

ಬೆಂಗಳೂರು: ಕೋವಿಡ್ ಕರಿಛಾಯೆ, ಆರ್ಥಿಕ ಕುಸಿತದ ಅಳುಕಿನ ನಡುವೆಯೇ ರಾಜ್ಯಕ್ಕೆ ನಿರೀಕ್ಷೆಗೂ ಮೀರಿದ ಬಂಡವಾಳ ಹರಿದು ಬರುವ ಮುನ್ಸೂಚನೆ ಸಿಕ್ಕಿದೆ. ಬೆಂಗಳೂರಿನ ಅರಮನೆ ಆವರಣದಲ್ಲಿ ಆಯೋಜಿಸಿರುವ ಇನ್ವೆಸ್ಟ್ ಕರ್ನಾಟಕ-2022 ಜಾಗತಿಕ ಹೂಡಿಕೆದಾರರ ಸಮಾವೇಶದ
ಮೊದಲ ದಿನವಾದ ಬುಧವಾರ ಹೂಡಿಕೆದಾರರು ಅತ್ಯುತ್ಸಾಹ ತೋರಿದ್ದಾರೆ. ದಿಗ್ಗಜ ಉದ್ಯಮಿಗಳಾದ ಅದಾನಿ, ಜಿಂದಾಲ್, ಮಿತ್ತಲ್, ಅಗರ್ವಾಲ್ ಇನ್ನಿತರರು ಮುಂದಿನ ಕೆಲ ವರ್ಷಗಳಲ್ಲಿ 7.5 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.
ಉದ್ಯಮಿ ಗೌತಮ್ ಅದಾನಿ ಪುತ್ರ ಕರಣ್ ಅದಾನಿ, ವೇದಾಂತ ಗ್ರೂಪ್ನ ಪ್ರತೀಕ್ ಅಗರ್ವಾಲ್, ಜಿಂದಾಲ್ ಗ್ರೂಪ್ನ ಸಜ್ಜನ್ ಜಿಂದಾಲ್, ರಾಜನ್ ಭಾರ್ತಿ ಮಿತ್ತಲ್, ವಿಪೋ›ದ ರಿಷದ್ ಪ್ರೇಮ್ೕ, ವಿಕ್ರಂ ಕಿಲೋಸ್ಕರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಒತ್ತಾಸೆ ಹಾಗೂ ಭರವಸೆಗೆ ಓಗೊಟ್ಟ ಉದ್ಯಮಿಗಳು ಬರೋಬ್ಬರಿ ಏಳೂವರೆ ಲಕ್ಷ ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದ್ದು, ಇದು ದೇಶ ಹಾಗೂ ರಾಜ್ಯದ ಆರ್ಥಿಕತೆಗೆ ಬಹುದೊಡ್ಡ ಚೇತರಿಕೆ ನೀಡುವ ಸಾಧ್ಯತೆ ಇದೆ.
