ಭಾರತ್ ಶೃಂಗಸಭೆಯಲ್ಲಿ 'ಮತ ಕಳ್ಳ' ಘೋಷಣೆ! ರಾಹುಲ್ ಗಾಂಧಿಗೆ ಬೆಂಬಲ ನೀಡಿ ವಿವಾದಕ್ಕೆ ಸಿಲುಕಿದ Giacomo Filibeck ಯಾರು ಗೊತ್ತಾ..?

ಭಾರತ್ ಶೃಂಗಸಭೆಯಲ್ಲಿ 'ಮತ ಕಳ್ಳ' ಘೋಷಣೆ! ರಾಹುಲ್ ಗಾಂಧಿಗೆ ಬೆಂಬಲ ನೀಡಿ ವಿವಾದಕ್ಕೆ ಸಿಲುಕಿದ Giacomo Filibeck ಯಾರು ಗೊತ್ತಾ..?
Published on: 

Giacomo Filibeck: ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಭಾರತ್ ಶೃಂಗಸಭೆ 2026 (Bharat Summit 2026) ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ವೋಟ್ ಚೋರ್, ಗದ್ದಿ ಚೋಡ್ (ಮತ ಕಳ್ಳ, ಗದ್ದುಗೆ ಬಿಡು) ಎಂದು ಘೋಷಣೆ ಕೂಗುವ ಮೂಲಕ ಇಟಲಿಯ ರಾಜಕಾರಣಿ ಜಿಯಾಕೊಮೊ ಫಿಲಿಬೆಕ್ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಹೊಸ ರಾಜಕೀಯ ಸಂಘರ್ಷದ ಕೇಂದ್ರಬಿಂದುವಾಗಿದ್ದಾರೆ.

ಪಾರ್ಟಿ ಆಫ್ ಯುರೋಪಿಯನ್ ಸೋಷಿಯಲಿಸ್ಟ್ಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಫಿಲಿಬೆಕ್, ಸಮಾವೇಶದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ, ನಾವು ಅದನ್ನು ರಕ್ಷಿಸಬೇಕಾಗಿದೆ. ಅದನ್ನು ರಕ್ಷಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಲ್ಲುವುದು ಅತ್ಯುತ್ತಮ ಮಾರ್ಗವಾಗಿದೆ ಎಂದು ಫಿಲಿಬೆಕ್ ಹೇಳಿದ್ದಾರೆ.

ಇದಷ್ಟೆ ಅಲ್ಲದೆ, ಕಾಂಗ್ರೆಸ್ ಪಕ್ಷದೊಂದಿಗೆ ನಾವು ಪ್ರಗತಿಪರ ಒಕ್ಕೂಟದ ಭಾಗವಾಗಿದ್ದೇವೆ. ಭ್ರಷ್ಟ, ತಿರುಚಿದ ಅಥವಾ ನಕಲಿ ಪ್ರಜಾಪ್ರಭುತ್ವವಲ್ಲದ ನೈಜ ಪ್ರಜಾಪ್ರಭುತ್ವದಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ವೋಟ್ ಚೋರ್, ಗದ್ದಿ ಚೋಡ್ ಎಂದು ಅವರು ಹೇಳಿರುವುದು ಬಿಜೆಪಿಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನರೇಂದ್ರ ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಿದೇಶಿ ಬೆಂಬಲ ಪಡೆಯುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

Also Read
ದೇಶಕ್ಕೆ ಅವಮಾನವಾದಾಗ ನಗ್ತಾರಾ? ಇಟಲಿ ನಾಯಕನ 'ಮತ ಕಳ್ಳ' ಘೋಷಣೆಗೆ ಚಪ್ಪಾಳೆ ತಟ್ಟಿದ ರಾಹುಲ್ ವಿರುದ್ಧ ಬಿಜೆಪಿ, ಬಿಆರ್​ಎಸ್​ ಕಿಡಿ! | Bharat Summit
ಭಾರತ್ ಶೃಂಗಸಭೆಯಲ್ಲಿ 'ಮತ ಕಳ್ಳ' ಘೋಷಣೆ! ರಾಹುಲ್ ಗಾಂಧಿಗೆ ಬೆಂಬಲ ನೀಡಿ ವಿವಾದಕ್ಕೆ ಸಿಲುಕಿದ Giacomo Filibeck ಯಾರು ಗೊತ್ತಾ..?

ಈ ವಿವಾದದ ಬೆನ್ನಲ್ಲೇ, ಭಾರತದ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಈ ಜಿಯಾಕೊಮೊ ಫಿಲಿಬೆಕ್ ಯಾರು ಎಂಬ ಕುತೂಹಲ ಎಲ್ಲೆಡೆ ಮೂಡಿದೆ. ಅವರ ರಾಜಕೀಯ ಮತ್ತು ವೃತ್ತಿಪರ ಹಿನ್ನೆಲೆಯ ಸಂಪೂರ್ಣ ವಿವರ ಇಲ್ಲಿದೆ.

