31 ವರ್ಷಗಳಿಂದ ಮೌನವ್ರತ: ಮಂದಿರ ಉದ್ಘಾಟನೆ ಸಮಾರಂಭಕ್ಕೆ ಸರಸ್ವತಿ ದೇವಿಗೆ ಆಹ್ವಾನ

Mouna Vrutha
Published on

ಧನಬಾದ್: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ವಣಕ್ಕಾಗಿ ಬಿಹಾರದ ಧನಬಾದ್​ನ 85 ವರ್ಷದ ವೃದ್ಧೆ ಸರಸ್ವತಿ ದೇವಿ ಕಳೆದ 31 ವರ್ಷಗಳಿಂದ (1992) ಮೌನವ್ರತ ಆಚರಿಸುತ್ತಿದ್ದಾರೆ. ಜನವರಿ 22ರಂದು ಮಂದಿರ ಉದ್ಘಾಟನೆಗೊಂಡ ಬಳಿಕ, ‘ಜೈ ಸಿಯಾರಾಮ’ ಹೇಳಿ, ಅವರು ಮೌನವ್ರತವನ್ನು ಕೊನೆಗೊಳಿಸಲಿದ್ದಾರೆ. ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಇವರಿಗೆ ಆಹ್ವಾನ ಬಂದಿದೆ. ‘ನನ್ನ ಜೀವನ ಧನ್ಯವಾಗಿದೆ. ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರಾಮನ ದರ್ಶನ ಪಡೆಯುವೆ, ಅಲ್ಲಿಗೆ ನನ್ನ ಮೂರು ದಶಕಗಳ ಮೌನ ಮುಗಿಯಲಿದೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ ಸರಸ್ವತಿ ದೇವಿ. 1992ರಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದ ಇವರು ರಾಮ ಜನ್ಮಭೂಮಿ ನ್ಯಾಸ್​ನ ಪ್ರಮುಖರಾದ ಮಹಂತ ನೃತ್ಯಗೋಪಾಲ್ ದಾಸ್ ಅವರನ್ನು ಭೇಟಿಯಾಗಿದ್ದರು. ಅವರಿಂದ ಸಿಕ್ಕ ಪ್ರೇರಣೆಯಿಂದ, ರಾಮ ಮಂದಿರ ನಿರ್ವಣದವರೆಗೆ ಮೌನವ್ರತ ಆಚರಿಸಲು ಸಂಕಲ್ಪಿಸಿದ್ದರು. ಮೌನವ್ರತದಲ್ಲಿರುವಾಗಲೇ ಚಾರ್​ಧಾಮ್ ಯಾತ್ರೆಯನ್ನೂ ಪೂರ್ಣಗೊಳಿಸಿದ್ದಾರೆ.

ವಿವಿಐಪಿಗಳಿಗೆ ಆಮಂತ್ರಣ

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಾಮಮಂದಿರ ಉದ್ಘಾಟನೆ ಆಮಂತ್ರಣ ಪತ್ರಿಕೆ ವಿತರಣೆಯನ್ನು ಚುರುಕುಗೊಳಿಸಿದೆ. ಆಹ್ವಾನಿತರ ಪಟ್ಟಿಯಲ್ಲಿ 7,000ಕ್ಕೂ ಹೆಚ್ಚು ಜನರು ಇದ್ದಾರೆ. ಅವರಲ್ಲಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಬಾಲಿವುಡ್ ಸೂಪರ್​ಸ್ಟಾರ್ ಅಮಿತಾಬ್ ಬಚ್ಚನ್, ಉದ್ಯಮಿಗಳಾದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಇದ್ದಾರೆ. ಇವರೊಂದಿಗೆ ದೇಶಾದ್ಯಂತ ಸುಮಾರು 4,000 ಸಂತರು ಮತ್ತು 50 ವಿದೇಶಿಯರನ್ನು ಆಹ್ವಾನಿಸಲಾಗುವುದು ಎಂದಿದೆ ಟ್ರಸ್ಟ್.