ಸುಮಾರು ಐದು ಲಕ್ಷ ಕೋಟಿ ರೂ.ಗಳ ಹೂಡಿಕೆ ಬರಬಹುದೆಂದು ಸರ್ಕಾರ ಅಂದಾಜಿಸಿತ್ತು. ಆದರೆ ರಾಜ್ಯದ ಸಾಮರ್ಥ್ಯ, ಅವಕಾಶಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳು, ಜಾಗತಿಕ ಬೆಳವಣಿಗೆಗಳಿಂದ ಉದ್ಯಮಿಗಳು ಕರ್ನಾಟಕದತ್ತ ಒಲವು ತೋರುವಂತೆ ಮಾಡಿದೆ. ರಾಜ್ಯದ ಸರ್ಕಾರದ ರತ್ನಗಂಬಳಿ ಹಾಸಿನ ಸ್ವಾಗತವನ್ನು ಹೃದಯ ಪೂರ್ವಕವಾಗಿ ಸ್ವೀಕರಿಸಿ, ಹೂಡಿಕೆಯಲ್ಲಿ ಉದಾರತೆ ತೋರಿದ್ದಾರೆ. ಸಮಾವೇಶದ ಮಹತ್ವಾಕಾಂಕ್ಷಿ ಪರಿಕಲ್ಪನೆಯಾದ ‘ಬಿಲ್ಡ್ ಫಾರ್ ದ ವರ್ಲ್ಡ್’ಗೆ ಅನುಗುಣವಾಗಿ ಉದ್ಯಮಿಗಳು ಎಲ್ಲಾ ವಲಯಗಳಿಗೂ ಆದ್ಯತೆ ನೀಡಿ ಬ್ರಾ್ಯಂಡ್ ಬೆಂಗಳೂರು ಜತೆಗೆ ಬ್ರಾ್ಯಂಡ್ ಕರ್ನಾಟಕವನ್ನು ಜಾಗತಿಕ ಆರ್ಥಿಕ ನಕ್ಷೆಯಲ್ಲಿ ಬಿಂಬಿಸುವಂತಹ ಆಶಾದಾಯಕ ತಿರುವು ನೀಡಿದ್ದಾರೆ. ಕರ್ನಾಟಕ ಎಂದಾಕ್ಷಣ ಐಟಿ, ಬಿಟಿ ಗೋಚರವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ನಾವೀನ್ಯತೆ, ನವೋದ್ಯಮ, ಯೂನಿಕಾರ್ನ್, ಡೆಕಾಕಾರ್ನ್ ಸೇರಿಕೊಂಡಿವೆ.
ಮುಂದಿನ ಇನ್ವೆಸ್ಟ್ ಕರ್ನಾಟಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು 2025ರ ಜನವರಿಯಲ್ಲಿ ನಮ್ಮ ಸರ್ಕಾರ ಪುನಃ ಆಯೋಜಿಸುವ ಸಂಪೂರ್ಣ ವಿಶ್ವಾಸ ಹೊಂದಿದ್ದೇವೆ. | ಬಸವರಾಜ ಬೊಮ್ಮಾಯಿ ಸಿಎಂ
ಅಗ್ರಸ್ಥಾನದಲ್ಲಿ ಕರ್ನಾಟಕ: ಚೀನಾ ಅವಲಂಬಿತ ಉದ್ಯಮಗಳು ಭಾರತದೆಡೆ, ಅದರಲ್ಲೂ ಕರ್ನಾಟಕದತ್ತ ಒಲವು ಹೆಚ್ಚಿಸಿಕೊಂಡಿರುವುದನ್ನು ಸಮಾವೇಶ ಸಾರಿತು. ವೇದಿಕೆಯಲ್ಲಿದ್ದ ಪ್ರತಿಷ್ಠಿತ ಉದ್ಯಮಿಗಳು ಮಾತನಾಡುವ ವೇಳೆ ಕರ್ನಾಟಕದ ಅಗಾಧತೆಯನ್ನು ಹೇಳಿದರು. ಜಾಗತಿಕ ವಿಷಮ ಪರಿಸ್ಥಿತಿಯ ನಡುವೆ ಇಲ್ಲಿನ ಒಟ್ಟು ಪರಿಸ್ಥಿತಿ ಹೊಸ ಆಶಾಕಿರಣವಾಗಿದೆ. ವಿಶ್ವವ್ಯಾಪಿ ಚರ್ಚೆಯಲ್ಲಿರುವ ‘ಚೀನಾ ಪ್ಲಸ್ ಒನ್’ ಚಿಂತನೆಗೆ ಕರ್ನಾಟಕ ಉತ್ತೇಜನ ನೀಡಿದ್ದು, ಸದ್ಯದ ಭವಿಷ್ಯದಲ್ಲಿ ಅಗ್ರಸ್ಥಾನಿಯಾಗಿ ಹೊರ ಹೊಮ್ಮುವ ಲಕ್ಷಣಗಳಿವೆ ಎಂಬ ಸಂದೇಶವನ್ನು ವಿಶ್ವಕ್ಕೆ ರವಾನಿಸಿದರು.
