್ಲಿನ ಸಮಸ್ಯೆಗಳನ್ನು ಉಲ್ಲೇಖಿಸಿ ಮಂಡಳಿಯು ಪ್ರದರ್ಶನ ಅನುಮತಿಯನ್ನು ನಿರಾಕರಿಸಿದ್ದರಿಂದ ಇದೀಗ ಬಿಡುಗಡೆ ವಿಳಂಬವಾಗಿದೆ. ಸಿಬಿಎಫ್​ಸಿ ನಡೆಯಿಂದ ಬೇಸತ್ತ ಚಿತ್ರದ ನಿರ್ಮಾಪಕ ಫಣೀಂದ್ರ ಕುಮಾರ್ ಮತ್ತು ನಿರ್ದೇಶಕ ಪ್ರವೀಣ್ ನಾರಾಯಣನ್, ವಿಚಾರವನ್ನು ಹೈಕೋರ್ಟ್​ಗೆ ತಲುಪಿಸಿದ್ದಾರೆ.

ಸಿಬಿಎಫ್​ಸಿ ಒತ್ತಾಯಕ್ಕೆ ಕಿಡಿಕಾರಿರುವ ಚಿತ್ರತಂಡ ಮತ್ತು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (AMMA) ಹಾಗೂ ಕೇರಳ ಚಲನಚಿತ್ರ ನಿರ್ಮಾಪಕರ ಸಂಘ (KFPA) ಸೇರಿದಂತೆ ಇತರ ಚಲನಚಿತ್ರ ಸಂಸ್ಥೆಗಳು ಸೋಮವಾರ ಸಿಬಿಎಫ್​ಸಿ ಕಚೇರಿ ಎದುರು ನಡೆಸಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲಿವೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net