ಜಿಯಾಕೊಮೊ ಫಿಲಿಬೆಕ್ ಹಿನ್ನೆಲೆ!

1978ರಲ್ಲಿ ಇಟಲಿಯಲ್ಲಿ ಜನಿಸಿದ ಜಿಯಾಕೊಮೊ ಫಿಲಿಬೆಕ್, ಯುರೋಪ್‌ನ ಪ್ರಮುಖ ಸಮಾಜವಾದಿ ರಾಜಕಾರಣಿಯಾಗಿದ್ದಾರೆ. ತಮ್ಮ ವೃತ್ತಿಜೀವನದ ಬಹುಪಾಲು ಸಮಯವನ್ನು ಅವರು ಯುವ ಸಂಘಟನೆಗಳು, ರಾಜಕೀಯ ಚಳವಳಿಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ಮೀಸಲಿಟ್ಟಿದ್ದಾರೆ. ಪ್ರಸ್ತುತ ಯುರೋಪ್‌ನ ಪ್ರಮುಖ ರಾಜಕೀಯ ಒಕ್ಕೂಟಗಳಲ್ಲಿ ಒಂದಾದ ಪಾರ್ಟಿ ಆಫ್ ಯುರೋಪಿಯನ್ ಸೋಷಿಯಲಿಸ್ಟ್ಸ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದು, 2023ರಿಂದ ಈ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ.

ಶಾಲಾ ದಿನಗಳಿಂದಲೇ ಯುವ ಸರ್ಕಾರೇತರ ಸಂಸ್ಥೆಗಳಲ್ಲಿ (NGO) ಸಕ್ರಿಯರಾಗಿದ್ದ ಫಿಲಿಬೆಕ್, ನಂತರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ನಾಯಕತ್ವದ ಹುದ್ದೆಗಳನ್ನು ಅಲಂಕರಿಸಿದರು.

2002 - 2004: ಯುರೋಪಿಯನ್ ಯೂತ್ ಫೋರಮ್ ಮತ್ತು ಯೂತ್ ಕನ್ವೆನ್ಷನ್ ಆನ್ ದಿ ಫ್ಯೂಚರ್ ಆಫ್ ಯುರೋಪ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಯುರೋಪಿಯನ್ ಸಾಂವಿಧಾನಿಕ ಒಪ್ಪಂದದ ಕರಡು ರಚನೆ ಕುರಿತ ಚರ್ಚೆಗಳಲ್ಲಿ ವೀಕ್ಷಕರಾಗಿ ಭಾಗವಹಿಸಿದ್ದರು.

2005 - 2009: ಯುರೋಪಿಯನ್ ಸಮಾಜವಾದಿ ರಾಜಕೀಯ ಕುಟುಂಬಕ್ಕೆ ಸಂಬಂಧಿಸಿದ ಯುವ ಸಂಘಟನೆಯಾದ ಯಂಗ್ ಯುರೋಪಿಯನ್ ಸೋಷಿಯಲಿಸ್ಟ್ಸ್ ನ ಅಧ್ಯಕ್ಷರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದರು. ಈ ಸಂಘಟನೆಯ ಪರವಾಗಿ ಅವರು ಪಿಇಎಸ್ ಅಧ್ಯಕ್ಷೀಯ ಮಂಡಳಿಯ ಸದಸ್ಯರೂ ಆಗಿದ್ದರು.

ಯುವ ರಾಜಕಾರಣದ ನಂತರ ಫಿಲಿಬೆಕ್ ಇಟಲಿಯ ಮುಖ್ಯವಾಹಿನಿ ರಾಜಕೀಯದತ್ತ ಮುಖಮಾಡಿ, ದೇಶದ ಮಧ್ಯಮ-ಎಡಪಂಥೀಯ ಪಕ್ಷವಾದ ಪಾರ್ಟಿಟೊ ಡೆಮಾಕ್ರಟಿಕೊ ಜೊತೆ ಗುರುತಿಸಿಕೊಂಡರು.

2010: ಪಕ್ಷದ ಅಂತಾರಾಷ್ಟ್ರೀಯ ವಿಭಾಗಕ್ಕೆ ಸೇರ್ಪಡೆಗೊಂಡು, ಮಧ್ಯಪ್ರಾಚ್ಯ, ಮೆಡಿಟರೇನಿಯನ್ ಪ್ರದೇಶ ಮತ್ತು ಆಫ್ರಿಕಾದ ರಾಜಕೀಯ ಬೆಳವಣಿಗೆಗಳ ಉಸ್ತುವಾರಿ ವಹಿಸಿಕೊಂಡರು.

