

ಕಡೂರು: ಭವ್ಯ ಭಾರತದ ಸರ್ವತೋಮುಖ ಪ್ರಗತಿಗೆ ವೈಜ್ಞಾನಿಕ ಅವಿಷ್ಕಾರಗಳೇ ಅಮೂಲ್ಯ ತಳಹದಿ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇ.ಬಸವರಾಜ್ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ಭಾನುವಾರ ಜಿಲ್ಲಾ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಸಂಘಟನೆಯು ಸಾವಿರಾರು ವಿದ್ಯಾರ್ಥಿಗಳಿಗೆ ಹೊಸದನ್ನು ಸಂಶೋಧಿಸುವಂತೆ ಉತ್ತೇಜಿಸುವ ಕೆಲಸ ಮಾಡುತ್ತಿದೆ. ವಿಜ್ಞಾನ ಪ್ರಯೋಗಗಳನ್ನು ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದೆ. ಮೂಢನಂಬಿಕೆ ವಿರುದ್ಧ ಹಲವು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ವಿಜ್ಞಾನದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಎಳೆ ಎಳೆಯಾಗಿ ಹೇಳಿಕೊಡಲಾಗುತ್ತದೆ. ಕಾರ್ಯಕ್ರಮ ಆಯೋಜಿಸುವ ಮೂಲಕ ತಪ್ಪುಗಳನ್ನು ತಿದ್ದುವ ಕೆಲಸವಾಗುತ್ತಿದೆ. ವಿಜ್ಞಾನದ ಪರಿಚಾರಕ ತಂಡ ರಾಜ್ಯದ ಎಲ್ಲ ಭಾಗಗಳಲ್ಲೂ ತನ್ನ ವಿಚಾರಧಾರೆಗಳನ್ನು ಪ್ರಸ್ತುತಪಡಿಸುತ್ತಿದೆ. ಶೈಕ್ಷಣಿಕ ಧ್ಯೇಯೊದ್ದೇಶಗಳನ್ನು ಈಡೇರಿಸುವಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮುಂಚೂಣಿ ಪಾತ್ರ ನಿರ್ವಹಿಸುತ್ತಿದೆ ಎಂದು ಹೇಳಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಮುಗುಳಿಕಟ್ಟೆ ಲೋಕೇಶ್ ಮಾತನಾಡಿ, ಜಿಲ್ಲೆಯಲ್ಲಿ ಸಮಿತಿಯು 11 ವರ್ಷಗಳಿಂದ ಎಲ್ಲ ತಾಲೂಕುಗಳಲ್ಲಿ ವಿಜ್ಞಾನ ಸಂಘಟನೆಯ ಶಿಕ್ಷಕರೊಂದಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ 250 ಶಿಕ್ಷಕರಿಗೆ ಗೌರವ ಪುರಸ್ಕಾರ ಲಭಿಸಿದೆ. ರಾಜ್ಯ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಜಿಲ್ಲೆಯ 6 ಸಾವಿರ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವನೆ ಮೂಡಿಸುವುದರೊಂದಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಆಯ್ದ ಶಾಲೆಗಳಲ್ಲಿ ಪವಾಡ ರಹಸ್ಯ ಬಯಲು, ಮಾರಕ ಮೂಢನಂಬಿಕೆ, ವಿಜ್ಞಾನ ಚಿತ್ರ ಸ್ಪರ್ಧೆ, ವಿಜ್ಞಾನ ವಿಷಯದ ಪ್ರಬಂಧ ಸ್ಪರ್ಧೆ, ವಿಜ್ಞಾನ ರಸಪ್ರಶ್ನೆ, ಗೀತಗಾಯನ ತರಬೇತಿ ಕಾರ್ಯಾಗಾರ ಆಯೋಜಿಸಲಾಗುವುದು ಎಂದು ತಿಳಿಸಿದರು.
ಸಮಿತಿ ಜಿಲ್ಲಾ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ಪದಾಧಿಕಾರಿಗಳಾದ ಜಿ.ಓಂಕಾರಪ್ಪ, ಎನ್.ಎಚ್.ಚಂದ್ರಪ್ಪ, ದೇವರಾಜ್, ನಾಮದೇವರು, ಗವಿರಂಗಪ್ಪ, ಪರಮೇಶ್ವರಪ್ಪ, ಈಶ್ವರಪ್ಪ, ಮಲ್ಲಿಕಾರ್ಜುನ, ಸುಮಾ, ಸತೀಶ್ ಇತರರಿದ್ದರು.