ಎಸ್‌ಐಟಿಯಿಂದ ಇ-ಪ್ರಾಕ್ಯೂರ್‌ಮೆಂಟ್ ಕೇಸ್ ತನಿಖೆ

CID
Published on

ಬೆಂಗಳೂರು: ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯ ವಿಷಯವಾಗಿರುವ ಬಿಟ್ ಕಾಯಿನ್ ಪ್ರಕರಣದ ತನಿಖೆ ಕೈಗೊಂಡಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ಕಾರ್ಯವ್ಯಾಪ್ತಿಯಲ್ಲಿ ವಿಸ್ತರಿಸಿಕೊಂಡಿದೆ.

ಈಗಾಗಲೆ ಕೆಂಪೇಗೌಡನಗರ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಸಾಕ್ಷಿನಾಶದ ಆರೋಪದಡಿ ತನಿಖಾಧಿಕಾರಿಗಳ ವಿರುದ್ಧ ಎಸ್‌ಐಟಿ ಎ್ಐಆರ್ ದಾಖಲಿಸಿದೆ. ಇದರ ಮುಂದುವರಿದ ಭಾಗವಾಗಿ ಎಸ್‌ಐಟಿ ಅಧಿಕಾರಿಗಳು, ಕಾಟನ್‌ಪೇಟೆ ಠಾಣೆಯ ಬಿಟ್‌ಕಾಯಿನ್ ಮತ್ತು ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ ಇ-ಪ್ರಾಕ್ಯೂರ್‌ಮೆಂಟ್‌ಗೆ ಕನ್ನ ಪ್ರಕರಣಗಳ ತನಿಖೆಯನ್ನು ತನ್ನ ತನಿಖಾ ವ್ಯಾಪ್ತಿಗೆ ಸೇರಿಸಿಕೊಂಡಿದೆ.

ಈ ಮೂರು ಪ್ರಕರಣಗಳಲ್ಲಿ ಆರೋಪಿಗಳ ಕೈವಾಡ ಇರುವುದು ಕಂಡು ಬಂದಿದ್ದು, ಕಿಂಗ್‌ಪಿನ್ ಹ್ಯಾಕರ್ ಇರುವುದು ಗೊತ್ತಾಗಿದೆ. ಜಪ್ತಿ ಮಾಡಿರುವ ಎಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್, ಹಾರ್ಡ್‌ಡಿಸ್ಕ್, ಪೆನ್‌ಡ್ರೈವ್ ಇತರ ವಸ್ತುಗಳು ಮೂರು ಕೇಸಿನಲ್ಲೂ ಒಂದೇ ಸಾಕ್ಷ್ಯವಾಗಿವೆ. ಈ ಹಿನ್ನೆಲೆ ಕೆಂಪೇಗೌಡನಗರ, ಕಾಟನ್‌ಪೇಟೆ ಮತ್ತು ಸಿಐಡಿ ಸೈಬರ್ ಕ್ರೈಂನಲ್ಲಿ ದಾಖಲಾಗಿರುವ ಕೇಸ್‌ಗಳ ತನಿಖೆಯನ್ನು ಎಸ್‌ಐಟಿ ಅಧಿಕಾರಿಗಳು ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

2020ರ ನವೆಂಬರ್ 9ರಂದು ವಶಕ್ಕೆ ಪಡೆದಿದ್ದ 2 ಪೆನ್ ಡ್ರೈವ್‌ಗಳನ್ನು ಹಾರ್ಡ್ ಡಿಸ್ಕ್ ಮತ್ತು 1 ಆಪಲ್ ಮ್ಯಾಕ್ಬುಕ್‌ನಲ್ಲಿ ಡಿಜಿಟಲ್ ಸಾಕ್ಷಾೃಧಾರಗಳನ್ನು ತಿರುಚುವ, ಸಾಕ್ಷ್ಯಗಳನ್ನು ನಾಶದ ಪ್ರಯತ್ನ ಮಾಡಿರುವ ಸಂಬಂಧ ಹಿಂದಿನ ತನಿಖಾಧಿಕಾರಿಗಳ ಪ್ರಕರಣದ ದಾಖಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ಎಸ್‌ಐಟಿ ತನಿಖಾಧಿಕಾರಿ ರವಿಶಂಕರ್ ಹೇಳಿಕೆ ಪಡೆಯತ್ತಿದ್ದಾರೆ.

7 ಕೋಟಿ ರೂ. ಕನ್ನ

ಸರ್ಕಾರಿ ಯೋಜನೆಗಳ ಟೆಂಡರ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಅನುಷ್ಠಾನಕ್ಕೆ ತಂದಿರುವ ಇ-ಸಂಗ್ರಹಣ ತಂತ್ರಾಂಶವನ್ನೇ (ಇ-ಪ್ರಕ್ಯೂರ್‌ಮೆಂಟ್) ಹ್ಯಾಕ್ ಮಾಡಿ 2019ರಲ್ಲಿ 7ಕೋಟಿ ರೂ.ಗೆ ಕನ್ನ ಹಾಕಲಾಗಿತ್ತು. ಇದರ ತನಿಖೆ ಕೈಗೊಂಡ ಸಿಐಡಿ ಅಧಿಕಾರಿಗಳು, ಸಂಪೂರ್ಣ ಹಣ ವಶಕ್ಕೆ ಪಡೆಯಲು ಸಾಧ್ಯವಾಗಿರಲಿಲ್ಲ. ಇದೀಗ ಈ ಪ್ರಕರಣದ ತನಿಖೆಯನ್ನು ಎಸ್‌ಐಟಿ ಕೈಗೊಂಡಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net