ಪ್ರಧಾನಿ ಮೋದಿಗೆ ಪುಷ್ಪಾರ್ಚನೆ ಮಾಡಿದ ಇಕ್ಬಾಲ್​ ಅನ್ಸಾರಿ: ಬಾಬ್ರಿ ಮಸೀದಿ ರಾಮ ಮಂದಿರ ಪ್ರಕರಣದ ಈ ವ್ಯಕ್ತಿ ಯಾರು ಗೊತ್ತೆ?

ram-2-1
Published on

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣದವರೆಗೆ ರೋಡ್ ಶೋ ನಡೆಸಿದರು, ಪ್ರಧಾನಿಯರನ್ನು ಸ್ವಾಗತಿಸಲು ರಸ್ತೆಯ ಇಕ್ಕೆಲಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಅವರಲ್ಲಿ ಒಬ್ಬರು ಇಕ್ಬಾಲ್ ಅನ್ಸಾರಿ,

ಇಷ್ಟೊಂದು ಜನರ ನಡುವೆ ಅನ್ಸಾರಿ ಅವರದ್ದು ಏನು ವಿಶೇಷ ಅಂತಿರಾ?

ಇವರು ಬಾಬರಿ ಮಸೀದಿ-ರಾಮ ಮಂದಿರ ಭೂ ವಿವಾದ ಪ್ರಕರಣದಲ್ಲಿ ದಾವೆದಾರರಾಗಿದ್ದರು. ಹೀಗಾಗಿಯೇ , ಮುಸ್ಲಿಂ ಸಮುದಾಯದ ಹಲವಾರು ಜನರ ಜತೆಗೂಡಿ ಪ್ರಧಾನಿಯವರ ಮೇಲೆ ಪುಷ್ಪವೃಷ್ಟಿ ಮಾಡಿದ್ದು ಗಮನ ಸೆಳೆದಿದೆ.

ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಇಕ್ಬಾಲ್ ಅನ್ಸಾರಿ ಅವರು, ಅಯೋಧ್ಯೆಗೆ ಭೇಟಿ ನೀಡುವವರು ಯಾರೇ ಆಗಿದ್ದರೂ ಅವರು ತಮ್ಮ ಅತಿಥಿಗಳು ಎಂದು ಹೇಳಿದರು. ಅವರಿಗೆ ನಮಸ್ಕರಿಸುವುದು ಮತ್ತು ಸಹಾಯ ಮಾಡುವುದು ನಮ್ಮ ಧರ್ಮ ಮತ್ತು ಸಂಪ್ರದಾಯವಾಗಿದೆ. ನಮ್ಮ ರಾಷ್ಟ್ರದ ಪ್ರಧಾನಿ ಆಗಮಿಸಿದ್ದಾರೆ.ನಾವು ಅವರಿಗೆ ಪುಷ್ಪವೃಷ್ಟಿ ಮಾಡಿದೆವು ಎಂದು ಹೇಳಿದರು.

ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಇತರರು ಕೂಡ ಸೇರಿದ್ದರು ಎಂದು ಅವರು ಹೇಳಿದರು.

ನರೇಂದ್ರ ಮೋದಿ ದೇಶದ ಪ್ರತಿಯೊಬ್ಬರ ಪ್ರಧಾನಿಯಾಗಿದ್ದು, ಅವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.

ಒಮ್ಮೆ ಅಯೋಧ್ಯೆಯು ಒಂದು ಸಣ್ಣ ರೈಲು ನಿಲ್ದಾಣವನ್ನು ಹೊಂದಿದ್ದು ಅದನ್ನು ನವೀಕರಿಸಲಾಗಿದೆ. ಈಗ ವಿಮಾನ ನಿಲ್ದಾಣವಿದೆ. ಆದರೆ, ಇದು ಮೊದಲು ಇರಲಿಲ್ಲ ಎಂದು ಹೇಳಿದರು.

2023 ರ ಜನವರಿ 22 ರಂದು ರಾಮ್ ಲಲ್ಲಾ ಅವರ ಮಹಾಮಸ್ತಕಾಭಿಷೇಕ ಸಮಾರಂಭದ ಭಾಗವಾಗಲು ತಾವು ಖಂಡಿತವಾಗಿಯೂ ಬಯಸುವುದಾಗಿ ಅನ್ಸಾರಿ ಹೇಳಿದರು. "ಈ ಸಮಾರಂಭಕ್ಕೆ ಜನರನ್ನು ಆಹ್ವಾನಿಸಲಾಗುತ್ತಿದ್ದು, ನನಗೆ ಆಹ್ವಾನ ನೀಡಿದರೆ ನಾನು ಹಾಜರಾಗುತ್ತೇನೆ" ಎಂದು ಹೇಳಿದರು.

ದೇಶದ ಪ್ರತಿಯೊಬ್ಬರು ಅಯೋಧ್ಯೆಯ ಮಾದರಿಯನ್ನು ಅನುಸರಿಸಬೇಕು. ನಾವೆಲ್ಲರೂ ಒಟ್ಟಿಗೆ ವಾಸಿಸುತ್ತೇವೆ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುತ್ತೇವೆ. ಪ್ರಸ್ತುತ ಪ್ರಧಾನಿಯವರು ಇಲ್ಲಿರುವುದು ಅಯೋಧ್ಯೆಯ ಜನತೆಗೆ ಹೆಮ್ಮೆಯ ಸಂಗತಿ ಎಂದರು.

ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇಲ್ಲಿ ಮೊದಲಿನಿಂದಲೂ ಪರಸ್ಪರ ಸಾಮರಸ್ಯವಿದ್ದು, ಯಾರೊಂದಿಗೂ ತಾರತಮ್ಯವಿಲ್ಲ. ದೇವಾಲಯವು ಸಕಾರಾತ್ಮಕ ಭಾವನೆಯನ್ನು ಉತ್ತೇಜಿಸುತ್ತದೆ ಎಂದರು.

ಇಕ್ಬಾಲ್ ಅನ್ಸಾರಿ ಅವರ ತಂದೆ ಹಾಶಿಮ್ ಅನ್ಸಾರಿ ಅವರು ರಾಮ ಜನ್ಮಭೂಮಿ ವಿವಾದದ ಪ್ರಮುಖ ಫಿರ್ಯಾದಿಯಾಗಿದ್ದರು. ತಮ್ಮ ತಂದೆಯ ಮರಣದ ನಂತರ ಸುಪ್ರೀಂ ಕೋರ್ಟ್‌ನ ಮುಂದೆ ಕಾನೂನು ಹೋರಾಟವನ್ನು ಅನ್ಸಾರಿ ನಡೆಸಿದ್ದರು, ಆದೆರ, ನವೆಂಬರ್ 2019 ರಲ್ಲಿ ಮಹತ್ವದ ತೀರ್ಪಿನಲ್ಲಿ ರಾಮ ಜನ್ಮಭೂಮಿ ಪ್ರದೇಶದ ಮಾಲಿಕತ್ವವನ್ನು ಹಿಂದೂಗಳಿಗೆ ನೀಡಿದ ನ್ಯಾಯಾಲಯದ ತೀರ್ಪನ್ನು ಅವರು ಶ್ಲಾಘಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net