ನ್ಯೂಯಾರ್ಕ್​ನ ಟೈಮ್ಸ್ ಸ್ಕ್ವೇರ್​ ನೇರಪ್ರಸಾರ

ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯುವ ಸಮಾರಂಭದ ನೇರ ಪ್ರಸಾರವನ್ನು ಅಮೆರಿಕದ ನ್ಯೂಯಾರ್ಕ್ ನಗರದ ಐಕಾನಿಕ್ ಟೈಮ್ಸ್ ಸ್ಕೆ ್ವೕರ್​ನಲ್ಲಿ ಪ್ರದರ್ಶಿಸಲು ಅನಿವಾಸಿ ಭಾರತೀಯರು ಸಿದ್ಧತೆ ಮಾಡಿಕೊಂಡಿದ್ದಾರೆ. ಅಮೆರಿಕದ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ.

ಶೃಂಗೇರಿ ಶ್ರೀಗಳ ವಿರುದ್ಧ ಅಪಪ್ರಚಾರ

ಚಿಕ್ಕಮಗಳೂರು: ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರ ಛಾಯಾಚಿತ್ರವನ್ನು ಹಾಕಿ ಶ್ರೀಗಳು ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠಾ ಮಹೋತ್ಸವ ವಿರೋಧಿಸುತ್ತಿದ್ದಾರೆಂಬ ಅರ್ಥ ಬರುವ ರೀತಿಯಲ್ಲಿ ಧರ್ಮದ್ವೇಷಿಗಳು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶ್ರೀಮಠದ ಆಡಳಿತಾಧಿಕಾರಿ ವಿ.ಆರ್.ಗೌರಿಶಂಕರ್ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶೃಂಗೇರಿ ಮಠದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರು ಈ ರೀತಿಯ ಅರ್ಥ ಬರುವ ಯಾವ ಸಂದೇಶವನ್ನೂ ನೀಡಿಲ್ಲ. ಇದೆಲ್ಲವೂ ಧರ್ಮದ್ವೇಷಿಗಳು ಮಾಡಿರುವ ಅಪಪ್ರಚಾರ. ಹೀಗಾಗಿ ಆಸ್ತಿಕ ಮಹಾಜನರು ಯಾವ ಕಾರಣಕ್ಕೂ ಇಂಥ ಅಪಪ್ರಚಾರಗಳಿಗೆ ಬೆಲೆ ಕೊಡಬಾರದು. ಜತೆಗೆ ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ ಅಧಿಕೃತವಾದ ಡಿಡಿಡಿ.ಠ್ಟಜ್ಞಿಜಛ್ಟಿಜಿ.ಛಿಠಿ ವೆಬ್​ಸೈಟ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ವಿಷಯಗಳನ್ನು ಮಾತ್ರವೇ ಪ್ರಮಾಣಿತವೆಂದು ಪರಿಗಣಿಸಬೇಕು ಎಂದು ಕೋರಿದ್ದಾರೆ.

ದಿನಕ್ಕೆ 18 ಗಂಟೆ ದರ್ಶನ ಅವಕಾಶ

ಅಯೋಧ್ಯೆ: ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠೆಯ ಬಳಿಕ ಅಯೋಧ್ಯೆಗೆ ಪ್ರತಿನಿತ್ಯ ಸರಾಸರಿ 2 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ. ದರ್ಶನಕ್ಕೆ ಬಂದ ಭಕ್ತರಿಗೆ ನಿರಾಸೆಯಾಗಬಾರದು ಈ ನಿಟ್ಟಿನಲ್ಲಿ ದರ್ಶನದ ಸಮಯವನ್ನು 18 ಗಂಟೆಗೆ ವಿಸ್ತರಿಸಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಚಿಂತನೆ ನಡೆಸಿದೆ. ಅಲ್ಲದೆ, ಜ.22 ರಂದು ದೇಶದ 5 ಲಕ್ಷಕ್ಕೂ ಅಧಿಕ ಮಂದಿರಗಳಲ್ಲಿ ವಿಶೇಷ ಪೂಜೆ ನಡೆಯಲಿದೆ.

