

ಟೆಹ್ರಾನ್: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಸಂಘರ್ಷ ಮುಂದುವರೆದಿದ್ದು, ಎರಡೂ ದೇಶಗಳಿಂದ ಕ್ಷಿಪಣಿ ದಾಳಿಗಳ ಸುರಿಮಳೆಯೇ ಹರಿದುಬರುತ್ತಿವೆ. ಮೊದಲಿಗೆ ಸರಣಿ ದಾಳಿಗಳನ್ನು ನಡೆಸಿದ ಇಸ್ರೇಲ್ಗೆ ಈಗ ಇರಾನ್ ಪ್ರತೀಕಾರದ ಬಿಸಿಯನ್ನು ಪ್ರತಿದಾಳಿಯ ಮೂಲಕ ತೋರಿಸುತ್ತಿದೆ. ಕ್ಷಿಪಣಿ, ಡೋನ್ ದಾಳಿಗಳ ಸುಳಿಯಲ್ಲಿ ಸಿಲುಕಿ ನೂರಾರು ನಾಗರೀಕರು ಪ್ರಾಣಬಿಟ್ಟರೂ ಎರಡೂ ದೇಶಗಳ ಮಧ್ಯೆ ಭುಗಿಲೆದ್ದಿರುವ ದ್ವೇಷದ ಕಿಚ್ಚು ಸದ್ಯ ಆರುವಂತೆ ಕಾಣುತ್ತಿಲ್ಲ.
ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ, ಇಂದು (17) ಟೆಹ್ರಾನ್ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಮತ್ತು ಭಾರತೀಯ ಮೂಲದ ವ್ಯಕ್ತಿಗಳು ನಗರವನ್ನು ತೊರೆದು ರಾಜಧಾನಿಯ ಹೊರಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ.
ತೀವ್ರಗೊಳ್ಳುತ್ತಿರುವ ಸಂಘರ್ಷದ ಮಧ್ಯೆ ಟೆಹ್ರಾನ್ನಿಂದ ತಕ್ಷಣ ಸ್ಥಳಾಂತರಕ್ಕೆ ಕರೆ ನೀಡಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ ಸ್ವಲ್ಪ ಸಮಯದ ಬಳಿಕ ಈ ಸಲಹೆ ನೀಡಲಾಗಿದೆ.
ಇದಕ್ಕೂ ಮೊದಲು, ಟ್ರಂಪ್ ಟ್ರುತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿ, ಎಲ್ಲರೂ ತಕ್ಷಣ ಟೆಹ್ರಾನ್ನಿಂದ ಸ್ಥಳಾಂತರಗೊಳ್ಳುವಂತೆ ಎಚ್ಚರಿಸಿದ್ದರು. ಮತ್ತು ಇರಾನ್ ಅಮೆರಿಕದೊಂದಿಗೆ ಪರಮಾಣು ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು ಎಂದು ಪುನರುಚ್ಚರಿಸಿದ್ದರು.
ತಮ್ಮ ಸ್ವಂತ ಸಂಪನ್ಮೂಲಗಳನ್ನು ಬಳಸಿಕೊಂಡು ಟೆಹ್ರಾನ್ನಿಂದ ಹೊರಹೋಗಬಹುದಾದ ಎಲ್ಲಾ ಭಾರತೀಯ ಪ್ರಜೆಗಳು ಮತ್ತು ಭಾರತೀಯ ಮೂಲದ ವ್ಯಕ್ತಿಗಳು ನಗರದ ಹೊರಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ.
ಟೆಹ್ರಾನ್ನಲ್ಲಿರುವ ಮತ್ತು ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿಲ್ಲದ ಎಲ್ಲಾ ಭಾರತೀಯ ಪ್ರಜೆಗಳು ತಕ್ಷಣ ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಅವರ ಸ್ಥಳ ಮತ್ತು ಸಂಪರ್ಕ ಸಂಖ್ಯೆಗಳನ್ನು ಒದಗಿಸುವಂತೆ ವಿನಂತಿಸಲಾಗಿದೆ.
ವಿದೇಶಾಂಗ ಸಚಿವಾಲಯ (MEA) ಇಂದು ನವದೆಹಲಿಯಲ್ಲಿ 24x7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಹೆಚ್ಚುವರಿಯಾಗಿ, ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಪ್ರದೇಶದ ಭಾರತೀಯ ಪ್ರಜೆಗಳಿಗೆ ಸಹಾಯ ಮಾಡಲು ತುರ್ತು ಸಹಾಯವಾಣಿಯನ್ನು ಸಕ್ರಿಯಗೊಳಿಸಿದೆ.
(ಏಜೆನ್ಸೀಸ್)