ಐಪಿಎಲ್​ 2023: ಸಿಎಸ್​ಕೆಗೆ ಗೆಲುವು; ಧೋನಿ ಪಡೆ 5ನೇ ಬಾರಿಗೆ ಚಾಂಪಿಯನ್​

CSK
Published on

ಅಹಮದಾಬಾದ್: ಆಲ್​ರೌಂಡರ್​ ರವೀಂದ್ರ ಜಡೇಜಾ (15*ರನ್, 6 ಎಸೆತ, 1 ಬೌಂಡರಿ, 1 ಸಿಕ್ಸರ್ ಹಾಗೂ 38ಕ್ಕೆ 1 ವಿಕೆಟ್) ಕೊನೇ ಓವರ್​ನಲ್ಲಿ ನಡೆಸಿದ ದಿಟ್ಟ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್​​ ಕಿಂಗ್ಸ್​​ ತಂಡ ಐಪಿಎಲ್-16ರಲ್ಲಿ ಚಾಂಪಿಯನ್ ಪಟ್ಟವೇರಿದೆ. ಮಳೆಬಾಧಿತ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು 5 ವಿಕೆಟ್​ಗಳಿಂದ ರೋಚಕ ಗೆಲುವು ದಾಖಲಿಸಿದ ಎಂಎಸ್ ಧೋನಿ ಪಡೆ 5ನೇ ಬಾರಿಗೆ ಪ್ರಶಸ್ತಿ ಗೆದ್ದು ದಾಖಲೆ ಬರೆಯಿತು. ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿ ಅಭಿಯಾನ ಆರಂಭಿಸಿದ್ದ ಗುಜರಾತ್ ಟೈಟಾನ್ಸ್ ತವರಿನಲ್ಲಿ ಮುಗ್ಗರಿಸಿ ರನ್ನರ್ ಅಪ್​ಗೆ ತೃಪ್ತಿಪಟ್ಟಿತು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೀಸಲು ದಿನವಾದ ಸೋಮವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಗುಜರಾತ್ ಟೈಟಾನ್ಸ್ ತಂಡ, ತಮಿಳುನಾಡಿನ ಯುವ ಬ್ಯಾಟರ್ ಸಾಯಿ ಸುದರ್ಶನ್ (96 ರನ್, 47 ಎಸೆತ, 8 ಬೌಂಡರಿ, 6 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪರ್- ಬ್ಯಾಟರ್ ವೃದ್ಧಿಮಾನ್ ಸಾಹ (54 ರನ್, 39 ಎಸೆತ,5 ಬೌಂಡರಿ, 1 ಸಿಕ್ಸರ್) ಅರ್ಧಶತಕ ಸಿಡಿಸಿ ಉತ್ತಮ ಆರಂಭ ಒದಗಿಸಿದ ನೆರವಿನಿಂದ 4 ವಿಕೆಟ್​ಗೆ 214 ರನ್​ಗಳ ಸವಾಲಿನ ಮೊತ್ತ ಕಲೆಹಾಕಿತು. ನಂತರ ಸಿಎಸ್​ಕೆ ಚೇಸಿಂಗ್ ಆರಂಭಿಸಿದಾಗ 3 ಎಸೆತಗಳಲ್ಲಿ 4 ರನ್ ಕಲೆಹಾಕಿದಾಗ ಸುರಿದ ಮಳೆಯಿಂದಾಗಿ ಆಟ ನಿಂತಿತು. 2 ಗಂಟೆಗಳ ಬಳಿಕ ಆಟ ಪುನರಾರಂಭಗೊಂಡಾಗ ಡಕ್ವರ್ತ್-ಲೂಯಿಸ್ ನಿಯಮದನ್ವಯ 15 ಓವರ್​ಗಳಲ್ಲಿ 171 ರನ್​ಗಳ ಪರಿಷ್ಕೃತ ಗುರಿ ನೀಡಲಾಯಿತು. ಇದಕ್ಕೆ ಪ್ರತಿಯಾಗಿ ಸಿಎಸ್​ಕೆ 15 ಓವರ್​ಗಳಲ್ಲಿ 5 ವಿಕೆಟ್​ಗೆ 171 ರನ್ ಕಲೆಹಾಕಿ ಗೆಲುವಿನ ಕೇಕೆ ಹಾಕಿತು.

