

ಪಂಜಾಬ್: ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಪಟಿಯಾಲ, ಸಂಗ್ರೂರ್ ಮತ್ತು ಫತೇಘರ್ ಸಾಹಿಬ್ ಸೇರಿದಂತೆ ಪಂಜಾಬ್ನ ಕೆಲವು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳ ನಿಷೇಧವನ್ನು ಇದೀಗ ಫೆಬ್ರವರಿ 24ರವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ರೈತರ ‘ದೆಹಲಿ ಚಲೋ’ ಮೆರವಣಿಗೆ ಹಿನ್ನೆಲೆಯಲ್ಲಿ ಫೆಬ್ರವರಿ 12ರಿಂದ 16ರವರೆಗೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಈಗ ವಿಸ್ತರಣೆಯನ್ನು ಫೆ.24ರವರೆಗೂ ಮುಂದುವರೆಸಲು ನಿರ್ಧರಿಸಲಾಗಿದೆ. ಸಚಿವಾಲಯದ ಫೆಬ್ರವರಿ 16ರ ಆದೇಶದ ಪ್ರಕಾರ, ಪಟಿಯಾಲಾದ ಶಂಭು, ಜುಲ್ಕನ್, ಪಾಸಿಯನ್, ಪತ್ರಾನ್, ಶತ್ರನಾ, ಸಮನಾ, ಘನೌರ್, ದೇವಿಗಢ್ ಮತ್ತು ಬಲ್ಭೇರಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ನಿಷೇಧಿಸಲಾಗುವುದು ಎಂದು ತಿಳಿಸಲಾಗಿತ್ತು.
ಈ ಕುರಿತಂತೆ ಪಂಜಾಬ್ ಮುಖ್ಯಮಂತ್ರಿಗಳಾದ ಭಗವಂತ್ ಮಾನ್ ಫೆಬ್ರವರಿ 15ರಂದು ಚಂಡೀಗಢದಲ್ಲಿ ಮೂವರು ಕೇಂದ್ರ ಸಚಿವರು ಮತ್ತು ರೈತ ಮುಖಂಡರ ನಡುವೆ ನಡೆದ ಸಭೆಯಲ್ಲಿ ಆಯ್ದ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ವಿಷಯ ಪ್ರಸ್ತಾಪಿಸಿದ್ದರು. ಇದೇ ರೀತಿ ಹರಿಯಾಣ ಸರ್ಕಾರವು ಕೂಡ ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಎಸ್ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಿದೆ,(ಏಜೆನ್ಸೀಸ್).