ಪ್ರಧಾನಿ ಭರವಸೆ, ಸಿಎಂ ಖಾತ್ರಿ: ಹೂಡಿಕೆದಾರರ ಸಮಾವೇಶದಲ್ಲಿ ವರ್ಚುವಲ್ ಮೂಲಕ ಉದ್ಘಾಟನಾ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಹೂಡಿಕೆ ಮಾಡಿ ಭಾರತದ ಅಭಿವೃದ್ಧಿಗೆ ಕೈ ಜೋಡಿಸಬೇಕು. ಆ ಮೂಲಕ ಜಗತ್ತಿನ ಜನರ ಬದುಕಿನಲ್ಲಿ ಬದಲಾವಣೆಗೆ ಕಾರಣಕರ್ತರಾಗಬೇಕೆಂದು ಉದ್ಯಮಿಗಳು, ಹೂಡಿಕೆದಾರರಿಗೆ ಪ್ರೇರಣೆ ನೀಡಿದರು. ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರವಿದೆ. ಕೇಂದ್ರ- ರಾಜ್ಯ ಎರಡೂ ಕಡೆ ಒಂದೇ ಪಕ್ಷ ಅಧಿಕಾರದಲ್ಲಿದ್ದು, ಕೇಂದ್ರದ ನೀತಿಗಳು ಇಲ್ಲಿ ಪ್ರತಿಬಿಂಬಿತವಾಗಿ ಅಭಿವೃದ್ಧಿ ವೇಗ ಹೆಚ್ಚಳಕ್ಕೆ ನೆರವಾಗಿದೆ ಎಂದರು. ಕರ್ನಾಟಕದ ಉತ್ತಮ ವಾತಾವರಣ, ನುರಿತ ಮಾನವ ಸಂಪನ್ಮೂಲ, ಪ್ರತಿಭಾವಂತ ಯುವ ಸಂಪತ್ತು, ಉದ್ಯಮ ಸ್ನೇಹಿ ನೀತಿಗಳಿಂದ ಹಲವು ವಲಯಗಳಲ್ಲಿ ಮುಂಚೂಣಿಯಲ್ಲಿದ್ದು, ರಾಜ್ಯಗಳು ಮತ್ತು ಜಾಗತಿಕವಾಗಿ ಹಲವು ರಾಜ್ಯಗಳಿಗೆ ಸವಾಲೊಡ್ಡುವ ರೀತಿ ಬೆಳೆದಿದೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯದಲ್ಲಿ ಬಂಡವಾಳ ಹೂಡುವವರಿಗೆ ಎಲ್ಲ ರೀತಿಯ ಸಹಕಾರ ನೀಡಿ, ಕಾರ್ಯಾಚರಣೆಗೆ ಯಾವುದೇ ಅಡೆತಡೆ ಇಲ್ಲದಂತೆ ನೋಡಿಕೊಳ್ಳುವ ಖಾತ್ರಿ ನೀಡಿದರು. ಈಗ ಮಾಡಿಕೊಂಡಿರುವ ಒಪ್ಪಂದಗಳನ್ನು ಮುಂದಿನ ಮೂರು ತಿಂಗಳೊಳಗೆ ಕಾರ್ಯಗತಗೊಳಿಸುವ ಕಾಲಮಿತಿ ವಿಧಿಸಿಕೊಳ್ಳಲಾಗಿದೆ. 2025ರ ಜನವರಿಯಲ್ಲಿ ಮುಂದಿನ ಹೂಡಿಕೆದಾರರ ಸಮಾವೇಶ ನಡೆಸುತ್ತೇವೆ ಎಂದು ಹೇಳುವ ಮೂಲಕ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.