ಹೆಲಿಕಾಪ್ಟರ್ ಸೇವೆ ಪ್ರಾರಂಭ

ಅಯೋಧ್ಯೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಶೀಘ್ರದಲ್ಲೇ ಹೆಲಿಕಾಪ್ಟರ್ ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದು ಉತ್ತರಪ್ರದೇಶದ ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ಸೋಮವಾರ ಹೇಳಿದ್ದಾರೆ.

5 ಸಾವಿರ ಕೋಟಿ ರೂ. ದೇಣಿಗೆ

ಅಯೋಧ್ಯೆ: ಶ್ರೀರಾಮ ಮಂದಿರಕ್ಕೆ ದೇಶ-ವಿದೇಶಗಳಿಂದ ನಿರೀಕ್ಷೆಗೂ ಮೀರಿ ದೇಣಿಗೆ ಹರಿದು ಬಂದಿದ್ದು, ಈವರೆಗೆ 5 ಸಾವಿರ ಕೋಟಿ ರೂ. ಸಂಗ್ರಹವಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಕಾರ, ಮಂದಿರದ ಸಮರ್ಪಣ ನಿಧಿಯ ಖಾತೆಗೆ ಈವರೆಗೆ 3,200 ಕೋಟಿ ರೂ. ಜಮೆ ಆಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಶದ 11 ಕೋಟಿ ಜನರಿಂದ 900 ಕೋಟಿ ರೂ. ದೇಣಿಗೆ ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, 2023 ಡಿಸೆಂಬರ್ ಹೊತ್ತಿಗೆ 5 ಸಾವಿರ ಕೋಟಿ ರೂ.ಗಿಂತಲೂ ಅಧಿಕ ಮೊತ್ತ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ.

ಮೊರಾರಿ ಬಾಪು ಅವರಿಂದ ಅತ್ಯಧಿಕ ದಾನ: ಖ್ಯಾತ ಪ್ರವಚನಕಾರರು ಮತ್ತು ಆಧ್ಯಾತ್ಮಿಕ ಗುರುಗಳಾದ ಮೊರಾರಿ ಬಾಪು ಶ್ರೀರಾಮ ಮಂದಿರಕ್ಕೆ 11.3 ಕೋಟಿ ರೂ. ನೀಡಿದ್ದಾರೆ. ಮತ್ತು ದೇಣಿಗೆಯಲ್ಲಿ ನೀಡಲಾದ ಗರಿಷ್ಠ ಮೊತ್ತ ಇದಾಗಿದೆ. ಇದಲ್ಲದೆ, ಅಮೆರಿಕ, ಕೆನಡಾ, ಬ್ರಿಟನ್​ನಲ್ಲಿ ನೆಲೆಸಿರುವ ಮೊರಾರಿ ಬಾಪು ಅವರ ಅನುಯಾಯಿಗಳು ಪ್ರತ್ಯೇಕವಾಗಿ 8 ಕೋಟಿ ರೂ. ನೀಡಿರುವುದು ವಿಶೇಷ. ಗುಜರಾತಿನ ವಜ್ರದ ವ್ಯಾಪಾರಿ ಗೋವಿಂದಬಾಯಿ ಢೋಲ್ಕಿಯಾ -ಠಿ;11 ಕೋಟಿ ನೀಡಿದ್ದಾರೆ. ಮಹಾರಾಷ್ಟ್ರದ ಸಿಎಂ ಏಕನಾಥ ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆ ಸಹ 11 ಕೋಟಿ ರೂ. ದೇಣಿಗೆ ನೀಡಿದ್ದಾರೆ. 2021 ಜನವರಿ 14ರಂದು ಮಂದಿರ ಟ್ರಸ್ಟ್ ದೇಣಿಗೆ ಅಭಿಯಾನ ಆರಂಭಿಸಿದಾಗ, ಮೊದಲ ದೇಣಿಗೆಯನ್ನು ಆಗಿನ ರಾಷ್ಟ್ರಪತಿ ರಾಮನಾಥ ಕೋವಿಂದ ನೀಡಿದರು. ಅವರು 5 ಲಕ್ಷ ರೂ.ಗಳನ್ನು ಚೆಕ್ ಮೂಲಕ ಪಾವತಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net