ಸಿಎಸ್​ಕೆ ಬಿರುಸಿನ ಆರಂಭ: ಮಳೆ ನಂತರ ಸವಾಲಿನ ಮೊತ್ತದ ಚೇಸಿಂಗ್ ನಡೆಸಿದ ಸಿಎಸ್​ಕೆಗೆ ಋತುರಾಜ್ ಗಾಯಕ್ವಾಡ್(26) ಹಾಗೂ ಡೆವೊನ್ ಕಾನ್ ವೇ (47) ಜೋಡಿ ಬಿರುಸಿನ ಆರಂಭ ಒದಗಿಸಿತು. ರಶೀದ್ ಖಾನ್ ಎಸೆದ ಪಂದ್ಯದ 4ನೇ ಓವರ್​ನಲ್ಲಿ 17 ರನ್ ಕಸಿದ ಈ ಜೋಡಿ ಪವರ್​ಪ್ಲೇನಲ್ಲಿ 52 ರನ್ ಕಬಳಿಸಿ ಉತ್ತಮ ಅಡಿಪಾಯ ಒದಗಿಸಿತು. ಋತುರಾಜ್ ಹಾಗೂ ಕಾನ್ ವೇ ಜೋಡಿ ಮೊದಲ ವಿಕೆಟ್​ಗೆ 39 ಎಸೆತಗಳಲ್ಲಿ 74 ರನ್​ಗಳ ಬಿರುಸಿನ ಆರಂಭ ಒದಗಿಸಿತು. ಪಂದ್ಯದ 7ನೇ ಓವರ್ ಎಸೆದ ನೂರ್ ಅಹ್ಮದ್ 4 ಎಸೆತಗಳ ಅಂತರದಲ್ಲಿ ಆರಂಭಿಕರ ವಿಕೆಟ್ ಪಡೆಯುವ ಮೂಲಕ ಸಿಎಸ್​ಕೆಗೆ ಆಘಾತ ನೀಡಿದರು. ಕಾನ್​ವೇ ನಿರ್ಗಮನದ ಬಳಿಕ ಕ್ರೀಸ್​ಗಿಳಿದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ (27) ಸಿಎಸ್​ಕೆ ತಂಡಕ್ಕೆ ಉಪಯುಕ್ತ ರನ್ ಕಲೆಹಾಕಿದರು. ಜೋಶ್ ಲಿಟಲ್ ಎಸೆದ ಇನಿಂಗ್ಸ್ 8ನೇ ಓವರ್​ನಲ್ಲಿ 2 ಸಿಕ್ಸರ್ ಬಾರಿಸಿದರು. ರಹಾನೆ ಹಾಗೂ ಶಿವಂ ದುಬೆ ಜೋಡಿ 3ನೇ ವಿಕೆಟ್​ಗೆ 23 ಎಸೆತಗಳಲ್ಲಿ 39 ರನ್ ಬಾರಿಸಿದರು. 11ನೇ ಓವರ್​ನಲ್ಲಿ ಮೋಹಿತ್ ಶರ್ಮ ಈ ಜೋಡಿಯನ್ನು ಬೇರ್ಪಡಿಸಿ ಗುಜರಾತ್​ಗೆ ಮೇಲುಗೈ ತಂದರು. ನಂತರ ರನ್​ಗಳಿಸಲು ಪರದಾಡುತ್ತಿದ್ದ ಶಿವಂ ದುಬೆ, 12ನೇ ಓವರ್​ನ ಕೊನೇ 2 ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಲಯ ಕಂಡುಕೊಂಡರು. 18 ಎಸೆತಗಳಲ್ಲಿ 38 ರನ್ ಅಗತ್ಯವಿದ್ದಾಗ, 13ನೇ ಓವರ್​ನಲ್ಲಿ 2 ಸಿಕ್ಸರ್, ಬೌಂಡರಿಗಳಿಸಿದ ಅಂಬಟಿ ರಾಯುಡು (19) ಬಿರುಸಿನಾಟ ಬಳಿಕ ಅದೇ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ನಾಯಕ ಧೋನಿ (0) ಎದುರಿಸಿದ ಮೊದಲ ಎಸೆತದಲ್ಲಿ ನಿರಾಸೆ ಮೂಡಿಸಿದರು.

