ಇರಾನ್ ನಿರ್ಬಂಧ ಇನ್ನಷ್ಟು ಕಠಿಣ

iran may
Published on

ವಾಷಿಂಗ್ಟನ್: ಇರಾನ್ ಅಣ್ವಸ್ತ್ರ ಒಪ್ಪಂದಕ್ಕೆ ಒಳಪಟ್ಟಿರುವ ದೇಶಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳಿಗೆ ನೀಡಿದ್ದ ವಿನಾಯಿತಿಗಳನ್ನು ತೆಗೆದು ಹಾಕಲು ಅಮೆರಿಕ ನಿರ್ಧರಿಸಿದೆ. ಇದರಿಂದಾಗಿ ಒಪ್ಪಂದ ಮುರಿದು ಬೀಳುವ ಹಂತ ತಲುಪಿದೆ.

ಅಣ್ವಸ್ತ್ರಕ್ಕೆ ಸಂಬಂಧಿಸಿ ಇರಾನ್​ನ ‘ಯುದ್ಧಕೋರ’ ನೀತಿ ಈ ಕ್ರಮಕ್ಕೆ ಕಾರಣ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ದಾರೆ 2015ರ ಒಪ್ಪಂದದ ಪ್ರಕಾರ ಹೇರಲಾಗುವ ನಿರ್ಬಂಧಗಳನ್ನು ತೆರವು ಮಾಡುವಂತೆ ಒತ್ತಡ ಹೇರುವ ಇರಾನ್ ತಂತ್ರಕ್ಕೆ ದೇಶ ಮಣಿಯದು ಎಂದು ಪಾಂಪಿಯೋ ಸ್ಪಷ್ಟಪಡಿಸಿದ್ದಾರೆ. ಇರಾನ್ ಕ್ರಮಗಳು ಸಮರ್ಥನೀಯವಲ್ಲ. ವಿನಾಯತಿಗಳನ್ನು ನವೀಕರಿಸಲಾಗದು ಎಂದಿದ್ದಾರೆ.

ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವಧಿಯಲ್ಲಿ ಮಾಡಿಕೊಳ್ಳಲಾದ ಒಪ್ಪಂದವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಲಪಡಿಸಿದ್ದರು. ಆದರೆ ಟ್ರಂಪ್ ಆಡಳಿತ ಇರಾನ್​ನಲ್ಲಿರುವ ರಷ್ಯಾದ ಕಂಪನಿಗಳಿಗೆ ಕಾರ್ಯಾಚರಿಸಲು ವಿನಾಯತಿ ನೀಡಿತ್ತು. ಈಗ ರಿಯಾಕ್ಟರ್ ಬದಲಾವಣೆಗೆ ನೀಡಲಾಗಿದ್ದ ವಿನಾಯತಿಗಳನ್ನು ಅಮೆರಿಕ ಈಗ ತೆಗೆದುಹಾಕಲಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಕಂಪನಿಗಳು ತಮ್ಮ ಕೆಲಸಗಳನ್ನು 60 ದಿನಗಳೊಳಗೆ ಮುಕ್ತಾಯಗೊಳಿಸುವಂತೆ ಗಡುವು ನೀಡಲಾಗುತ್ತದೆ ಎಂದು ಪಾಂಪಿಯೋ ಹೇಳಿದ್ದಾರೆ.

ನಿರ್ಬಂಧಕ್ಕೆ ಮಸೂದೆ: ಬುಡಕಟ್ಟು ಅಲ್ಪಸಂಖ್ಯಾತ ಉಯ್ಘರ್ ಜನಾಂಗದ ಜನರ ಮೇಲೆ ಚೀನಾ ನಡೆಸುತ್ತಿರುವ ದಬ್ಬಾಳಿಕೆ ವಿರುದ್ಧ ಅಮೆರಿಕ ಬಿಗಿ ನಿಲುವು ತಳೆದಿದ್ದು ಈ ವಿಚಾರದಲ್ಲಿ ಚೀನಾದ ಮೇಲೆ ನಿರ್ಬಂಧ ವಿಧಿಸುವ ಮಸೂದೆಗೆ ಅಮೆರಿಕ ಸಂಸತ್ (ಕಾಂಗ್ರೆಸ್) ಅಂಗೀಕಾರ ನೀಡಿದೆ. ಕ್ಸಿನ್​ಜಿಯಾಂಗ್ ಪ್ರಾಂತ್ಯದಲ್ಲಿ ಉಯ್ಘರ್ ಮತ್ತು ಇತರ ಬುಡಕಟ್ಟು ಜನರ ಸಾಮೂಹಿಕ ಬಂಧನ ಮತ್ತು ಕಣ್ಗಾವಲಿಗೆ ಕಾರಣವಾದ ಚೀನಿ ಅಧಿಕಾರಿಗಳ ಮೇಲೆ ನಿರ್ಬಂಧ ವಿಧಿಸುವ ದ್ವಿಪಕ್ಷೀಯ ಮಸೂದೆಯನ್ನು ಸದನ ಬುಧವಾರ ಅಂಗೀಕರಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net