2013: ಪಾರ್ಟಿಟೊ ಡೆಮಾಕ್ರಟಿಕೊ ಪಕ್ಷದ ವಿದೇಶಾಂಗ ನೀತಿ ವೇದಿಕೆಯ ಅಧ್ಯಕ್ಷರಾಗಿ ನೇಮಕಗೊಂಡು, ವರ್ಷಾಂತ್ಯದವರೆಗೆ ಪಕ್ಷದ ಅಂತಾರಾಷ್ಟ್ರೀಯ ರಾಜಕೀಯ ನಿಲುವುಗಳನ್ನು ನಿರ್ವಹಿಸಿದರು.

2014 - 2015: ಇಟಲಿಯ ಕೃಷಿ ಸಚಿವಾಲಯದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ಮುಖ್ಯಸ್ಥರಾಗಿ ನೇಮಕಗೊಂಡ ಫಿಲಿಬೆಕ್, ನಂತರ ಸಚಿವಾಲಯದ ಅಂತಾರಾಷ್ಟ್ರೀಯ ಸಂಬಂಧಗಳ ಕಚೇರಿಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದರು.

Also Read
ಹೆಸರಿಗೆ ಮಾತ್ರ 'ಭಾರತ್ ಶೃಂಗಸಭೆ', ಮಾಡೋದೆಲ್ಲಾ ದೇಶ ವಿರೋಧಿ ಕೆಲಸ: ರಾಹುಲ್ ವಿರುದ್ಧ ಅಮಿತ್ ಷಾ ಆಕ್ರೋಶ! | Amit Shah
ಭಾರತ್ ಶೃಂಗಸಭೆಯಲ್ಲಿ 'ಮತ ಕಳ್ಳ' ಘೋಷಣೆ! ರಾಹುಲ್ ಗಾಂಧಿಗೆ ಬೆಂಬಲ ನೀಡಿ ವಿವಾದಕ್ಕೆ ಸಿಲುಕಿದ Giacomo Filibeck ಯಾರು ಗೊತ್ತಾ..?

ಪತ್ರಿಕೋದ್ಯಮದ ನಂಟು!

ರಾಜಕಾರಣದ ಜೊತೆಗೆ ಫಿಲಿಬೆಕ್ ಇಟಲಿಯ ವೃತ್ತಿಪರ ಪತ್ರಿಕೋದ್ಯಮ ವಲಯದೊಂದಿಗೂ ನಂಟು ಹೊಂದಿದ್ದಾರೆ. 2009ರಿಂದ ಅವರು ಇಟಲಿಯ ರಾಷ್ಟ್ರೀಯ ವೃತ್ತಿಪರ ಪತ್ರಕರ್ತರ ಸಂಘದ ಸದಸ್ಯರಾಗಿದ್ದಾರೆ. ಶೈಕ್ಷಣಿಕವಾಗಿ ಅವರು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪೂರ್ವ ಪದವಿ ಹಾಗೂ ಪ್ರತಿಷ್ಠಿತ INSEAD ಸಂಸ್ಥೆಯಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಒಂದೆಡೆ, ಪ್ರಜಾಪ್ರಭುತ್ವ ಮತ್ತು ಮತದಾನದ ಪಾರದರ್ಶಕತೆಯಂತಹ ಜಾಗತಿಕ ಮೌಲ್ಯಗಳ ರಕ್ಷಣೆಗಾಗಿ ಸಮಾನ ಮನಸ್ಕ ಅಂತಾರಾಷ್ಟ್ರೀಯ ಒಕ್ಕೂಟಗಳ ಬೆಂಬಲ ಅಗತ್ಯ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಅವರಂತಹ ನಾಯಕರು ಪ್ರತಿಪಾದಿಸಿದ್ದಾರೆ. ಇನ್ನೊಂದೆಡೆ, ದೇಶದ ಆಂತರಿಕ ರಾಜಕೀಯ ವಿಚಾರಗಳಲ್ಲಿ ವಿದೇಶಿ ನಾಯಕರ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು, ಬಿಜೆಪಿ ಹಾಗೂ ಬಿಆರ್‌ಎಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯು ದೇಶದ ಆಂತರಿಕ ರಾಜಕೀಯದಲ್ಲಿ ಅಂತಾರಾಷ್ಟ್ರೀಯ ವೇದಿಕೆಗಳ ಬಳಕೆ ಮತ್ತು ವಿದೇಶಿ ನಾಯಕರ ಪಾತ್ರದ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ(ಏಜೆನ್ಸೀಸ್​).