ಟಾಟಾ ಗ್ರೂಪ್​ ಕಂಪನಿ ಷೇರು ಖರೀದಿಗೆ ಮುಗಿಬಿದ್ದ ಹೂಡಿಕೆದಾರರು: ಒಂದೇ ದಿನದಲ್ಲಿ 20% ಹೆಚ್ಚಳವಾಗಿ ಅಪ್ಪರ್ ಸರ್ಕ್ಯೂಟ್​ ಹಿಟ್​ ಆಗಲು ಹೀಗಿದೆ ಕಾರಣ…

trf
Published on

ಮುಂಬೈ: ಟಾಟಾ ಕಂಪನಿಯ ಈ ಷೇರು ಖರೀದಿಸಲು ಬುಧವಾರ ಹೂಡಿಕೆದಾರರು ಮುಗಿಬಿದ್ದರು. ಟಾಟಾ ಗ್ರೂಪ್ ಕಂಪನಿಯಾದ ಟಿಆರ್​ಎಫ್ ಲಿಮಿಟೆಡ್​ (TRF Ltd.) ಷೇರುಗಳು ರಾಕೆಟ್ ಆಗಿ ಮಾರ್ಪಟ್ಟವು. ಟಿಆರ್​ಎಫ್​ ಕಂಪನಿಯ ಷೇರುಗಳು ಬುಧವಾರ ಒಂದೇ ದಿನದಲ್ಲಿ 20% ಏರಿಕೆ ಕಂಡು 328.40 ರೂ. ತಲುಪಿದವು. ಈ ಮೂಲಕ ಶೇ. 20 ಅಪ್ಪರ್​ ಸರ್ಕ್ಯೂಟ್​ ಹಿಟ್​ ಆದವು. ಅಂದರೆ, ಷೇರು ವಿನಿಮಯ ಕೇಂದ್ರದ ನಿಯಮದ ಪ್ರಕಾರ ಒಂದೇ ದಿನದಲ್ಲಿ ಶೇಕಡಾ 20ರ ಗರಿಷ್ಠ ಏರಿಕೆ ಮಿತಿಯನ್ನು ತಲುಪಿದವು. ಅಪ್ಪರ್​ ಸರ್ಕ್ಯೂಟ್​ ತಲುಪಿದ ನಂತರ, ಒಂದೇ ದಿನದಲ್ಲಿ ಶೇ. 20ಕ್ಕಿಂತ ಹೆಚ್ಚು ಬೆಲೆ ಏರಿಕೆಗೆ ಅವಕಾಶ ಇರುವುದಿಲ್ಲ. ಮಂಗಳವಾರ ಟಿಆರ್‌ಎಫ್‌ನ ಷೇರುಗಳು 273.70 ರೂ. ಇದ್ದವು.

ಈ ಮೂಲಕ ಕಂಪನಿಯ ಷೇರುಗಳು 52 ವಾರಗಳ ಹೊಸ ಗರಿಷ್ಠ ಮಟ್ಟವನ್ನು ಕೂಡ ತಲುಪಿದವು. TRF ಷೇರುಗಳಲ್ಲಿ ಈ ತೀವ್ರ ಏರಿಕೆಯು ದೊಡ್ಡ ಘೋಷಣೆಯ ನಂತರ ಬಂದಿದೆ. ತನ್ನ ಮಾತೃ ಸಂಸ್ಥೆ ಟಾಟಾ ಸ್ಟೀಲ್ ಜೊತೆಗಿನ ವಿಲೀನವನ್ನು ಟಿಆರ್​ಎಫ್​ ರದ್ದುಗೊಳಿಸಿದೆ. ವ್ಯವಹಾರದಲ್ಲಿನ ಸುಧಾರಣೆಯಿಂದಾಗಿ ಕಂಪನಿಯ ಮಂಡಳಿಯು ವಿಲೀನವನ್ನು ರದ್ದುಗೊಳಿಸಿದೆ.

ಕಂಪನಿಯ ವ್ಯವಹಾರ ಕಾರ್ಯಕ್ಷಮತೆಯಲ್ಲಿ ಸುಧಾರಣೆ ಕಂಡುಬಂದಿದೆ. ಟಾಟಾ ಗ್ರೂಪ್ ಕಂಪನಿಯಾದ ಟಿಆರ್‌ಎಫ್ ಬುಧವಾರದ ಷೇರು ವಿನಿಮಯ ಕೇಂದ್ರಕ್ಕೆ ನೀಡಿರುವ ಹೇಳಿಕೆಯಲ್ಲಿ, ಟಾಟಾ ಸ್ಟೀಲ್‌ನೊಂದಿಗೆ ವಿಲೀನಗೊಳಿಸುವ ಯೋಜನೆಯೊಂದಿಗೆ ಮುಂದುವರಿಯದಿರಲು ನಿರ್ಧರಿಸುವುದಾಗಿ ತಿಳಿಸಿದೆ. ಏಕೆಂದರೆ, ವ್ಯವಹಾರದಲ್ಲಿ ಉತ್ತಮ ಸುಧಾರಣೆ ಕಂಡುಬಂದಿದೆ. ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಕಂಪನಿಯ ಕಾರ್ಯಕ್ಷಮತೆ. ಆರ್ಡರ್ ಪ್ಲೇಸ್‌ಮೆಂಟ್, ಕ್ಯಾಪಿಟಲ್ ಇನ್ಫ್ಯೂಷನ್, ವೆಚ್ಚ ಮತ್ತು ಆಸ್ತಿ ಆಪ್ಟಿಮೈಸೇಶನ್‌ನಲ್ಲಿ ಸ್ವಂತ ಪ್ರಯತ್ನದಿಂದಾಗಿ ಕಾರ್ಯಕ್ಷಮತೆ ಸುಧಾರಿಸಿದೆ ಎಂದು ಟಿಆರ್​ಎಫ್​ ಹೇಳಿದೆ. ಸೆಪ್ಟೆಂಬರ್ 2022 ರಲ್ಲಿ ಟಾಟಾ ಸ್ಟೀಲ್ ಜೊತೆಗೆ ವಿಲೀನ ಒಪ್ಪಂದವನ್ನು ಟಿಆರ್​ಎಫ್​ ಮಾಡಿಕೊಂಡಿತ್ತು. ವಿಲೀನವನ್ನು ಹಿಂಪಡೆಯಲು ಟಾಟಾ ಸ್ಟೀಲ್ ಮಂಡಳಿಯು ತನ್ನ ಅನುಮೋದನೆಯನ್ನು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net