

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ (Saif Ali Khan Stabbing Case) ನಡೆಸಿದ ಆರೋಪಿಯನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆರೋಪಿಯನ್ನು ಮುಂಬೈ ಪೊಲೀಸರು ಭಾನುವಾರ(ಜನವರಿ 19)ಮಧ್ಯಾಹ್ನ 1:30ಕ್ಕೆ ಬಾಂದ್ರಾದ ರಜಾ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಜನವರಿ 16ರಂದು ಮುಂಜಾನೆ 2:00 ಗಂಟೆಗೆ ಮುಂಬೈನಲ್ಲಿರುವ ಅವರ ನಿವಾಸದಲ್ಲಿ ಸೈಫ್ ಅಲಿಖಾನ್ ಮೇಲೆ ದಾಳಿ ನಡೆಸಲಾಯಿತು. ನಂತರ ಸೈಫ್ ಅಲಿ ಖಾನ್ ಅವರನ್ನು 3:00 ಗಂಟೆಗೆ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ನಟನ ಸ್ಥಿತಿ ಸ್ಥಿರವಾಗಿದೆ.
ಆರೋಪಿಯು ಬಾಂಗ್ಲಾದೇಶದ ಪ್ರಜೆ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಎಂದು ಪೊಲೀಸರು ಗುರುತಿಸಿದ್ದಾರೆ. ಅವರು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ತನ್ನ ಹೆಸರನ್ನು ಬಿಜೋಯ್ ದಾಸ್ ಎಂದು ಬದಲಾಯಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಆತನನ್ನು ಪಕ್ಕದ ಥಾಣೆ ನಗರದಿಂದ ಬಂಧಿಸಲಾಯಿತು.
ಆರೋಪಿಯನ್ನು ಬಂಧಿಸಿದ ಬಳಿಕ ಆತ ಬಾಂಗ್ಲಾದೇಶದ ಪ್ರಜೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಚಾಕು ಮೂರು ತುಂಡಾಗಿದೆ. ಎರಡು ತುಂಡುಗಳು ಪತ್ತೆಯಾಗಿದ್ದು, ಒಂದನ್ನು ಶೋಧಿಸಲಾಗುತ್ತಿದೆ. ಘಟನೆ ನಡೆದ ಸಮಯದಲ್ಲಿ ಆರೋಪಿ ಅಂದು ಧರಿಸಿದ್ದ ಬಟ್ಟೆಯನ್ನು ಬಚ್ಚಿಟ್ಟಿದ್ದಾನೆ ಎಂದು ತಿಳಿಸಿದರು. ಆರೋಪಿಯನ್ನು 14 ದಿನಗಳ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಲಯವನ್ನು ಕೋರಿದ್ದರು. ಅವರ ವಿರುದ್ಧ ಮಾಡಿರುವ ಆರೋಪ ಸುಳ್ಳು ಎಂದು ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದ್ದಾರೆ. ಬಳಿಕ 5 ದಿನಗಳ ಕಾಲ ಆರೋಪಿಯನ್ನು ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ನೀಡಿದೆ.
ಶಸ್ತ್ರಚಿಕಿತ್ಸೆ ಬಳಿಕ ಲೀಲಾವತಿ ಆಸ್ಪತ್ರೆಯ ವೈದ್ಯರು ಸೈಫ್ ಅಲಿ ಖಾನ್ ದೇಹದಿಂದ ಚಾಕುವಿನ ತುಂಡನ್ನು ತೆಗೆಯಲಾಗಿದೆ. ಇನ್ನು ನಟನಿಗೆ ಅಪಾಯವಿಲ್ಲ ಎಂದು ತಿಳಿಸಿದ್ದಾರೆ. ದಾಳಿಯ ಸಮಯದಲ್ಲಿ ಚಾಕುವಿನ ತುಂಡು ಮುರಿದು ಬೆನ್ನುಹುರಿಯ ಬಳಿ ಇದ್ದ ಅವನ ದೇಹದಲ್ಲಿ ಸಿಲುಕಿಕೊಂಡಿತು ಎಂದು ಹೇಳಲಾಗಿದೆ. ಈ ತುಂಡು ಸುಮಾರು ಎರಡೂವರೆ ಇಂಚು ಉದ್ದವಿತ್ತು ಎನ್ನಲಾಗಿದೆ. 2 ಮಿಲಿಮೀಟರ್‌ನಾದರೂ ಒಳಗೆ ಹೋಗಿದ್ದರೆ ನಟ ಪ್ರಾಣ ಕಳೆದುಕೊಳ್ಳಬಹುದಿತ್ತು ಎಂದು ಹೇಳಿದ್ದರು.(ಏಜೆನ್ಸೀಸ್)