ಜಡೇಜಾ ಗೆಲುವಿನಾಟ

ಮೋಹಿತ್ ಶರ್ಮ ಎಸೆದ ಅಂತಿಮ ಓವರ್​ನಲ್ಲಿ 13 ರನ್ ಅಗತ್ಯವಿದ್ದಾಗ (0,1,1,1,6,4) ಕೊನೇ 2 ಎಸೆತದಲ್ಲಿ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದ ರವೀಂದ್ರ ಜಡೇಜಾ ತವರಿನಲ್ಲಿ ಗೆಲುವಿನ ಹೀರೊ ಆದರು. ಶಿವಂ ದುಬೆ (32* ರನ್, 21 ಎಸೆತ, 2 ಸಿಕ್ಸರ್) ಹಾಗೂ ಜಡೇಜಾ ಜೋಡಿ ಮುರಿಯದ ಆರನೇ ವಿಕೆಟ್​ಗೆ 13 ಎಸೆತಗಳಲ್ಲಿ 22 ರನ್ ಕಲೆಹಾಕಿ ಗೆಲುವು ತಂದುಕೊಟ್ಟಿತು.

ಪಂದ್ಯ 2 ಗಂಟೆ ವಿಳಂಬ

ಸಿಎಸ್​ಕೆ ತಂಡ 215 ರನ್​ಗಳ ಗುರಿ ಬೆನ್ನಟ್ಟಲು ಆರಂಭಿಸಿ 3 ಎಸೆತಗಳನ್ನು ಎದುರಿಸುವಷ್ಟರಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪಂದ್ಯ (10 ಗಂಟೆ) ಸ್ಥಗಿತಗೊಂಡಿತು. ಆಗ ಸಿಎಸ್​ಕೆ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿತ್ತು. ಬಳಿಕ ಮಳೆ ನಿಂತ ಬಳಿಕ ಅಂಗಣ ಹೆಚ್ಚಿನ ತೇವದಿಂದ ಕೂಡಿದ್ದರಿಂದ ಪಂದ್ಯ ಆರಂಭಕ್ಕೆ ಅಂಪೈರ್ ಹಾಗೂ ಮ್ಯಾಚ್ ರೆಫ್ರಿ ವಿಳಂಬ ಮಾಡಿದರು. ಬಳಿಕ 11.30ಕ್ಕೆ ಅಂಗಣವನ್ನು ಪರಿಶೀಲಿಸಿದ ನಂತರ ಅಂತಿಮವಾಗಿ ತಡರಾತ್ರಿ 12.10ಕ್ಕೆ ಪಂದ್ಯವನ್ನು 5 ಓವರ್ ಕಡಿತಗೊಳಿಸಿ,ಸಿಎಸ್​ಕೆಗೆ 15 ಓವರ್​ಗಳಲ್ಲಿ 171 ರನ್​ಗಳ ಗುರಿ ನೀಡಲಾಯಿತು. ಇದರಿಂದಾಗಿ ಪಂದ್ಯ ಸುಮಾರು 2 ಗಂಟೆ ವಿಳಂಬವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net