ಇದೇ ಕಾರಣಕ್ಕೆ ಹಿಂಡನ್​ಬರ್ಗ್​ ಸಂಸ್ಥೆ ಮುಚ್ಚಿಹೋಯಿತು! ಅಚ್ಚರಿ ಮೂಡಿಸುತ್ತಿದೆ ಈ ವರದಿ | Hindenburg Research

ವಿಜಯವಾಣಿ - 2025-01-19T164501.003
Published on

Hindenburg Research: ಈ ಹಿಂದೆ ಅದಾನಿ ಗ್ರೂಪ್ ಆಫ್ ಕಂಪನಿ ವಿರುದ್ಧ ತನ್ನ ಸ್ಫೋಟಕ ವರದಿಗಳ ಮೂಲಕ ಜಾಗತಿಕ ಮಟ್ಟದಲ್ಲಿ ದೊಡ್ಡದಾಗಿ ಸದ್ದು ಮಾಡಿದ್ದ ಅಮೆರಿಕಾ ಮೂಲದ ಹೆಸರಾಂತ ಶಾರ್ಟ್​ ಸೆಲ್ಲರ್​ ಹಿಂಡೆನ್​ಬರ್ಗ್​ ರಿಸರ್ಚ್​, ಇದೀಗ ದಿಢೀರ್​ ಎಂಬಂತೆ ತನ್ನೆಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ. ಇದು ಅನೇಕರಲ್ಲಿ ಹಲವು ರೀತಿಯ ಅಭಿಪ್ರಾಯಗಳನ್ನು ಹುಟ್ಟುಹಾಕಿದ್ದು, ಗೊಂದಲಕ್ಕೆ ಎಡಮಾಡಿಕೊಟ್ಟಿದೆ.

ಭಾರತದ ಉದ್ಯಮಿ ಗೌತಮಿ ಅದಾನಿ ಸಮೂಹ ವಿರುದ್ಧ ಸಾಲು ಸಾಲು ಆರೋಪಗಳನ್ನು ಹೊರಿಸಿದ್ದ ಹಿಂಡೆನ್​ಬರ್ಗ್​ ವರದಿಗಳು, ಅಂದಿನ ಮಟ್ಟಕ್ಕೆ ಜಾಲತಾಣಗಳಲ್ಲಿ ದೊಡ್ಡ ವಿವಾದವನ್ನೇ ಹುಟ್ಟುಹಾಕಿತ್ತು. ಈ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿ, ಅದಾನಿ ಷೇರುಗಳ ಮೇಲೆ ತೀವ್ರ ಪರಿಣಾಮವೂ ಬೀರಿತ್ತು. ಇಂತಹ ಹಿಂಡೆನ್​ಬರ್ಗ್​ ರಿಸರ್ಚ್​ ಇದೀಗ ತನ್ನ ಸಂಸ್ಥೆಯನ್ನು ಮುಚ್ಚುವುದಾಗಿ ಹೇಳಿರುವುದು ಅನೇಕರಲ್ಲಿ ಅನುಮಾನ ಹುಟ್ಟುಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವದಂತಿಗಳು ಕೂಡ ಹರಿದಾಡುತ್ತಿವೆ.

ಈ ಗೊಂದಲಗಳಿಗೆ ಸ್ವತಃ ಹಿಂಡೆನ್​ಬರ್ಗ್ ಸಂಸ್ಥಾಪಕ ನಾಥನ್ ಆಂಡರ್ಸನ್ ಈಗಾಗಲೇ ಸ್ಪಷ್ಟನೆ ನೀಡಿದ್ದೇ ಆದರೂ ಅಸಲಿ ಕಾರಣ ತಡಕಾಡುವ ಪ್ರಯತ್ನಗಳು ಜೋರಾಗಿಯೇ ಇವೆ. ಈ ಬೆನ್ನಲ್ಲೇ ಹೊಸ ವರದಿಯೊಂದು ಹಿಂಡನ್​ಬರ್ಗ್​ ಮುಚ್ಚಿ ಹೋಗಲು ಸಂಸ್ಥೆ ಮಾಡಿಕೊಂಡ ಭದ್ರತಾ ವಂಚನೆ ಪ್ರಕರಣವೇ ಕಾರಣ ಎಂದು ಉಲ್ಲೇಖಿಸಿದೆ. ಮಾರ್ಕೆಟ್ ಫ್ರಾಡ್ಸ್ ಪೋರ್ಟಲ್ ಪ್ರಕಟಿಸಿದ ವರದಿಯ ಪ್ರಕಾರ, ಆಂಡರ್ಸನ್ ನೇತೃತ್ವದ ಹಿಂಡೆನ್​ಬರ್ಗ್​ ರಿಸರ್ಚ್​, ಕೆನಡಾದ ಆನ್ಸನ್ ಫಂಡ್ಸ್ ಜತೆಗೆ ಭದ್ರತಾ ವಂಚನೆಯಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದೆ.

ಮಾರ್ಕೆಟ್ ಫ್ರಾಡ್ಸ್ ಪೋರ್ಟಲ್ ಪ್ರಕಾರ, "ನಾಥನ್​ ಆಂಡರ್ಸನ್ ಮತ್ತು ಆನ್ಸನ್ ಫಂಡ್ಸ್ ನಡುವಿನ ಇಮೇಲ್ ಸಂಭಾಷಣೆಗಳು ಹೊರಬಿದ್ದಿವೆ. ಅವರು ನಿಜವಾಗಿಯೂ ಆನ್ಸನ್‌ಗಾಗಿ ಕೆಲಸ ಮಾಡುತ್ತಿದ್ದರು ಮತ್ತು ಅವರೇನು ಹೇಳ್ತಿದ್ದರೋ ಅದನ್ನೇ ಪ್ರಕಟಿಸಿದ್ದರು. ವರದಿಯಲ್ಲಿ ಏನಿರಬೇಕು ಮತ್ತು ಏನಿರಬಾರದು ಎಂಬುದನ್ನು ಆನ್ಸನ್​ ನಿರ್ಧರಿಸುತ್ತಿದ್ದರು. ಇಲ್ಲಿ ಹಿಂಡೆನ್​ಬರ್ಗ್​ ತನ್ನ ಸಂಪಾದಕೀಯ ನಿಯಂತ್ರಣವನ್ನು ಹೊಂದಿರಲಿಲ್ಲ ಎಂಬುದು ಗಮನಾರ್ಹ. ಏನು ಪ್ರಕಟಿಸಬೇಕೆಂದು ಅವರಿಗೆ ನಿರ್ದೇಶನ ನೀಡಲಾಗುತ್ತಿತ್ತು" ಎಂದು ವೆಬ್‌ಸೈಟ್ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net